More

    ಪಾಕ್ ಪರ ಘೋಷಣೆ ಕೂಗಿದಾಕೆಗೆ ನಕ್ಸಲ್ ನಂಟು: ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?

    ಬೆಂಗಳೂರು: ಫ್ರೀಡಂ ಪಾರ್ಕಿನಲ್ಲಿ ಗುರುವಾರ ನಡೆದ ಸಿಎಎ ವಿರೋಧಿ ಸಮಾವೇಶದಲ್ಲಿ ಪಾಕ್ ಪರ ಘೋಷಣೆ ಕೂಗಿದ ಯುವತಿ ಅಮೂಲ್ಯ ಲಿಯೋನಾಗೆ ನಕ್ಸಲ್ ನಂಟು, ದೇಶ ವಿರೋಧಿಗಳ ಜತೆಗೆ ಸಂಪರ್ಕ ಈಗ ಬಹುಚರ್ಚಿತ ವಿಚಾರ.

    ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ ಆಕೆಯ ವಿರುದ್ಧ ರಾಷ್ಟ್ರದ್ರೋಹದ ಆರೋಪದಡಿ ಎಫ್​ಐಆರ್ ದಾಖಲಿಸಿದ್ದು, ಕೋರ್ಟ್​ಗೆ ಹಾಜರುಪಡಿಸಿದ್ದರು. ಆಕೆಗೆ 14 ನ್ಯಾಯಾಂಗ ಬಂಧನ ವಿಧಿಸಿದೆ. ಇದರ ಬೆನ್ನಲ್ಲೇ, ಸಾಕಷ್ಟು ಬೆಳವಣಿಗೆಗಳಾಗಿದ್ದು, ಆಕೆಯ ಜತೆಗಾರರು ಒಬ್ಬೊಬ್ಬರಾಗಿ ಈಗ ಬಯಲಿಗೆ ಬರಲಾರಂಭಿಸಿದ್ದಾರೆ.

    ಹಿಂದೂ ಮುಸ್ಲಿಂ ಸಿಖ್ ಈಸಾಯಿ ಫೆಡರೇಷನ್ ಬೆಂಗಳೂರು ಸಂಘಟನೆ ಸಂವಿಧಾನ ಉಳಿಸಿ ಎಂಬ ಬ್ಯಾನರ್ ಅಡಿ ಆಯೋಜಿಸಿದ್ದ ಸಮಾವೇಶದಲ್ಲಿ ಅಮೂಲ್ಯಾ ಲಿಯೋನಾ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಳು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಆಲ್ ಇಂಡಿಯಾ ಮಜ್ಲಿಸ್​-ಏ-ಇತ್ತೇಹಾದುಲ್ ಮುಸ್ಲೀಮಿನ್​ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡಾ ಉಪಸ್ಥಿತರಿದ್ದರು. ಈ ಪ್ರಕರಣದ ಬಳಿಕ ಎಲ್ಲರೂ ಆಕೆಯ ಹೇಳಿಕೆಯನ್ನು ವಿರೋಧಿಸಿದ್ದರು. ಸ್ವತಃ ಆಕೆಯ ತಂದೆ ವಾಜಿಯೇ ಆಕೆ ಮಾಡಿದ್ದು, ಹೇಳಿದ್ದು ಎರಡೂ ಸರಿಯಲ್ಲ ಎಂದು ಹೇಳಿದ್ದರು.

    ಈ ಪ್ರಕರಣಕ್ಕೆ ಸಂಬಂಧಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಪ್ರತಿಕ್ರಿಯಿಸಿದ್ದು, ಪಾಕ್ ಪರ ಘೋಷಣೆ ಕೂಗಿದ ಯುವತಿಗೆ ಈ ಹಿಂದೆ ನಕ್ಸಲ್ ನಂಟು ಇತ್ತು. ಎಲ್ಲದಕ್ಕೂ ಮಿಗಲಾಗಿ ಈ ಅಮೂಲ್ಯಾಳಂತಹ ಜನರ ಹಿಂದಿರುವ ಸಂಘಟನೆಗಳನ್ನು, ಅವುಗಳನ್ನು ಪೋಷಿಸುತ್ತಿರುವವರನ್ನು ಪತ್ತೆ ಹಚ್ಚಬೇಕು. ಒಂದೊಮ್ಮೆ ಅಂಥವುಗಳ ವಿರುದ್ಧ ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳದೇ ಹೋದರೆ, ಇಂತಹ ಪ್ರಕರಣಗಳು ಮುಂದುವರಿಯುತ್ತಲೇ ಇರುತ್ತವೆ ಎಂದು ಹೇಳಿದರು.

    ಅಲ್ಲದೆ, ಕಾನೂನು ಮತ್ತು ಸುವ್ಯವಸ್ಥೆ ಹದಗೆಡಿಸುವ ಇಂತಹ ಪ್ರಕರಣಗಳ ಹಿಂದೆ ಪಿತೂರಿ ಇರುವುದು ಸ್ಪಷ್ಟ. ಇದು ಮೇಲ್ನೋಟಕ್ಕೂ ಸಾಬೀತಾಗಿದೆ. ನಕ್ಸಲ್ ನಂಟು ಮತ್ತು ಈಗಿನ ಪ್ರಕರಣ ಎಲ್ಲವೂ ಸೇರಿ ಆಕೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಆಕೆಯ ಹಿಂದಿರುವ ಸಂಘಟನೆಗಳ ಮೇಲೂ ಕ್ರಮ ಜರುಗಿಸುತ್ತೇವೆ. ತಂದೆಯೇ ಆಕೆಯನ್ನು ಶಿಕ್ಷಿಸಬೇಕು ಎಂದು ಹೇಳಿರುವಾಗ, ಅವರು ಮಗಳನ್ನು ರಕ್ಷಿಸಲು ಖಂಡಿತ ಬರಲಾರರು. ಅವರಿಗೂ ಆಕೆಯ ರಾಷ್ಟ್ರ ದ್ರೋಹದ ಕೆಲಸ ಅರ್ಥವಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts