More

    ಗುತ್ತಿಗೆದಾರರ ಬಳಿ 102 ಕೋಟಿ ರೂ; ಸಿಎಂ, ಡಿಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ

    ಬೆಂಗಳೂರು:
    ಐಟಿ ದಾಳಿಯಲ್ಲಿ ಗುತ್ತಿಗೆದಾರರ ಬಳಿ ಸಿಕ್ಕಿದ 102 ಕೋಟಿ ರೂ ಹಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸಿಎಂ ಮತ್ತು ಡಿಸಿಎಂ ರಾಜೀನಾಮೆ ನೀಡುವಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆಗ್ರಹಿಸಿದರು.
    ಸುದ್ದಿಗಾರರೊಂದಿಗೆ ಮಾತನಾಡಿ, ದಾಳಿಯಲ್ಲಿ ಸಿಕ್ಕ ಈ ಹಣ ಯಾರದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಬಹಿರಂಗಪಡಿಸಬೇಕು ಎಂದರು.
    ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರಿಬ್ಬರು ಬಂದಿದ್ದಾರೆ. ಇವರು ಬಂದ ತಕ್ಷಣವೇ ನಾಡಿನ ಜನರು ಕಾಂಗ್ರೆಸ್ ಪಕ್ಷಕ್ಕೆ ಗುರಿ ನಿಶ್ಚಯ ಮಾಡಲು ಅವರು ಬಂದಿದ್ದಾರೆಂದು ಮಾತನಾಡಿಕೊಳ್ಳುವಂತಾಗಿದೆ ಎಂದರು.
    ಗುತ್ತಿಗೆದಾರರ ಮನೆಗಳಲ್ಲಿ ಸಿಕ್ಕ 102 ಕೋಟಿ ರೂ. ಕಾಂಗ್ರೆಸ್ಸಿನದೇ ಹಣ, ಸಿಎಂ, ಡಿಸಿಎಂ ಅವರೇ ಸಂಗ್ರಹಿಸಿದ ಹಣ, ಅದನ್ನು ಪಂಚರಾಜ್ಯಗಳ ಚುನಾವಣೆಗೆ ಸಂಗ್ರಹಿಸಿ ಕಳಿಸಲು ಇಡಲಾಗಿತ್ತು ಎನ್ನುವುದು ಜಗಜ್ಜಾಹೀರಾಗಿದೆ ಎಂದರು.
    ಕನ್ನಡದ ಜಲ, ನೆಲ, ಭಾಷೆಯನ್ನು ರಕ್ಷಿಸಲು ಈ ಸರ್ಕಾರಕ್ಕೆ ಬದ್ಧತೆಯಿಲ್ಲ. ತಮಿಳುನಾಡಿಗೆ 2600 ಕ್ಯೂಸೆಕ್ ನೀರನ್ನು ಪ್ರತಿದಿನ ಬಿಡಲಾಗುತ್ತಿದೆ. ಸುಪ್ರೀಂ ಕೋರ್ಟ್, ಪ್ರಾಧಿಕಾರದ ಮುಂದೆ ಯಾಕೆ ನೀರು ಬಿಡಲು ಅಸಾಧ್ಯ ಎಂದು ಸಮರ್ಪಕ ವಾದ ಮಂಡಿಸಲು ಸರ್ಕಾರಕ್ಕೆ ಆಗುತ್ತಿಲ್ಲ ಎಂದರು.
    ಡಿ.ಕೆ.ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಮಾಡಿದ್ದರು. ಈಗ ಮಾತನಾಡುತ್ತಿಲ್ಲ ಯಾಕೆ? ತಮಿಳುನಾಡು ಒಪ್ಪಿಗೆ ಕೊಡಬೇಕೆಂಬ ಯೋಚನೆಯಿಂದ ಈಗ ಸಿಎಂ, ಡಿಸಿಎಂ ತೆಪ್ಪಗೆ ಇದ್ದಾರೆ ಎಂದು ಟೀಕಿಸಿದರು.
    ಸಚಿವ ಸ್ಥಾನ ಸಿಗದೆ ಬೇಸರ ವ್ಯಕ್ತಪಡಿಸುವವರನ್ನು ಸಮಾಧಾನ ಪಡಿಸಲು ನಿಗಮ, ಮಂಡಳಿ ನೇಮಕಕ್ಕೆ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಬಂದಿದ್ದಾರೆ. ಬಹುಶಃ ನಿಗಮಗಳಿಗೆ ಇಷ್ಟು ಎಂದು ಗುರಿ ನಿಗಧಿಪಡಿಸಬಹುದು ಏನೋ ಎಂದು ಛೇಡಿಸಿದರು.
    ಸರ್ಕಾರದಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಇದನ್ನು ಶಮನ ಮಾಡಲು ಡಿ.ಕೆ.ಶಿವಕುಮಾರರು ಬೆಳಗಾವಿಗೆ ಹೋಗುತ್ತಾರೆ. ಸಿಎಂ ಸಿದ್ದರಾಮಯ್ಯ ಅವರು, ಗೃಹ ಸಚಿವ ಪರಮೇಶ್ವರರ ಮನೆಗೆ ಹೋಗುತ್ತಾರೆ ಎಂದು ಉದಾಹರಿಸಿದರು.
    ಈ ಸರ್ಕಾರ ಯಾವಾಗ ಏನು ಬೇಕಾದರೂ ಆಗಬಹುದೇನೋ ಎಂದು ರಮೇಶ ಜಾರಕಿಹೊಳಿ ಅವರು ಹೇಳಿದ್ದು ಸತ್ಯವಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಿಬ್ಬರು ಇಲ್ಲಿಗೆ ಬಂದಿರುವುದು ಎಲ್ಲ ಘಟನೆಗಳಿಗೆ ಇಂಬು ಕೊಡುವಂತಿದೆ ಎಂದರು.
    ಬೆಳಗಾವಿ, ಚಿಕ್ಕೋಡಿ ಕರ್ನಾಟಕದ ಅವಿಭಾಜ್ಯ ಅಂಗ. ಕರ್ನಾಟಕವನ್ನು ಭಾಗ ಮಾಡುವ ಪ್ರಶ್ನೆಯೇ ಇಲ್ಲ. ಇದು ದಶಕಗಳ ಹಿಂದೆಯೇ ನಿರ್ಧಾರವಾದ ವಿಚಾರ ಎಂದರು.
    ಮಹಾರಾಷ್ಟ್ರದವರ ಲಾಭಕ್ಕಾಗಿ ಆಗಿಂದಾಗ್ಗೆ ಗಲಾಟೆ ಮಾಡುತ್ತಾರೆ. ಬಸ್ ಸುಡುತ್ತಾರೆ. ಗಡಿ ಮೀರಿ ನಮ್ಮ ರಾಜ್ಯದ ಒಳಗಡೆ ಪ್ರವೇಶಿಸುತ್ತಾರೆ. ಈ ನಿಟ್ಟಿನಲ್ಲಿ ಪೊಲೀಸರು ತೆಗೆದುಕೊಂಡ ಕ್ರಮವನ್ನು ನಾವು ಸ್ವಾಗತಿಸುತ್ತೇವೆ ಎಂದು ರವಿಕುಮಾರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts