More

    ರಾಜ್ಯದಲ್ಲಿ ಮತ್ತೆ ಒಂದು ವಾರ ಲಾಕ್​ಡೌನ್​ ವಿಸ್ತರಣೆ: ಸಿಎಂ ಬಿಎಸ್​ವೈ ಘೋಷಣೆ

    ಬೆಂಗಳೂರು: ರಾಜ್ಯದಲ್ಲಿ ಮತ್ತೆ ಒಂದು ವಾರ ಲಾಕ್​ಡೌನ್​ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಗುರುವಾರ ಸಂಜೆ ಆದೇಶ ಹೊರಡಿಸಿದ್ದಾರೆ. ಈ ಮೊದಲು ಜೂನ್​ 7ರವರೆಗೆ ಇದ್ದ ಲಾಕ್​ಡೌನ್​ ಇದೀಗ ಜೂನ್​ 14ರವರೆಗೂ ಮುಂದುವರಿದಿದೆ.

    ಲಾಕ್​ಡೌನ್​ ವಿಸ್ತರಣೆ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಸಿಎಂ ಬಿಎಸ್​ವೈ, ತಜ್ಞರ ಸಲಹೆ ಆಧಾರದ ಮೇಲೆ ಮುಂದುವರಿಸಲಾಗಿದೆ ಎಂದು ತಿಳಿಸಿದರು. ನಗರ ಪ್ರದೇಶಗಳಲ್ಲಿ ಕರೊನಾ ವೈರಸ್​ ನಿಯಂತ್ರಣಕ್ಕೆ ಬಂದಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಕರೊನಾ ವೈರಸ್​ ಹೆಚ್ಚಾಗಿರುವುದರಿಂದ ಲಾಕ್​ಡೌನ್​ ವಿಸ್ತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದರೆ ಲಾಕ್​ಡೌನ್​ ತೆರವುಗೊಳಿಸುವ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ತಿಳಿಸಿದರು.

    ಇದೇ ವೇಳೆ ಎರಡನೇ ಪ್ಯಾಕೇಜ್​ ಘೋಷಣೆ ಮಾಡಿದ ಸಿಎಂ ಬಿಎಸ್​ವೈ, ನೇಕಾರರಿಗೆ ತಲಾ ಮೂರು ಸಾವಿರ ರೂಪಾಯಿ ಹಣದ ನೆರವು ನೀಡುವುದಾಗಿ ಘೋಷಿಸಿದರು. ಇದಕ್ಕಾಗಿ 39 ಕೋಟಿ ರೂ. ಮೀಸಲಿಡಲಾಗಿದ್ದು, 59 ಸಾವಿರ ನೇಕಾರರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಚಲನಚಿತ್ರ ನೋಂದಾಯಿತ ಕಾರ್ಮಿಕರಿಗೆ ಹಾಗೂ ನೋಂದಾಯಿತ ಮೀನುಗಾರರಿಗೆ ಮತ್ತು ಮುಜರಾಯಿ ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ತಲಾ 3 ಸಾವಿರ ರೂ. ನೆರವು ಘೋಷಣೆ ಮಾಡಿದರು.

    ಆಶಾ ಕಾರ್ಯಕರ್ತರಿಗೆ ತಲಾ ಮೂರು ಸಾವಿರ ರೂ. ಹಾಗೂ ಅಂಗನವಾಡಿ ಸಹಾಯಕರಿಗೆ ತಲಾ ಎರಡು ಸಾವಿರ ರೂ. ನೆರವು ಘೋಷಿಸಲಾಗಿದೆ. ಅನುದಾನಿತ ಶಿಕ್ಷಕರಿಗೆ ತಲಾ ಐದು ಸಾವಿರ ರೂ. ಘೋಷಣೆ ಮಾಡಲಾಗಿದೆ. ಒಟ್ಟಾರೆ 500 ಕೋಟಿ ರೂ. ವಿಶೇಷ ಪ್ಯಾಕೇಜ್​ ಅನ್ನು ಸಿಎಂ ಬಿಎಸ್​ವೈ ಘೋಷಣೆ ಮಾಡಿದ್ದಾರೆ.

    ಹಾಲು ಪುಡಿ ತಯಾರಿಕೆಗೆ ಸಿಎಂ ಸೂಚನೆ ನೀಡಿದ್ದು, ಇದರಿಂದ ಸರ್ಕಾರಕ್ಕೆ ನೂರು ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಮಾಹಿತಿ ನೀಡಿದರು. ಉಳಿದಂತೆ ಅನ್​ಲಾಕ್​ ಪ್ರಕ್ರಿಯೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸುತ್ತೇವೆಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts