More

    ರೈತರ ಕಷ್ಟಗಳನ್ನು ಹತ್ತಿರದಿಂದ ಕಂಡ ಸಿಎಂ: ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಬೆಳೆ ಹಾನಿ ವೀಕ್ಷಣೆ, ಪರಿಹಾರದ ಭರವಸೆ

    ಕೋಲಾರ: ಜಿಲ್ಲಾದ್ಯಂತ ಸುರಿದ ವರ್ಷಧಾರೆಗೆ ಆಗಿರುವ ಬೆಳೆಹಾನಿಯ ವೀಕ್ಷಣೆಗೆ ಸೋಮವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಹಾಗೂ ತೋಟಗಾರಿಗೆ ಬೆಳೆಗಳ ತೋಟಗಳಿಗೆ ತೆರಳಿ ನಷ್ಟದ ಸಾಕ್ಷಾತ್ ದರ್ಶನ ಪಡೆದರು.

    ತಾಲೂಕಿನ ನರಸಾಪುರಕ್ಕೆ ಮಧ್ಯಾಹ್ನ 12.30ರ ವೇಳೆಗೆ ಆಗಮಿಸಿದ ಮುಖ್ಯಮಂತ್ರಿಗಳು ನಂತರ ಚೌಡದೇನಹಳ್ಳಿ, ಕಲ್ವಮಂಜಲಿ ಮುಂತಾದ ಗ್ರಾಮದಲ್ಲಿನ ರೈತರ ಜಮೀನುಗಳಿಗೆ, ತೋಟಗಳಿಗೆ ಭೇಟಿ ನೀಡಿ ಕಷ್ಟವನ್ನು ಹತ್ತಿರದಿಂದಲೇ ನೋಡಿದರು.

    ನರಸಾಪುರದ ಎಸ್. ಮಂಜುನಾಥ್ ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ರಾಗಿ ಹೊಲದಲ್ಲಿ ಪೈರಿನಲ್ಲೇ ಕಾಳು ಮೊಳಕೆ ಒಡದಿರುವುದು, ತೊಗರಿ, ಸಾಸಿವೆ ಬೆಳೆ ನಷ್ಟವಾಗಿರುವುದನ್ನು ವೀಕ್ಷಿಸಿದ ಸಿಎಂ ಮುಂಗಾರು ಬೆಳೆ ನಷ್ಟವಾಗಿರುವುದರಿಂದ ಪರ‌್ಯಾಯವಾಗಿ ಏನು ಬೆಳೆ ಬೆಳೆಯಬಹುದೆಂದು ಅಧಿಕಾರಿಗಳನ್ನು ಪ್ರಶ್ನಿಸಿದರಲ್ಲದೆ ಕಂಟೆಜೆನ್ಸಿ ಪ್ಲಾನ್ ರೆಡಿ ಮಾಡಿ , ಅವಶ್ಯವಿರುವ ಬೀಜ, ಗೊಬ್ಬರಕ್ಕೆ ವ್ಯವಸ್ಥೆ ಮಾಡುತ್ತೇವೆ. ಕನಿಷ್ಠ ರೈತನಿಗೆ ಒಂದು ಬೆಳೆಯಾದರೂ ಬರುವಂತೆ ಯೋಜನೆ ರೂಪಿಸಿ ಎಂದರು.

    ಮಳೆಗಾಲದಲ್ಲಿ ಎರಡನೇ ಬೆಳೆ ಬೆಳೆಯಲಾಗದು. ಹೆಸರು, ಉದ್ದು, ಹುರುಳಿ ಬೆಳೆಯಬಹುದಷ್ಟೇ ಎಂದು ಕೃಷಿ ನಿರ್ದೇಶಕಿ ವಿ.ಡಿ. ರೂಪಾದೇವಿ ಮಾಹಿತಿ ನೀಡಿದರೆ, ಬೆಳೆ ನಷ್ಟ ಸಮೀಕ್ಷೆ ಬಗ್ಗೆ ಅಧಿಕಾರಿಗಳಿಗೆ ಒಂದು ಸುತ್ತಿನ ತರಬೇತಿ ನೀಡಲಾಗಿದ್ದು, ಮೂರು ದಿನಗಳ ಗಡುವು ನೀಡಿದ್ದೇವೆ. ಸರ್ವೇ ಆದಂತೆ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಡಿಸಿ ಡಾ.ಆರ್. ಸೆಲ್ವಮಣಿ ತಿಳಿಸಿದರು.

    ನಂಗೂ ನಷ್ಟ ಆಗಿದೆ: ಸ್ಥಳದಲ್ಲಿದ್ದ ಶಾಸಕ ಕೆ. ಶ್ರೀನಿವಾಸಗೌಡ, ನಾನೂ ರೈತ, ನೆಲಗಡಲೆ ಬಿತ್ತನೆ ಮಾಡಿದ್ದೆ, ಎಲ್ಲವೂ ನಷ್ಟ ಆಗಿದೆ ಎಂದು ಹೇಳಿದಾಗ ರೈತರ ಸಮಸ್ಯೆ ಹೇಳೋಣ ಎಂದು ಸಂಸದ ಎಸ್.ಮುನಿಸ್ವಾಮಿ ನುಡಿದರು. ನಂತರ ಚೌಡದೇನಹಳ್ಳಿಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ ನಾಲ್ಕೂವರೆ ಎಕರೆ ಟೊಮ್ಯಾಟೊ ಬೆಳೆ ನಾಶವಾದ ರೈತ ಜಗದೀಶ್ ಹಾಗೂ ಎರಡು ಎಕರೆ ಸೇವಂತಿಗೆ ಹೂವು ನಷ್ಟವಾದ ಆಶಾ ಅವರ ತೋಟ ವೀಕ್ಷಿಸಿದರು.

    ಜಿಲ್ಲೆಯಲ್ಲಿ ನಿರಂತರ ಮಳೆಯಾದ್ದರಿಂದ ತೋಟಗಾರಿಕೆ ಬೆಳೆಗಳಿಗೆ ಶಿಲೀಂಧ್ರ ಹಾಗೂ ಬ್ಯಾಕ್ಟೀರಿಯಾದಿಂದ ರೋಗಬಾಧೆ ಹೆಚ್ಚಾಗಿ ತರಕಾರಿ ಬೆಳೆಗಳು ಪೂರ್ತಿ ಹಾಳಾಗಿವೆ ಎಂದು ಡಿಸಿ ಸೆಲ್ವಮಣಿ ಗಮನ ಸೆಳೆದಾಗ ಉತ್ತರಿಸಿದ ಸಿಎಂ ಅಪಾರ ಪ್ರಮಾಣದ ತೋಟಗಾರಿಕೆ ಬೆಳೆ ನಷ್ಟವಾಗಿರುವುದು ಗಮನಕ್ಕೆ ಬಂದಿದೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಸರ್ವೇ ನಂ, ಜಿಪಿಎಸ್ ಸಹಿತ ಪರಿಹಾರ ತಂತ್ರಾಂಶದಲ್ಲಿ ಆಯಾ ದಿನವೇ ಅಪ್‌ಲೋಡ್ ಮಾಡುವಂತೆ ಸೂಚನೆ ನೀಡಿದರು.

    ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ, ಕೂಡಾ ಅಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಎನ್.ಸಂಪಂಗಿ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಪಂ ಸಿಇಒ ಉಕೇಶ್ ಕುಮಾರ್, ಎಸ್ಪಿ ಡೆಕ್ಕಾ ಕಿಶೋರ್ ಬಾಬು ಇನ್ನಿತರರಿದ್ದರು.

    15 ಬೆಳೆಗಳ ದರ್ಶನ: ಮಳೆಯಿಂದ ಹಾನಿಯಾಗಿರುವ ತೋಟಗಾರಿಕೆ ಬೆಳಗಳ ಬಗ್ಗೆ ಇಲಾಖೆ ಉಪ ನಿರ್ದೇಶಕಿ ಎಂ. ಗಾಯತ್ರಿ ನೇತೃತ್ವದಲ್ಲಿ ಅಧಿಕಾರಿಗಳು ಸುತ್ತಮುತ್ತಲ ಭಾಗದ ಹಾನಿಯಾಗಿರುವ ಹೂಕೋಸು, ನವಿಲುಕೋಸು, ಬೀಟ್ರೋಟ್, ಶುಂಠಿ, ಬದನೆ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಕ್ಯಾರೇಟ್ ಸೇರಿ 15 ಬಗೆಯ ತರಕಾರಿ, ಹೂವುಗಳನ್ನು ಸಂಗ್ರಹಿಸಿ ಒಂದೇ ಕಡೆ ಬೆಳೆ ನಷ್ಟದ ಪ್ರಮಾಣವನ್ನು ಸಿಎಂ ಗಮನಕ್ಕೆ ತಂದರು.

    ಪಪಂ ಅಸ್ತಿತ್ವಕ್ಕೆ ತನ್ನಿ: ಕೋಲಾರಕ್ಕೆ ತೆರಳುವ ಮಾರ್ಗ ಮಧ್ಯೆ ವೇಮಗಲ್‌ನ ಪಂಚಾಯಿತಿ ಬಳಿ ವಾಹನ ನಿಲ್ಲಿಸಿದ ಸಿಎಂ ಕಾರಿನಲ್ಲೇ ಕುಳಿತು ಪಕ್ಷದ ಕಾರ್ಯಕರ್ತರು ನೀಡಿದ ಅರ್ಜಿ ಸ್ವೀಕರಿಸಿದರು, ನಮೂನೆ 57 ಹಾಕಿಕೊಂಡಿರುವ ರೈತರಿಗೆ ಭೂಮಿ ಮಂಜೂರಾತಿ ಮಾಡಬೇಕು ಹಾಗೂ ಈಗಾಗಲೆ ಘೋಷಣೆ ಮಾಡಿರುವ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಸ್ಥಾಪನೆ ಸಂಬಂಧ ಇರುವ ಕಾನೂನು ತೊಡಕುಗಳನ್ನು ನಿವಾರಿಸುವಂತೆ ಮನವಿ ಸಲ್ಲಿಸಿದರು.

    ಮುದುವಾಡಿ ಕೆರೆ ವೀಕ್ಷಣೆ: ಮುದುವಾಡಿ ಕೆರೆಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ ರಸ್ತೆ ಮೇಲೆಯೇ ಕೋಡಿ ನೀರು ಹರಿದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿರುವ ಕುರಿತು ಕಣ್ಣಾರೆ ಕಂಡು ಬೇಸರ ವ್ಯಕ್ತಪಡಿಸಿದರು. ಶಾಸಕ ಕೆ.ಆರ್.ರಮೇಶ್ ಕುಮಾರ್ ಸ್ಥಳದಲ್ಲಿ ಹಾಜರಿದ್ದು ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತಂದರಲ್ಲದೆ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ತುತ್ತಾಗಿರುವ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ವೇಣುಗೋಪಾಲ್, ಡಿಸಿ ಡಾ.ಆರ್.ಸೆಲ್ವಮಣಿ, ಎಸಿ ಆನಂದ್ ಪ್ರಕಾಶ್ ಮೀನಾ, ಎಸ್ಪಿ ಡಿ.ಕಿಶೋರ್ ಬಾಬು ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದು ಮಾಹಿತಿ ಒದಗಿಸಿದರು.

    ಕೆಸಿ ವ್ಯಾಲಿ ನಿಲ್ಲಿಸಿ: ಕೋಲಾರ-ಶ್ರೀನಿವಾಸಪುರ ಮಾರ್ಗದ ಮಲ್ಲಸಂದ್ರದ ಬಳಿ ಗ್ರಾಮಸ್ಥರಿಂದ ಸಿಎಂ ಅಹವಾಲು ಆಲಿಸಿದರು. ಜಿಲ್ಲಾದ್ಯಂತ ಉತ್ತಮ ಮಳೆಯಾಗಿರುವುದರಿಂದ ಕೆರೆಗಳು ಕೋಡಿ ಹೋಗಿ ಹೊಲಗಳು ಜಲಾವೃತ ಆಗುತ್ತಿರುವುದರಿಂದ ಆರು ತಿಂಗಳ ಕಾಲ ಕೆಸಿ ವ್ಯಾಲಿ ನೀರು ಹರಿಸುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದರು.

    ದುರಸ್ತಿಗೆ ನಿರ್ದೇಶನ: ಕೋಲಾರ ಜಿಲ್ಲೆಯಲ್ಲಿ ಹೆಚ್ಚು ಕೆರೆಗಳಿವೆ, ಕೆರೆ ಕೋಡಿ ಹೋಗಿ ಶಿಥಿಲಗೊಂಡಲ್ಲಿ ದುರಸ್ತಿ, ಸ್ವಚ್ಛತೆಗೆ ಸಣ್ಣ ನೀರಾವರಿ ಇಲಾಖೆಗೆ ಸೂಚಿಸಲಾಗಿದೆ. ಕೆರೆ, ರಾಜಕಾಲುವೆಗಳು ಆಸ್ತಿಯಾಗಿರುವುದರಿಂದ ಉಳಿಸಲು ಪ್ರಥಮ ಆದ್ಯತೆ, ಕೆರೆ, ರಾಜಕಾಲುವೆ ಒತ್ತುವರಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ವಿದ್ಯುತ್ ಕಂಬ, ಟ್ರಾನ್‌ಸ್ಾರ್ಮರ್‌ಗಳನ್ನು 24 ಗಂಟೆಗಳಲ್ಲಿ ದುರಸ್ತಿಗೆ ನಿರ್ದೇಶನ ನೀಡಲಾಗಿದೆ ಎಂದರು.

    ಆರ್ಥಿಕ ಸದೃಢತೆಗೆ ಒತ್ತು: ಕೋವಿಡ್‌ನಿಂದ ರಾಜ್ಯದಲ್ಲಿ ಎರಡು ವರ್ಷ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿತ್ತು, ಲಸಿಕೆಯನ್ನು ಪರಿಣಾಮಕಾರಿಯಾಗಿ ನೀಡಿರುವುದರಿಂದ ಕರೊನಾ ಇಳಿಮುಖವಾಗುತ್ತಿದೆ, ಜತೆಗೆ ತೆರಿಗೆ ಸಂಗ್ರಹಣೆಗೆ ಗುರಿ ನಿಗದಿ ಪಡಿಸುವ ಮೂಲಕ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರಿಸಿದರು.
    ಜಿಎಸ್‌ಟಿ 60,000 ಇದ್ದದ್ದು 1.30 ಲಕ್ಷ ದಾಟಿದೆ, ಈ ವರ್ಷ, ಮುಂದಿನ ದಿನಗಳಲ್ಲಿ ರಾಜ್ಯ ಹಣಕಾಸು ಕೊರತೆ ಇಲ್ಲದೆ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯತ್ತೇವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts