More

    ಸಿದ್ದರಾಮಯ್ಯ ನನಗೆ ಅಷ್ಟೇನು ಪರಿಚಯವಿಲ್ಲ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

    ವೈಯಕ್ತಿಕವಾಗಿ ನನ್ನ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಸಂಬಂಧ ಅಷ್ಟೇನೂ ಚೆನ್ನಾಗಿ ಇರಲಿಲ್ಲ. ಪಕ್ಷದ ಚೌಕಟ್ಟಿನಲ್ಲಿ ಆಗಾಗ ಮಾತನಾಡಿದ್ದೇವೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೆ 2006ರಲ್ಲಿ. ಸಿದ್ದರಾಮಯ್ಯ ನನಗೆ ಅಷ್ಟೇನು ಪರಿಚಯವೂ ಇಲ್ಲ, ಅವರ ಮೇಲೆ ವೈಮನಸ್ಸೂ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ ಹೇಳಿದರು.

    ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಯವರೆಗೆ ಕಾಂಗ್ರೆಸ್ ಸರ್ಕಾರ ಹನಿಮೂನ್ ಪಿರಿಯಡ್​ನಲ್ಲಿ ಇತ್ತು. ಮುಂದೆ ನೈಜವಾಗಿ ಕೆಲಸ ಮಾಡಲು ಹೋದಾಗ ಎಲ್ಲವೂ ಗೊತ್ತಾಗುತ್ತದೆ. ಅಧಿಕಾರಕ್ಕೆ ಬಂದವರು ಜನತೆಯ ಆಶಯಗಳನ್ನು ಈಡೇರಿಸಬೇಕು. ಈಡೇರಿಸಲು ಆಗದಿದ್ದಾಗ ಪಕ್ಷದ ಚೌಕಟ್ಟಿನಲ್ಲಿ ನಾನು ಪ್ರಶ್ನೆ ಮಾಡುತ್ತೇನೆ ಎಂದರು.

    ಕಲೆಕ್ಟಿವ್ ಲೀಡರ್​ಶಿಪ್​ನಲ್ಲಿ ಚುನಾವಣೆ ಮಾಡಿರುವಾಗ ಅಧಿಕಾರಕ್ಕೆ ಬಂದಾಗ ಎಲ್ಲವೂ ಕಲೆಕ್ಟಿವ್ ಆಗಿಯೇ ಆಗಬೇಕು ಎಂಬುದು ನನ್ನ ಅನಿಸಿಕೆ. ಭ್ರಷ್ಟಾಚಾರದ ಬಗ್ಗೆ ಪಕ್ಷದ ಶಾಸಕರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ನಾನು ನನ್ನ ಅಭಿಪ್ರಾಯವನ್ನು ಎಲ್ಲಿ ಹೇಳಬೇಕು ಅಲ್ಲಿ ಹೇಳುತ್ತೇನೆ. ಮಾಧ್ಯಮದ ಮುಂದೆ ಹೇಳುವುದಿಲ್ಲ. ನಾನು ಅಧಿಕಾರದ ಹಿಂದೆ ಹೋದವನಲ್ಲ. ಪಕ್ಷಕ್ಕಾಗಿ ಇಡೀ ದೇಶದಲ್ಲಿ ಕೆಲಸ ಮಾಡಿದವನು. ರಾಜಕೀಯವಾಗಿ ಸಾಮಾಜಿಕ ನ್ಯಾಯ ಕೊಡಿಸಲು ಏನು ಮಾಡಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು.

    ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ವಿವಿಧ ಯೋಜನೆಗಳಿಗೆ ಅನುದಾನವಿಲ್ಲ. ಗ್ಯಾರಂಟಿ ಯೋಜನೆಗಳ ಜಾರಿಗೆ ಹಣ ಬೇಕಾಗಿದೆ. ಮುಂದಿನ ಬಜೆಟ್ ವೇಳೆಗೆ ಎಲ್ಲವೂ ಸರಿ ಹೋಗಬಹುದು ಅಂದುಕೊಂಡಿದ್ದೇನೆ. ರಾಜಸ್ವವನ್ನು ಹೇಗೆ ಸಂಗ್ರಹಿಸುತ್ತಾರೆ ಎಂಬುದರ ಮೇಲೆ ಎಲ್ಲವೂ ಅವಲಂಬಿಸಿರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಬೆಂಗಳೂರಿನಲ್ಲಿ ಇಂದು ಆರ್ಯ-ಈಡಿಗ ಸಮಾವೇಶ ಆಯೋಜಿಸಲಾಗಿತ್ತು. ಮದುವೆಯಲ್ಲಿ ಪಾಲ್ಗೊಳ್ಳಲು ನಾನು ಹುಬ್ಬಳ್ಳಿಯಲ್ಲಿ ಇದ್ದೇನೆ. ಸಮಾವೇಶ ನಡೆಸುವುದು ತಪ್ಪಲ್ಲ. ಸರ್ಕಾರದ ಗಮನ ಸೆಳೆಯಲು ಸಮಾವೇಶ ನಡೆಸಲಾಗುತ್ತದೆ. ಆದರೆ, ರಾಜಕೀಯವಾಗಿ ದುರುಪಯೋಗ ಮಾಡಿಕೊಳ್ಳಬಾರದು. ಛಿದ್ರ ಛಿದ್ರವಾಗಿರುವ ಈ ಸಮಾಜ (ಈಡಿಗ)ದಲ್ಲಿ ಅಂಥ ಪ್ರಯತ್ನಗಳು ಆಗಲೇ ಬಾರದು. ಈಡಿಗ ಸಮಾಜದಲ್ಲಿ ಒಡಕು ಉಂಟು ಮಾಡಲಾಗಿದೆ. ಯಾರೂ ಮಾಡಿದ್ದಾರೆ ಎಂದು ನಾನು ಹೇಳಲು ಹೋಗುವುದಿಲ್ಲ. ಒಗ್ಗಟ್ಟು ಮೂಡಿಸಬೇಕಾದರೆ ಸಮಾಜದ ಅಲ್ಲ ಸ್ವಾಮೀಜಿಗಳನ್ನು ಸೇರಿ ಸಮಾವೇಶ ಮಾಡಬೇಕಿತ್ತು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts