More

    ಮುಂದಿನ ಸಚಿವ ಸಂಪುಟ ಸಭೆ ಬಳಿಕ ಜನರಿಗೆ ‘ಗ್ಯಾರಂಟಿ’; ಸಿಎಂ ಸಿದ್ದರಾಮಯ್ಯ ಘೋಷಣೆ

    ಬೆಂಗಳೂರು: ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಐದು ಪ್ರಮುಖ ಭರವಸೆಗಳಿಗೆ ಮೊದಲ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದು, ವಿಸ್ತೃತವಾಗಿ ಯೋಜನೆ ರೂಪಿಸಿದ ನಂತರ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಜಾರಿಗೆ ತರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

    ಮೊದಲ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 200 ಯೂನಿಟ್ ವಿದ್ಯುತ್, ಮನೆ ಒಡತಿಗೆ 2,000 ರೂ, ಯುವ ನಿಧಿಯಡಿ ಪದವೀಧರರಿಗೆ ಮಾಸಿಕ 3,000 ರೂ, ಡಿಪ್ಲೊಮಾ ವ್ಯಾಸಂಗ ಮಾಡಿದವರಿಗೆ 1,500 ರೂ, ಮಹಿಳೆಯರಿಗೆ ಉಚಿತ ಬಸ್ ಪಾಸ್ ಭರವಸೆ ಈಡೇರಿಸಲು ಸರ್ಕಾರ ಬದ್ಧವಾಗಿದೆ. ಯಾವುದೇ ಸಾಲದ ಸುಳಿಗೆ ಸಿಲುಕದೆ ಭರವಸೆ ಈಡೇರಿಸುತ್ತೇವ ಎಂದು ಸಿದ್ದರಾಮಯ್ಯ ಹೇಳಿದರು. 

    ರಾಜ್ಯದ ಜನರಿಗೆ ಧನ್ಯವಾದ ಸಲ್ಲಿಸಿದ ಸಿಎಂ

    ನಮ್ಮ ಸರ್ಕಾರ ರಚನೆ ಮೇಲೆ ಇದು ಮೊದಲ ಸುದ್ದಿಗೋಷ್ಠಿ. ನಾನು, ಡಿಕೆ ಶಿವಕುಮಾರ್, 8 ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದೇವೆ. ಕಾರ್ಯಕ್ರಮಕ್ಕೆ ಬೇರೆ ರಾಜ್ಯಗಳ ಸಿಎಂಗಳು, ವಿಪಕ್ಷ ನಾಯಕರು ಬಂದಿದ್ದರು. ಬಿಜೆಪಿಯೇತರ ಪಕ್ಷಗಳ ಅಧ್ಯಕ್ಷರು ಬಂದು ಶುಭಕೋರಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್​, ಸುರ್ಜೇವಾಲ ಶುಭ ಕೋರಿದ್ದಾರೆ. ನಾವು ಸಹ ರಾಜ್ಯದ ಜನರಿಗೆ ಧನ್ಯವಾದ ಸಲ್ಲಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

    ಒಂದೇ ವರ್ಷದಲ್ಲಿ ಎಲ್ಲ ಯೋಜನೆ ಜಾರಿಗೊಳಿಸಲು ಸಾಧ್ಯವಿಲ್ಲ

    ಚುನಾವಣಾ ಪ್ರಣಾಳಿಕೆ ಸಂದರ್ಭದಲ್ಲಿ ಅನೇಕ ಭರವಸೆಗಳನ್ನು ನೀಡಿದ್ದೆವು. ಅದರಲ್ಲೂ ನಾವು ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದೆವು. ಪ್ರಣಾಳಿಕೆಯಲ್ಲಿದ್ದ ಎಲ್ಲಾ ಯೋಜನೆಗಳನ್ನು ಒಂದೇ ವರ್ಷದಲ್ಲಿ ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ. ಪ್ರಮುಖ ಘೋಷಣೆಗಳನ್ನು ಮೊದಲ ಸಂಪುಟ ಸಭೆಯಲ್ಲಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದೆವು. ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಹಿಂದಿನ ಬಾರಿ 158 ಭರವಸೆ ಈಡೇರಿಸುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೆವು. ಅಲ್ಲದೆ ಮೂವತ್ತು ಹೆಚ್ಚುವರಿ ಯೋಜನೆ ಜಾರಿಗೊಳಿಸಿದ್ದೆವು. ನಮ್ಮ ಮೇಲೆ ಜನರಿಗೆ ವಿಶ್ವಾಸ ಇದೆ. ವಿರೋಧ ಪಕ್ಷಗಳು ಜನರನ್ನು ತಪ್ಪು ದಾರಿಗೆ ಏಳೆತಾ ಇದ್ದರು. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರೆ ಆರ್ಥಿಕ ಸಂಕಷ್ಟ ಆಗುತ್ತದೆ ಎಂದು ಪ್ರಧಾನಿ, ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದರು ಎಂದು ಸಿದ್ದರಾಮಯ್ಯ ಕಿಡಿಕಾರಿದರು.

    ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯ

    ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಲು 50 ಸಾವಿರ ಕೋಟಿ ರೂಪಾಯಿ ಬೇಕು. ರಾಜ್ಯದ ಬಜೆಟ್ 3 ಲಕ್ಷ 10 ಸಾವಿರ ಕೋಟಿ ರೂಪಾಯಿ ಇದೆ. ಪ್ರತಿ ವರ್ಷ 10% ಹೆಚ್ಚಾಗುವ ಮೂಲಕ ಬಜೆಟ್ ಗಾತ್ರ ಹೆಚ್ಚಾಗುತ್ತಿದೆ. ತೆರಿಗೆ ವಸೂಲಿಯಿಂದ ಆದಾಯ ಹೆಚ್ಚುತ್ತದೆ. ಪೆಟ್ರೋಲ್, ಡಿಸೇಲ್, ಅಬಕಾರಿ, ಸ್ಟಾಂಪ್, ಸೇರಿದಂತೆ ಅನೇಕ ಆದಾಯ ರಾಜ್ಯದ ಬೊಕ್ಕಸಕ್ಕೆ ಬರುತ್ತದೆ. 15 ಫೈನಾನ್ಸ್ ಕಮಿಷನ್ ಪ್ರಕಾರ 50 ಸಾವಿರ ಕೋಟಿ ರೂ. ಬರುತ್ತದೆ. ನನ್ನ ಪ್ರಕಾರ 1 ‌ಲಕ್ಷ ಕೋಟಿ ರೂ. ಬರಬೇಕು. ಕೇಂದ್ರದಿಂದ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಆಗಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮಗೆ ಕೇಂದ್ರದಿಂದ ಬರುವ ಹಣ ಕಡಿಮೆ ಆಗಿದೆ. ವಾರ್ಷಿಕವಾಗಿ ಕರ್ನಾಟಕ 4 ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತೇವೆ. ಆದರೂ ಸರಿಯಾದ ಪ್ರಮಾಣದಲ್ಲಿ ರಿಟರ್ನ್ಸ್ ನಮಗೆ ಬರುವುದಿಲ್ಲ. 15 ಫೈನಾನ್ಸ್ ಕಮಿಷ್​​ ಮೂಲಕ ರಾಜ್ಯಕ್ಕೆ ಅನುದಾನ 5497 ಕೋಟಿ ರೂ. ಬರಬೇಕಿತ್ತು. ಆದರೆ ಆ ವಿಶೇಷ ಅನುಧಾನ ತೆಗೆದುಕೊಳ್ಳಲಿಲ್ಲ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts