More

    ಪ್ರಧಾನಿ ಸಮಾರಂಭದ ಸಿದ್ಧತೆ ಪರಿಶೀಲಿಸಿದ ಸಿಎಂ ಬಿಎಸ್​ವೈ

    ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಮಂಗಳವಾರ ನಗರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಿದ್ಧತೆ ಪರಿಶೀಲಿಸಿದರು.

    ಪ್ರಧಾನಿ ಮೋದಿ 2014ರಲ್ಲಿ ತುಮಕೂರಿಗೆ ಭೇಟಿ ನೀಡಿದ್ದಾಗ ವಿಶ್ವವಿದ್ಯಾಲಯ ಆವರಣದಲ್ಲಿ ನಿರ್ಮಿಸಿದ್ದ 4 ಹೆಲಿಪ್ಯಾಡ್‌ಗಳಿಗೆ ಈಗ ಮತ್ತೆ ಸುಣ್ಣಬಣ್ಣ ಬಳಿದು ಅಣಿಗೊಳಿಸಲಾಗುತ್ತಿದೆ.

    2014ರ ಸೆ.24ರಂದು ಮೋದಿ ಭೇಟಿ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ವಿವಿ ಆವರಣದಲ್ಲಿ ಮೋದಿ ಹೆಲಿಕಾಪ್ಟರ್ ಸೇರಿ ಅವರ ಬೆಂಗಾವಲಿನ 3 ಹೆಲಿಕಾಪ್ಟರ್‌ಗಳು ಇಳಿಯಲು ಒಟ್ಟು 4 ಹೆಲಿಪ್ಯಾಡ್‌ಗಳನ್ನು 19 ಲಕ್ಷ ರೂ., ವೆಚ್ಚದಲ್ಲಿ ನಿರ್ಮಿಸಲಾಗಿತ್ತು.

    ಝಗಮಗಿಸುತ್ತಿರುವ ರಸ್ತೆ !: ಪ್ರಧಾನಿ ಭೇಟಿ ಕಾರಣದಿಂದ ತುಮಕೂರಿನ ಮಧ್ಯಭಾಗದಲ್ಲಿ ಹಾದುಹೋಗಿರುವ ಬಿ.ಎಚ್.ರಸ್ತೆಯನ್ನು ಝಗಮಗಿಸುವಂತೆ ಮಾಡಲಾಗಿದೆ. ವಿವಿ ಹೆಲಿಪ್ಯಾಡ್‌ನಿಂದ ಸಿದ್ಧಗಂಗಾಮಠಕ್ಕೆ ಕಾರಿನಲ್ಲಿ ಮೋದಿ ತೆರಳಲಿದ್ದು, ಅಲ್ಲಿಂದ ಮತ್ತೆ ಭದ್ರಮ್ಮ ವೃತ್ತದ ಬಳಿಯ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದವರೆಗಿನ ರಸ್ತೆಯಲ್ಲಿ ಸಂಚರಿಸುವರು. ಮೋದಿ ಪ್ರಯಾಣಿಸುವ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ಅದರ ಮೇಲೆ ಡಾಂಬರು ಹಾಕುವ ಕಾಮಗಾರಿ ಸಾಗುತ್ತಿದ್ದು, ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಾರ್ವಜನಿಕರು ಆಗಾಗ ಪ್ರಧಾನಿ ಭೇಟಿ ನೀಡಲಿ ಎನ್ನುತ್ತಿದ್ದಾರಲ್ಲದೆ, ಗುಬ್ಬಿಗೇಟ್‌ವರೆಗೆ ಸಂಚರಿಸಿದ್ದರೆ ಅಲ್ಲಿವರೆಗೂ ರಸ್ತೆ ಅಭಿವೃದ್ಧಿಯಾಗುತ್ತಿತ್ತೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಪಿಎಂ ಭೇಟಿಗೆ ಅವಕಾಶ ಕೋರಿ ಮನವಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಿಂಪಡೆಯುವಂತೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಅವಕಾಶ ಕೋರಿ ಹೈಕೋರ್ಟ್ ವಕೀಲ ಎಲ್.ರಮೇಶ್ ನಾಯ್ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದು ಇಲ್ಲವಾದಲ್ಲಿ ಭದ್ರಂವೃತ್ತದ ಬಳಿ ಶಾಂತಿಯುತ ಉಪವಾಸ ಸತ್ಯಾಗ್ರಹಕ್ಕೆ ಅನುವು ಮಾಡಿಕೊಡುವಂತೆ ಕೋರಿದ್ದಾರೆ.

    ಮುಖ್ಯಮಂತ್ರಿ ಭೇಟಿ: ಮಂಗಳವಾರ ನಗರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಾರ್ಯಕ್ರಮ ಸಿದ್ಧತೆ ಪರಿಶೀಲಿಸಿದರು. ಜಿಲ್ಲೆಯ ಪ್ರವಾಸದ ಭಾಗವಾಗಿ ನಗರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಿದ್ಧತೆ ಬಗ್ಗೆ ಮಾಹಿತಿ ಪಡೆದರು.

    ಸಂಪರ್ಕ ರಸ್ತೆ ನಿರ್ಮಾಣ: ವಿವಿ ಆವರಣದಲ್ಲಿ ಅರ್ಧ ಅಡಿ ದಪ್ಪದ ಜಲ್ಲಿ, ಡಾಂಬರು ಹಾಕಿ ಶಾಶ್ವತ ಹೆಲಿಪ್ಯಾಡ್ ನಿರ್ಮಿಸಲಾಗಿದ್ದು, ಜ.2ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಈ ಹೆಲಿಪ್ಯಾಡ್‌ಗಳನ್ನು ಅಂದಗೊಳಿಸಲಾಗುತ್ತಿದೆ. ಹೆಲಿಪ್ಯಾಡ್‌ನಿಂದ ಸಂಪರ್ಕ ರಸ್ತೆ ನಿರ್ಮಾಣವೂ ಭರದಿಂದ ಸಾಗಿದೆ.

    3 ಗಂಟೆಗಳ ಮೋದಿ ಭೇಟಿ: ಸಿದ್ಧಗಂಗಾಮಠ ಭೇಟಿ, ಕೃಷಿ ಸಮ್ಮಾನ್ ಲೋಕಾರ್ಪಣೆ ಸಮಾರಂಭ ಎರಡೂ ಸೇರಿ ಒಟ್ಟು 3 ಗಂಟೆ ಮೋದಿ ತುಮಕೂರಿನಲ್ಲಿ ಇರಲಿದ್ದು ಅಂದು ಬೆಳಗಿನಿಂದಲೇ ಬೆಂಗಳೂರಿನಿಂದ ಬರುವ ಹಾಗೂ ತೆರಳುವ ವಾಹನಗಳ ಸಂಚಾರ ಮಾರ್ಗಗಳನ್ನು ಪೊಲೀಸರು ಬದಲಾವಣೆ ಮಾಡಲಿದ್ದಾರೆ.

    ಜ.2ರಂದು ಮದ್ಯ ಮಾರಾಟ ನಿಷೇಧ: ನಗರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬರುತ್ತಿರುವ ಹಿನ್ನೆಲೆಯಲ್ಲಿ ಜ.2ರಂದು ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರ ವರೆಗೆ ಕೆಎಸ್‌ಬಿಸಿಎಲ್ ಡಿಪೋ ಹೊರತುಪಡಿಸಿ ಪಾಲಿಕೆ ವ್ಯಾಪ್ತಿಯ ಎಲ್ಲ ಮದ್ಯದಂಗಡಿ ಮುಚ್ಚಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಆದೇಶಿಸಿದ್ದಾರೆ.

    ಡ್ರೋಣ್ ಕ್ಯಾಮರಾ ಬಳಕೆಗೆ ಬ್ರೇಕ್: ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಡಿ.30ರ ಸಂಜೆ 6 ರಿಂದ ಜ.2 ಮಧ್ಯರಾತ್ರಿ 12ರವರೆಗೆ ತುಮಕೂರು ನಗರ ಹಾಗೂ ನಗರದ ಹೊರವಲಯದಲ್ಲಿ ಡ್ರೋಣ್ ಕ್ಯಾಮರಾಗಳ ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

    ಮಠಕ್ಕೆ ಭಕ್ತರ ಪ್ರವೇಶ ನಿಷಿದ್ಧ: ಪ್ರಧಾನಿ ಜ.2ರಂದು ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 6 ರಿಂದ ಸಂಜೆ 5ರವರೆಗೆ ಸಿದ್ಧಗಂಗಾಮಠಕ್ಕೆ ಭಕ್ತರು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ. ಖಾಸಗಿ ಕಾರ್ಯಕ್ರಮವಾಗಿರುವುದರಿಂದ ಸಾರ್ವಜನಿಕರು, ಭಕ್ತರು ಸಹಕರಿಸುವಂತೆ ಮಠದ ಆಡಳಿತಾಧಿಕಾರಿ ಎಸ್.ವಿಶ್ವನಾಥಯ್ಯ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರನ್ನು ತುಮಕೂರಿಗೆ ಸ್ವಾಗತಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕೃಷಿ ಸಮ್ಮಾನ್ ಯೋಜನೆ 2ನೇ ಹಂತದ ಲೋಕಾರ್ಪಣೆ ಹಾಗೂ ಕೃಷಿ ಕರ್ಮಣ್ಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದ್ದು 60 ಸಾವಿರ ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ.
    ಡಾ.ಕೆ.ರಾಕೇಶ್ ಕುಮಾರ್ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts