More

    ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಬಿಎಸ್‌ವೈ ಕೊಡುಗೆ ಅಪಾರ – ಮಹಾಂತೇಶ ಕವಟಗಿಮಠ

    ಬೆಳಗಾವಿ: ನೆರೆ, ಅತಿವೃಷ್ಟಿ ಮತ್ತು ಕರೊನಾ ಸಂಕಷ್ಟ ಕಾಲದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದ ಜನತೆಗೆ ವಿಶೇಷ ಆಡಳಿತ ನೀಡಿ ಮೆಚ್ಚುಗೆಗೆ ಪಾತ್ರವಾಗಿದೆ. ಕರೊನಾ ಹಾವಳಿ ತಗ್ಗಿದ ನಂತರ ಅಭಿವೃದ್ಧಿ ಪರ್ವಕ್ಕೆ ರಾಜ್ಯ ಸಾಕ್ಷಿಯಾಗಲಿದೆ ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದ್ದಾರೆ.

    ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆ ಯಲ್ಲಿ ‘ವಿಜಯವಾಣಿ’ ಜತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಕರೊನಾ ನಿಯಂತ್ರಣಕ್ಕಾಗಿ ಯಡಿಯೂರಪ್ಪ ಅವರು ತಮ್ಮ ತಂಡದೊಂದಿಗೆ 24್ಡ7 ಮಾದರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲೂ ರಾಜ್ಯದ ಜನತೆಯ ಆಶೋತ್ತರಗಳಿಗೆ ಅವರು ಸ್ಪಂದಿಸಲಿದ್ದಾರೆ ಎಂದು ಹೇಳಿದರು.

    ರಾಜ್ಯದ ಪ್ರತಿ ಪ್ರಜೆಯ ರಕ್ಷಣೆಯ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಅನೇಕ ಸಭೆ ನಡೆಸಿ, ಸಲಹೆ-ಸೂಚನೆ ನೀಡುತ್ತಿದ್ದಾರೆ. ಕೋವಿಡ್-19 ಹಿಮ್ಮೆಟ್ಟಿಸುವಲ್ಲಿ ಅತ್ಯಂತ ಯಶಸ್ವಿ ಕಾರ್ಯಯೋಜನೆ ಪೂರೈಸಿದ ಮುಖ್ಯಮಂತ್ರಿ ಅವರಾಗಿದ್ದಾರೆ. ಅವರ ಕಾರ್ಯವೈಖರಿ ನಮ್ಮೆಲ್ಲರಿಗೆ ಆದರ್ಶಪ್ರಾಯವಾಗಿದೆ ಎಂದರು.

    ಸಂತ್ರಸ್ತರ ಕೈಹಿಡಿದ ಸರ್ಕಾರ: ಕಳೆದ ವರ್ಷ ಕರ್ನಾಟಕ, ಅದರಲ್ಲೂ ಉತ್ತರ ಕರ್ನಾಟಕ ಭಾಗವು ನೆರೆ, ಅತಿವೃಷ್ಟಿಯಿಂದ ನಲುಗಿ ಹೋಗಿತ್ತು. ಆಗ ಸಂತ್ರಸ್ತರ ಕೈಹಿಡಿದ ಸರ್ಕಾರ, ಪ್ರತಿ ಕುಟುಂಬಕ್ಕೆ ತಲಾ 10 ಸಾವಿರ ರೂ. ತಾತ್ಕಾಲಿಕ ಪರಿಹಾರ ನೀಡಿದೆ. ಹಾನಿಯಾದ ಮನೆಗಳಿಗೆ 50 ಸಾವಿರ ದಿಂದ 5 ಲಕ್ಷ ರೂ. ವರೆಗೆ ಪರಿಹಾರ ನೀಡಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ ಜಿಲ್ಲೆಗಳಲ್ಲಿ ಸಂತ್ರಸ್ತರ ನೆರವಿಗೆ ಬಂದಿದೆ.

    ಕೇಂದ್ರ ಗೃಹ ಮತ್ತು ಹಣಕಾಸು ಸಚಿವರನ್ನು ರಾಜ್ಯಕ್ಕೆ ಆಹ್ವಾನಿಸಿ, ಇಲ್ಲಿನ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟು ಹೆಚ್ಚಿನ ಪರಿಹಾರ ಬಿಡುಗಡೆಗೊಳಿಸುವಲ್ಲಿ ಯಡಿಯೂರಪ್ಪ ಶ್ರಮಿಸಿದ್ದಾರೆ. ನೆರೆಯಿಂದ ತತ್ತರಿಸಿದ್ದ ಜನರಿಗೆ ಮತ್ತೆ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ. ಅಲ್ಲದೆ, ಅಧಿಕಾರಕ್ಕೆ ಬಂದ 24 ತಾಸುಗಳಲ್ಲೇ ಕಿಸಾನ್ ಸಮ್ಮಾನ್ ಯೋಜನೆ ೋಷಿಸಿ ತಾವು ರೈತಪರವಾಗಿ ಇದ್ದೇವೆ ಎಂಬ ಸಂದೇಶ ನೀಡಿದ್ದಾರೆ. ವಿಧಾನಸಭೆ ಉಪಚುನಾವಣೆಯಲ್ಲಿ ವಿಪಕ್ಷಗಳನ್ನು ಅತ್ಯಂತ ಯಶಸ್ವಿಯಾಗಿ ಹಿಂದಕ್ಕೆ ತಳ್ಳಿ, ಸುಭದ್ರ ಸರ್ಕಾರಕ್ಕೆ ಮುನ್ನುಡಿ ಬರೆದಿದ್ದಾರೆ ಎಂದರು.

    ಸ್ಥಳೀಯ ಆಡಳಿತಕ್ಕೆ ಹೆಚ್ಚಿನ ಅಧಿಕಾರ ನೀಡಿದರೆ ಅಭಿವೃದ್ಧಿ: ಗ್ರಾಮೀಣ ಭಾಗದ ಜನರ ಬದುಕು ಕಟ್ಟುವುದೇ ಮಹಾತ್ಮ ಗಾಂಧೀಜಿ ಕನಸಾಗಿತ್ತು. ಆ ಕನಸು ನನಸಾಗಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳಿಗೆ ನೇರವಾಗಿ ಅಧಿಕಾರ ನೀಡಬೇಕು ಎಂಬುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸದಾಶಯವಾಗಿದೆ. ಸ್ಥಳೀಯ ಆಡಳಿತ ಗಟ್ಟಿಗೊಂಡಾಗ ಮಾತ್ರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಬಹುದು ಎಂದು ಕವಟಗಿಮಠ ಅಭಿಪ್ರಾಯಪಟ್ಟಿದ್ದಾರೆ. ಕರೊನಾ ಸಂಕಷ್ಟ ಕಾಲದಲ್ಲೂ ಗ್ರಾಮ ಪಂಚಾಯಿತಿಗಳು ಕ್ರಿಯಾಶೀಲವಾಗಿ ಕೆಲಸ ಮಾಡಿವೆ.

    ಉದ್ಯೋಗ ಖಾತ್ರಿ ಯೋಜನೆಯಡಿ ಬದುಗಳ ನಿರ್ಮಾಣ, ಹೆಚ್ಚಿನ ಮಾನವ ದಿನಗಳ ಸೃಜನೆಗೆ ಒತ್ತು ನೀಡಿವೆ. ಹಿರಿಯ ಅಧಿಕಾರಿಗಳು, ಸಿಬ್ಬಂದಿ ಉದ್ಯೋಗ ಖಾತ್ರಿ ಯೋಜನೆ ಯಶಸ್ವಿಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಗ್ರಾಮ ಪಂಚಾಯಿತಿಗಳ ಪಡೆಗಳು ಕರೊನಾ ಸೇನಾನಿಗಳಾಗಿ ಕೆಲಸ ಮಾಡಿರುವುದು ಹೆಮ್ಮೆ ತಂದಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts