More

    ಪವರ್ ಶೇರಿಂಗ್ ಚರ್ಚೆಗೆ ಲಕ್ಷ್ಮಣರೇಖೆ ಎಳೆದ ಸಿಎಂ

    ಬೆಂಗಳೂರು: ಮುಖ್ಯಮಂತ್ರಿ ಹುದ್ದೆಯ ಹಂಚಿಕೆ ಕುರಿತು ಸರ್ಕಾರ ರಚನೆಯಾದ ಆರಂಭದಿಂದಲೂ ಇರುವ ಕುತೂಹಲಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಬಾರಿಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ.
    ಹಾಗೆಯೇ, ಪಕ್ಷ ಹಾಗೂ ಸರ್ಕಾರದ ಕುರಿತು ಯಾರೂ ಸಹ ಬಹಿರಂಗ ಪ್ರತಿಕ್ರಿಯೆ ನೀಡಬಾರದೆಂಬ ಹೈಕಮಾಂಡ್ ಎಚ್ಚರಿಕೆ ನಡುವೆ ಮುಖ್ಯಮಂತ್ರಿಯವರ ಅಭಿಪ್ರಾಯ ಅವರ ಪಕ್ಷದಲ್ಲಿ ಹೊಸದೊಂದು ಕಿಡಿ ಹೊತ್ತಿಸಿದೆ.
    ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಐದು ವರ್ಷ ನಮ್ಮದೇ ಸರ್ಕಾರ. ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುವೆ ಎಂದು ಖಚಿತ ಶಬ್ದಗಳಲ್ಲಿ ಹೇಳಿದರು. ಈ ಮೂಲಕ ಪವರ್ ಶೇರಿಂಗ್ ಕುರಿತ ಚರ್ಚೆಗೆ ಸಿದ್ದರಾಮಯ್ಯ ಲಕ್ಷಣ ರೇಖೆ ಎಳೆದಿದ್ದಾರೆ.
    ಇದೇ ವೇಳೆ ಉಪ ಮುಖ್ಯಮಂತ್ರಿ ಹಾಗೂ ಸಿಎಂ ರೇಸ್‌ನಲ್ಲಿರುವ ಡಿ.ಕೆ ಶಿವಕುಮಾರ್ ಕೂಡ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಾತನಾಡುವವರು ಮಾತನಾಡಲಿ. ಯಾರು ಯಾರು ಏನು ಮಾತನಾಡಿದ್ದಾರೋ, ಕೇಳಿಕೊಂಡು ಹೋಗುತ್ತೇವೆ. ಪಕ್ಷ ಏನು ಹೇಳುತ್ತದೋ ಅದನ್ನು ಕೇಳಿಕೊಂಡು ಹೋಗುವುದಷ್ಟೇ ಗೊತ್ತು. ಅದು ಬಿಟ್ಟು ಬೇರೆ ಗೊತ್ತಿಲ್ಲ ಎಂದಷ್ಟೇ ಹೇಳಿ ಹೊರಟು ನಿಂತರು. ಒಕ್ಕಲಿಗರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಾಪಸಾಗುವಾಗ ಈ ಪ್ರತಿಕ್ರಿಯೆ ನೀಡಿದರು.
    ಇದೇ ವೇಳೆ ಡಿಸಿಎಂ ಬೆಂಬಲಿಗ ಶಾಸಕ, ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಒಂದೂವರೆ ವರ್ಷದ ಬಳಿಕ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಅವರು ಮುಖ್ಯಮಂತ್ರಿ ಆಗಬೇಕು ಅನ್ನುವುದು ನಮ್ಮ ಆಸೆ. ಅವರು ಪಕ್ಷದ ಅಧ್ಯಕ್ಷರಾಗಿ ಸಂಘಟನೆ ಮಾಡಿದ್ದಾರೆ ಎಂದರು.
    ರಾಜ್ಯದಲ್ಲಿ ಶಕ್ತಿಮೀರಿ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಅವರಿಗೆ ಅವಕಾಶ ಸಿಗಲೇಬೇಕು, ಜನರು ಕೂಡ ಅದನ್ನೇ ಬಯಸಿದ್ದಾರೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
    ವಿಧಾನಸಭೆ ಚುನಾವಣೆ ಬಳಿಕ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕಸರತ್ತಿನ ವೇಳೆ ದೆಹಲಿಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಒಂದು ಒಡಂಬಡಿಕೆಯಾಗಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಸಭೆಯಲ್ಲಿ ನಿರ್ಣಯ ಆಗಿದ್ದರೂ ಅಲ್ಲಿನ ಇತರೆ ಚರ್ಚೆಗಳು ಬಹಿರಂಗವಾಗಿರಲಿಲ್ಲ.
    ಸಿದ್ದರಾಮಯ್ಯ- ಡಿ.ಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಯಾಗಿದೆ ಎಂಬ ಚರ್ಚೆ ಪಕ್ಷದಲ್ಲಿತ್ತು. ಆ ಚರ್ಚೆ ನಿರಂತರವಾಗಿ ನಡೆದೇ ಇತ್ತು. ಲೋಕಸಭೆ ಚುನಾವಣೆ ಬಳಿಕ ಮುಖ್ಯ ಮಂತ್ರಿ ಬದಲಾಗುತ್ತಾರೆ, ಸಂಪುಟ ಪುನಾರಚನೆಯಾಗಲಿದೆ ಎಂಬ ಚರ್ಚೆ ಇತ್ತೀಚೆಗೆ ಹೆಚ್ಚಾಗಿತ್ತು.
    ಈ ನಡುವೆ ಹೈಕಮಾಂಡ್ ನೀಡಿರುವ ಸೂಚನೆ ಚಿಕ್ಕವರಿಂದ ಹಿಡಿದು ದೊಡ್ಡ ನಾಯಕರವರೆಗೆ ಅನ್ವಯವಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts