More

    ಅಸಮರ್ಥ ಸಿಎಂ ಬೊಮ್ಮಾಯಿ; ಕಾಂಗ್ರೆಸ್ ಟೀಕಾಪ್ರಹಾರ

    ತುಮಕೂರು: ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಕ್ಯಾತಸಂದ್ರದ ‘ರಜತಾದ್ರಿ’ ನಿವಾಸವು ಸೋಮವಾರ ಜಿಲ್ಲಾ ಕಾಂಗ್ರೆಸ್‌ನ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿತ್ತು.

    ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಸ್ಕ್ರೀನಿಂಗ್ ಕಮಿಟಿ ಸದಸ್ಯ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಜಿಲ್ಲೆಯ ರಾಜಕೀಯ ಬೆಳವಣಿಗೆಗಳ ಕುರಿತು ಮಹತ್ವದ ಚರ್ಚೆ ನಡೆಯಿತು.

    ಕಡುಭ್ರಷ್ಟ ಸರ್ಕಾರ: ಸಿಎಂ ಬಸವರಾಜ ಬೊಮ್ಮಾಯಿ ದೇಶ ಕಂಡ ಅತ್ಯಂತ ಅಸಮರ್ಥ ಮುಖ್ಯಮಂತ್ರಿ. 75 ವರ್ಷಗಳ ಇತಿಹಾಸದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಕಡುಭ್ರಷ್ಟ ಸರ್ಕಾರ ಎಂದು ಸುರ್ಜೇವಾಲಾ ಹರಿಹಾಯ್ದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ದುರ್ಬಲ, ಕೆಟ್ಟ ಆಡಳಿತಗಾರ ಎನಿಸಿದ್ದು, ಆಡಳಿತಯಂತ್ರ ಸಂಪೂರ್ಣ ಕುಸಿದಿದೆ. ಐಎಎಸ್-ಐಪಿಎಸ್ ಅಧಿಕಾರಿಗಳು ಬೀದಿಯಲ್ಲಿ ಜಗಳವಾಡುತ್ತಿದ್ದಾರೆ. ಸಚಿವರ ನಡುವೆ ಕಾದಾಟ, ಸಿಎಂ ವಿರುದ್ಧವೇ ರಾಜ್ಯಪಾಲರಿಗೆ ಸಂಪುಟ ಸಹದ್ಯೋಗಿಗಳು ದೂರು ನೀಡಿದ್ದಾರೆ. ಸಿಎಂ ಮಾತನ್ನು ಯಾರೂ ಕೇಳುವ ಪರಿಸ್ಥಿತಿ ಇಲ್ಲಿಲ್ಲ. ರಾಜ್ಯದಲ್ಲಿ ಸರ್ಕಾರ ಇದೆ ಅನ್ನುವ ಭಾವನೆ ಇಲ್ಲವಾಗಿದ್ದು ಇಂತಹ ಕೆಟ್ಟ ಸರ್ಕಾರವನ್ನು ಬೇರು ಸಮೇತ ಕಿತ್ತೊಗೆಯಬೇಕಿದೆ ಎಂದರು.

    ಜೆಡಿಎಸ್ ಉಚ್ಛಾಟಿತ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಮಾಜಿ ಶಾಸಕ ಎಚ್.ನಿಂಗಪ್ಪ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕರಾದ ಡಾ.ಎಚ್.ಡಿ.ರಂಗನಾಥ್, ಆರ್,ರಾಜೇಂದ್ರ, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ಬೆಮೆಲ್ ಕಾಂತರಾಜು, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿಹುಲಿಕುಂಟೆಮಠ್ ಇದ್ದರು.

    ಹೂಗುಚ್ಛ ಸ್ವೀಕರಿಸದ ಪರಂ! ಮಾಜಿ ಡಿಸಿಎಂ, ಸ್ಕ್ರೀನಿಂಗ್ ಕಮಿಟಿ ಸದಸ್ಯ ಡಾ.ಜಿ.ಪರಮೇಶ್ವರ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮುನಿಸು ಕಡಿಮೆ ಆದಂತೆ ಕಾಣಲಿಲ್ಲ. ಸುರ್ಜೇವಾಲಾ ನೇತೃತ್ವದಲ್ಲಿ ರಾಜಣ್ಣ ನಿವಾಸದಲ್ಲಿ ಏರ್ಪಡಿಸಿದ್ದ ಔಪಚಾರಿಕ ಸಭೆಗೆ ಸುರ್ಜೇವಾಲಾ ಜತೆ ಒಂದೇ ಕಾರಿನಲ್ಲಿ ಬಂದಿಳಿದ ಪರಮೇಶ್ವರಗೆ ಹೂಗುಚ್ಛ ನೀಡಿ ಕೆಎನ್ನಾರ್ ಆಪ್ತ ಗಂಗಣ್ಣ ಸ್ವಾಗತಿಸಲು ಮುಂದಾದರು. ಈ ವೇಳೆ ಪರಂ ಹೂಗುಚ್ಛ ಸ್ವೀಕರಿಸಲಿಲ್ಲ. ಎರಡು ಮೂರು ಬಾರಿ ಬೊಕ್ಕೆ ಕೊಡಲು ಪ್ರಯತ್ನಿಸಿದರೂ ಸ್ವೀಕರಿಸಲಿಲ್ಲ.

    ಮನೆ ಮನೆಗೆ ಗ್ಯಾರಂಟಿ ಕಾರ್ಡ್: ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆಗಳನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅನುಷ್ಠಾನಕ್ಕೆ ತರುವ ಸ್ಪಷ್ಟ ಭರವಸೆಯ ಗ್ಯಾರಂಟಿ ಕಾರ್ಡ್ ಅನ್ನು ಪ್ರತಿ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಹಾಲಿ, ಮಾಜಿ ಶಾಸಕರು, ಬ್ಲಾಕ್ ಕಾಂಗ್ರೆಸ್, ಜಿಲ್ಲಾಧ್ಯಕ್ಷರು ಸೇರಿ ಇವರನ್ನೆಲ್ಲಾ ಒಳಗೊಂಡ ತಂಡ ಕೆಲಸ ಮಾಡಲಿದೆ. ಮುಂದಿನ 7 ದಿನ ಈ ಅಭಿಯಾನ ಹಮ್ಮಿಕೊಂಡಿದ್ದೇವೆ. ಜಾತಿ, ಮತ ಯಾವುದೇ ಸಿದ್ಧಾಂತಕ್ಕೆ ಮಣೆ ಹಾಕದೆ, ಎಲ್ಲ ವರ್ಗದವರಿಗೆ ಈ ಯೋಜನೆ ಕೊಡುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಸುರ್ಜೇವಾಲಾ ಹೇಳಿದರು.

    ಕೆಟ್ಟ ಸರ್ಕಾರ: ಬೊಮ್ಮಾಯಿ ಸರ್ಕಾರ ಬೀದಿ ಜಗಳಕ್ಕೆ ಇಳಿದಿದೆ. ಬೊಮ್ಮಾಯಿ ಸರ್ಕಾರವನ್ನು ‘ಬ್ಯಾಡ್’ ಎಂದು ವ್ಯಂಗ್ಯವಾಡಿದ ಸುರ್ಜೇವಾಲ, ಭರವಸೆಗಳನ್ನು ಮುರಿದ ಸರ್ಕಾರ, ಅಸಮರ್ಥ ಆಡಳಿತ, ಒಡೆದು ಆಳುವ ನೀತಿ ಅನುಸರಿಸುವ ಸರ್ಕಾರ ಇದು. ಭ್ರಷ್ಟಾಚಾರದಲ್ಲಿ ಬಿಜೆಪಿ ಸರ್ಕಾರ ಗ್ರ್ಯಾಂಡ್ ಆಗಿದೆ. ಜನರ ಭರವಸೆ ಹಾಗೂ ನಂಬಿಕೆಯನ್ನೇ ಸಾಯಿಸಿದ್ದಾರೆ. ಭ್ರಷ್ಟಾಸೂರ ಬೊಮ್ಮಾಯಿ ಸರ್ಕಾರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಗಳ ಸುರಿಮಳೆಗೈದರು.

    20 ಟಿಎಂಕೆ ಕಾಂಗ್ರೆಸ್ ಮೀಟಿಂಗ್: ತುಮಕೂರಿನ ಮಾಜಿ ಶಾಸಕ ಕೆ.ಎನ್.ರಾಜಣ್ಣ ನಿವಾಸದಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಜಿಲ್ಲೆಯ ಮುಖಂಡರ ಔಪಚಾರಿಕ ಸಭೆ ನಡೆಯಿತು. ಜಿ.ಪರಮೇಶ್ವರ, ಮಯೂರ ಜಯಕುಮಾರ್, ಟಿ.ಬಿ.ಜಯಚಂದ್ರ, ಬಿ.ಎನ್.ಚಂದ್ರಪ್ಪ, ಎಸ್.ಆರ್.ಶ್ರೀನಿವಾಸ್, ಎಚ್.ನಿಂಗಪ್ಪ, ಬೆಮೆಲ್ ಕಾಂತರಾಜು, ಕೆ.ಎನ್.ರಾಜಣ್ಣ, ಡಾ.ಎಚ್.ಡಿ.ರಂಗನಾಥ್ ಇದ್ದರು.

    ಟಿಕೆಟ್‌ಗೆ ಆಕಾಂಕ್ಷಿಗಳ ದುಂಬಾಲು

    *ತುಮಕೂರಿನಲ್ಲಿ ಕಾಂಗ್ರೆಸ್ ಮಹತ್ವದ ಸಭೆ *ಕೈ ಪಾಳಯದಲ್ಲಿ ವಾಸು, ಕೆಎಸ್‌ಕೆ, ನಿಂಗಪ್ಪ *‘ಕಾಂಗ್ರೆಸ್ ಗ್ಯಾರಂಟಿ’ಗೆ ನೀಲಿನಕ್ಷೆ

    ತುಮಕೂರು: ಟಿಕೆಟ್ ಹಂಚಿಕೆಯ ಕಸರತ್ತು ಆರಂಭಿಸಿರುವ ಕಾಂಗ್ರೆಸ್ ತುಮಕೂರಿನಲ್ಲಿ ಸೋಮವಾರ ಮಹತ್ವದ ಸಭೆ ನಡೆಸಿದ್ದು, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಕೂಡ ಕೈ ಪಾಳಯದಲ್ಲಿ ಅಧಿಕೃತವಾಗಿ ಕಾಣಿಸಿಕೊಂಡು ಪಕ್ಷ ಸೇರ್ಪಡೆ ದೃಢಪಡಿಸಿದರು.

    ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೇವಾಲ ಜತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರ ನಿವಾಸದಲ್ಲಿ ವಾಸಣ್ಣ ಕಾಣಿಸಿಕೊಂಡರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಶಾಸಕರಾದ ಕೆ.ಎಸ್.ಕಿರಣ್‌ಕುಮಾರ್ ಹಾಗೂ ಎಚ್.ನಿಂಗಪ್ಪ ಕೂಡ ಕಾಂಗ್ರೆಸ್ ಸೇರ್ಪಡೆಯಾದರು.

    ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ ತೊರೆದ ನಂತರ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯದ ಮತ ಬ್ಯಾಂಕ್‌ನಲ್ಲಿ ಆಗಿರುವ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿರುವ ಕಾಂಗ್ರೆಸ್ ನಾಯಕರು ಅದೇ ಸಮುದಾಯದ ಎಸ್.ಆರ್.ಶ್ರೀನಿವಾಸ್ ಹಾಗೂ ಎಚ್.ನಿಂಗಪ್ಪ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಬಿಎಂಎಲ್ ಕಾಂತರಾಜು ತುರುವೇಕೆರೆಯಲ್ಲಿ ಓಡಾಡುತ್ತಿದ್ದು, ಕನಿಷ್ಠ 4 ಕ್ಷೇತ್ರದಲ್ಲಿ ಕೈ ಟಿಕೆಟ್ ಒಕ್ಕಲಿಗರ ಪಾಲಾಗಲಿದೆ.

    ಲಿಂಗಾಯತ ಸಾದರ ಸಮುದಾಯದ ಕೆ.ಎಸ್.ಕಿರಣ್‌ಕುಮಾರ್ ಸೇರ್ಪಡೆಯಿಂದ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಸಿಕ್ಕಂತಾಯಿತು. ತಿಪಟೂರು ಜತೆಗೆ ಚಿಕ್ಕನಾಯಕನಹಳ್ಳಿಯಲ್ಲಿಯೂ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ಕೊಟ್ಟು ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಲು ವೇದಿಕೆ ಸಿದ್ಧವಾಯಿತು.

    ಸೋಮವಾರ ಬೆಳಗ್ಗೆ ನಗರದ ಖಾಸಗಿ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ 2018ರ ಚುನಾವಣೆಯಲ್ಲಿ ಪರಾಜಿತರಾದ ಅಭ್ಯರ್ಥಿಗಳು, ಈ ಚುನಾವಣೆಯಲ್ಲಿ ಟಿಕೆಟ್ ಬಯಸಿರುವ ಆಕಾಂಕ್ಷಿಗಳು ಹಾಗೂ ಮುಂಚೂಣಿ ಘಟಕದ ಪದಾಧಿಕಾರಿಗಳ ಜತೆ ರಣದೀಪಸಿಂಗ್ ಸುರ್ಜೇವಾಲ ಮಾತುಕತೆ ನಡೆಸಿದರು.

    ಟಿಕೆಟ್ ಆಕಾಂಕ್ಷಿಗಳು ಸಭೆಯಲ್ಲಿ ಲಾಬಿ ನಡೆಸಲು ಸಿದ್ಧತೆ ನಡೆಸಿದ್ದರಾದರೂ ಚುನಾವಣಾ ಪ್ರಣಾಳಿಕೆ ಹಾಗೂ ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮದ ಬಗ್ಗೆ ಮಾತ್ರ ಸಭೆಯಲ್ಲಿ ಚರ್ಚೆ ನಡೆದಿದ್ದು ಟಿಕೆಟ್ ಹಂಚಿಕೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎನ್ನಲಾಗಿದೆ.

    ಕೆಪಿಸಿಸಿ ನಿದ್ದೆಗೆಡಿಸಿದ ‘ಪರಮ’ ಮೌನ: ಜಿಲ್ಲೆಯಲ್ಲಿ ಪೈಪೋಟಿ ಇರುವ ಕ್ಷೇತ್ರಗಳ ಟಿಕೆಟ್ ಹಂಚಿಕೆಯಲ್ಲಿ ಡಾ.ಜಿ.ಪರಮೇಶ್ವರ ಅವರ ತೀರ್ಮಾನವೇ ಅಂತಿಮವಾಗಿರಲಿದೆ ಎಂದು ಸುರ್ಜೇವಾಲ ಆಕಾಂಕ್ಷಿಗಳಿಗೆ ತಿಳಿಸಿದ್ದು ಎಲ್ಲರೂ ಪರಮೇಶ್ವರಗೆ ದುಂಬಾಲು ಬೀಳಲಾರಂಭಿಸಿದ್ದಾರೆ. ಆದರೆ, ಟಿಕೆಟ್ ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಜಿಲ್ಲೆಯ ಪಾಲಿನ ಹೈಕಮಾಂಡ್ ಡಾ.ಜಿ.ಪರಮೇಶ್ವರ ಈವರೆಗೂ ಅಭಿಪ್ರಾಯ ಹೇಳದಿರುವುದು ಕೆಪಿಸಿಸಿ ನೆಮ್ಮದಿ ಕೆಡಿಸಿದೆ.

    ಕೆಳ ಹಂತದ ಸಭೆಗಳಲ್ಲಿ ಹೆಸರು ಅಂತಿಮವಾಗಲಾರದು ಎಂಬ ರಾಜಕೀಯ ಅರಿವಿರುವ ಪರಮೇಶ್ವರ ದೆಹಲಿಯಲ್ಲಿ ನಡೆಯುವ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಷ್ಟೇ ಅಭಿಪ್ರಾಯ ತಿಳಿಸುವ ರಾಜಕೀಯ ಪ್ರಬುದ್ಧತೆ ಪ್ರದರ್ಶಿಸಲು ಮುಗುಮ್ಮಾಗಿದ್ದಾರೆ. ಸಕಲ ಸಂಪನ್ಮೂಲ ಬಳಸಿ ಚಿತ್ರದುರ್ಗದಲ್ಲಿ ಎಸ್‌ಸಿ, ಎಸ್‌ಟಿ ಸಮಾವೇಶ ಯಶಸ್ವಿಗೊಳಿಸಿರುವ ಡಾ.ಪರಮೇಶ್ವರ ಅವರನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ ಎಂಬ ಅರಿವಿರುವ ಕೆಪಿಸಿಸಿ ಕೂಡ ಕನಿಷ್ಠ ತುಮಕೂರು ಜಿಲ್ಲೆಯ ಸೀಟುಗಳನ್ನಾದರೂ ಅವರ ಆಯ್ಕೆಗೆ ಬಿಡುವ ಸಾಧ್ಯತೆ ದಟ್ಟವಾಗಿವೆ.
    11 ಕ್ಷೇತ್ರದ ಅಭ್ಯರ್ಥಿಗಳ ಹೆಸರು ದೆಹಲಿಗೆ!: ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿಯೂ ಟಿಕೆಟ್ ಫೈನಲ್ ಹಂತದಲ್ಲಿದ್ದು, ಈ ಬಗ್ಗೆ ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆದುಕೊಳ್ಳಲಿದ್ದಾರೆ. ಫೆ.24ರಿಂದ 26ರವರೆಗೆ ಛತ್ತೀಸಘಡ ರಾಯಪುರದಲ್ಲಿ ಎಐಸಿಸಿ ರಾಷ್ಟ್ರೀಯ ಅಧಿವೇಶನ ನಡೆಯಲಿದೆ. ಇದರ ನಂತರ ಕೇಂದ್ರ ಚುನಾವಣಾ ಸಮಿತಿ ಸಭೆ ಕೂಡ ನಡೆಯಲಿದ್ದು ಆ ನಂತರವಷ್ಟೇ ಟಿಕೆಟ್ ಘೋಷಣೆಯಾಗಲಿದೆ. ತುಮಕೂರು ನಗರ ಮುಸ್ಲಿಂ ಅಭ್ಯರ್ಥಿ, ತುಮಕೂರು ಗ್ರಾಮಾಂತರ ಸೂರ್ಯಮುಕುಂದರಾಜ್/ಎಚ್.ನಿಂಗಪ್ಪ, ತುರುವೇಕೆರೆ ಬೆಮಲ್ ಕಾಂತರಾಜು, ತಿಪಟೂರು ಕೆ.ಷಡಕ್ಷರಿ/ಟೂಡಾ ಶಶಿಧರ್, ಚಿಕ್ಕನಾಯಕನಹಳ್ಳಿ ಕೆ.ಎಸ್.ಕಿರಣ್‌ಕುಮಾರ್, ಗುಬ್ಬಿ ಎಸ್.ಆರ್.ಶ್ರೀನಿವಾಸ್, ಶಿರಾ ಟಿ.ಬಿ.ಜಯಚಂದ್ರ/ಡಾ.ಸಾಸಲು ಸತೀಶ್, ಕೊರಟಗೆರೆ ಡಾ.ಜಿ.ಪರಮೇಶ್ವರ, ಮಧುಗಿರಿ ಕೆ.ಎನ್.ರಾಜಣ್ಣ, ಪಾವಗಡ ವೆಂಕಟರಮಣಪ್ಪ/ಎಚ್.ವಿ.ವೆಂಕಟೇಶ್ ಹೆಸರು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಗೆ ರವಾನೆಯಾಗಿದೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts