More

    ದ.ಕ- ಉಡುಪಿಯಲ್ಲಿ ಕೃಷಿ ಚಟುವಟಿಕೆ ಚುರುಕು

    ಭರತ್ ಶೆಟ್ಟಿಗಾರ್ ಮಂಗಳೂರು

    ಕರಾವಳಿಯಲ್ಲಿ ಮುಂಗಾರು ಬಿರುಸುಗೊಳ್ಳುತ್ತಿದ್ದಂತೆ ರೈತರ ಮುಖದಲ್ಲಿ ಮಂದಹಾಸ ಕಂಡುಬಂದಿದ್ದು, ಕೃಷಿ ಚಟುವಟಿಕೆಗಳು ಚುರುಕು ಪಡೆಯುತ್ತಿವೆ. ಮಳೆಗಾಲದಲ್ಲಿ ಪ್ರಮುಖವಾಗಿ ಭತ್ತ ಕೃಷಿಗಾಗಿ ಉಳುಮೆ, ಬೀಜ ಬಿತ್ತನೆ ಕೆಲಸಗಳು ಈಗಾಗಲೇ ಆರಂಭಗೊಂಡಿವೆ.
    ಕಳೆದ ವರ್ಷ ಮುಂಗಾರು ಸಾಕಷ್ಟು ತಡವಾಗಿ ಆರಂಭವಾದ ಕಾರಣ, ಕೃಷಿ ಚಟುವಟಿಕೆಗಳು ವಿಳಂಬವಾಗಿತ್ತು. ಆದರೆ ಈ ಬಾರಿ ನಿಗದಿತ ಅವಧಿಯಲ್ಲೇ ಮುಂಗಾರು ಕರಾವಳಿಗೆ ಆಗಮಿಸಿದ್ದು, ಗ್ರಾಮಾಂತರ ಭಾಗದ ಹಳ್ಳ, ಕೊಳ್ಳ, ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ರೈತರು ನಾಟಿಗಿಂತ ಬಿತ್ತನೆಗೆ ಹೆಚ್ಚಿನ ಒಲವು ತೋರಿಸುತ್ತಿದ್ದು, ಉಳುಮೆ ಮಾಡಿ ಗದ್ದೆಗಳನ್ನು ಹದ ಮಾಡುವ ಕೆಲಸಗಳು ನಡೆಯುತ್ತಿವೆ. ಚಾಪೆ ನೇಜಿ ಮಾಡಿ ನಾಟಿ ಮಾಡುವ ರೈತರು ಈಗಾಗಲೇ ನೇಜಿ ಸಿದ್ಧಪಡಿಸಿಕೊಂಡಿದ್ದಾರೆ.

    46,260 ಹೆಕ್ಟೇರ್ ಗುರಿ: ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಒಟ್ಟು 46,260 ಹೆಕ್ಟೇರ್ ಪ್ರದೇಶಲ್ಲಿ ಭತ್ತ ಬೆಳೆಯುವ ಗುರಿಯಿದೆ. ಈ ಪೈಕಿ ಉಡುಪಿಯಲ್ಲಿ 36 ಸಾವಿರ ಹೆಕ್ಟೇರ್ ಮತ್ತು ದ.ಕ ಜಿಲ್ಲೆಯಲ್ಲಿ 10,260 ಹೆಕ್ಟೇರ್. ದ.ಕ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 15,900 ಹೆಕ್ಟೇರ್ ಪ್ರದೇಶಲ್ಲಿ ಭತ್ತ ಬೆಳೆ ಗುರಿಯಲ್ಲಿ 10,411 ಹೆಕ್ಟೇರ್ ಮಾತ್ರ ಬೆಳೆಯಾಗಿತ್ತು. ಜಿಲ್ಲೆಯಲ್ಲಿ ಗದ್ದೆಗಳು, ಭತ್ತ ಬೆಳೆಯುವ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದ್ದು, ಆದ್ದರಿಂದ ಈ ಬಾರಿಯ ಗುರಿಯೂ ಕಡಿಮೆಯಾಗಿದೆ.

    ಬೀಜ-ರಸಗೊಬ್ಬರ ಪೂರೈಕೆ: ಶೇ.90ರಷ್ಟು ಬಿತ್ತನೆ ಬೀಜವನ್ನು ಈಗಾಗಲೇ ಉಭಯ ಜಿಲ್ಲೆಗಳಲ್ಲಿ ರೈತರಿಗೆ ವಿತರಿಸಲಾಗಿದೆ. ಎಂಒ-4ಗೆ ರೈತರಿಂದ ಹೆಚ್ಚು ಬೇಡಿಕೆಯಿದ್ದು, ಉಳಿದಂತೆ ಜಯ, ಜ್ಯೋತಿ ತಳಿಯೂ ಲಭ್ಯವಿದೆ. ಉಡುಪಿ ಜಿಲ್ಲೆಗೆ 2,573 ಕ್ವಿಂಟಾಲ್ ಬಿತ್ತನೆ ಬೀಜ ಸರಬರಾಜು ಆಗಿದ್ದು, 2545.50 ಕ್ವಿಂಟಾಲ್ ಬೀಜವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗಿದೆ. ದ.ಕ ಜಿಲ್ಲೆಯಲ್ಲಿ 600 ಕ್ವಿಂಟಾಲ್ ಬೀಜ ಬಂದಿದ್ದು, ಇದರಲ್ಲಿ ಶೇ.95ರಷ್ಟು ವಿತರಣೆಯಾಗಿದೆ. ರಸಗೊಬ್ಬರವೂ ಸಾಕಷ್ಟಿದ್ದು, ಉಡುಪಿಗೆ 1577.31 ಟನ್ ಸರಬರಾಜಾಗಿದ್ದು, 1471.5 ಟನ್ ರೈತರಿಗೆ ವಿತರಿಸಲಾಗಿದೆ. ದ.ಕ ಜಿಲ್ಲೆಗೆ 5 ಸಾವಿರ ಟನ್ ರಸಗೊಬ್ಬರ ದಾಸ್ತಾನಿದ್ದು, ರೈತರಿಗೆ ವಿತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಈಗಾಗಲೇ ಭತ್ತದ ಕೃಷಿ ಆರಂಭವಾಗಿದೆ. ಈ ಬಾರಿ ಪೂರ್ವ ಮುಂಗಾರು ಮಳೆ ಉತ್ತಮವಾಗಿದ್ದರಿಂದ ರೈತರು ಗದ್ದೆ ಉತ್ತು ಸಿದ್ಧಪಡಿಸಿದ್ದು, ಮುಂಗಾರು ಆರಂಭವಾಗುತ್ತಿದ್ದಂತೆ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿತ್ತನೆ, ಬೀಜ, ರಸಗೊಬ್ಬರ ವಿತರಣೆ ಕಾರ್ಯವೂ ಭಾಗಶಃ ಪೂರ್ಣಗೊಂಡಿದೆ.
    ಡಾ.ಕೆಂಪೇಗೌಡ ಕೃಷಿ ಇಲಾಖೆ ಜಂಟಿ ನಿರ್ದೇಶಕ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts