More

    ಬೆಂಗಳೂರಿನ ಸ್ಯಾಟಲೈಟ್ ಟೌನ್ ತುಮಕೂರು ; ಜಿಲ್ಲಾಸ್ಪತ್ರೆ ಆವರಣದಲ್ಲಿ 100 ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆ

    ತುಮಕೂರು : ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ವಾಣಿಜ್ಯವಾಗಿ ಬೆಳೆಯುತ್ತಿರುವ ಜಿಲ್ಲೆ ತುಮಕೂರು ಸ್ಯಾಟಲೈಟ್ ಟೌನ್ ಅರ್ಹತೆ ಹೊಂದಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಯಿಂದ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಬಹುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

    ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಸಯೋಗದಲ್ಲಿ ಶನಿವಾರ ಕ್ಯಾನ್ಸರ್ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಅಪೌಷ್ಟಿಕ ಮಕ್ಕಳ ಪುನಶ್ಚೇತನ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬೆಂಗಳೂರಿಗೆ ಪರ್ಯಾಯವಾಗಿ ವೇಗವಾಗಿ ಬೆಳೆಯುತ್ತಿರುವ ತುಮಕೂರಿನಲ್ಲಿ ಹೆಚ್ಚು ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಬೆಂಗಳೂರು ಮೇಲಿರುವ ಒತ್ತಡವನ್ನು ತಗ್ಗಿಸುವ ಪ್ರಯತ್ನ ಮಾಡಲಾಗುವುದು ಎಂದರು.

    100 ಹಾಸಿಗೆಗಳುಳ್ಳ ಕ್ಯಾನ್ಸರ್ ಆಸ್ಪತ್ರೆಯನ್ನು ತುಮಕೂರಿನಲ್ಲಿ ಪ್ರಾರಂಭಿಸಲಾಗುತ್ತಿದೆ. ಈ ಕ್ಯಾನ್ಸರ್ ಆಸ್ಪತ್ರೆಯಿಂದ ತುಮಕೂರು ಮಾತ್ರವಲ್ಲದೇ, ರಾಜ್ಯದ ದಕ್ಷಿಣ ಜಿಲ್ಲೆಗಳ ಕ್ಯಾನ್ಸರ್ ರೋಗಿಗಳಿಗೂ ಅನುಕೂಲವಾಗಲಿದೆ. ಇನ್ನು ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆ ಹಾಗೂ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವನ್ನು ತಗ್ಗಿಸುವುದು ಸರ್ಕಾರದ ಆದ್ಯತೆ. ಅದಕ್ಕೆ ಪೂರಕವಾಗಿ ಗರ್ಭಿಣಿಯರ ಹಾಗೂ ನವಜಾತ ಶಿಶುಗಳ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಈ ನಿಟ್ಟಿನಲ್ಲಿ ತುಮಕೂರಿನಲ್ಲಿ ಪ್ರತ್ಯೇಕವಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

    ಕರೊನಾ ಸಂದರ್ಭದಲ್ಲಿ ಸಮುದಾಯ, ಸರ್ಕಾರ ಹಾಗೂ ಸಂಸ್ಥೆಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದ ಸಿಎಂ ಬೊಮ್ಮಾಯಿ, ಕರೊನಾ ಅಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲ ವೈದ್ಯರು, ಸಿಬ್ಬಂದಿ, ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.

    ಶಾಸಕ ಜಿ.ಬಿ. ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಡಾ.ಸಿ.ಎಂ.ರಾಜೇಶಗೌಡ, ಚಿದಾನಂದ ಎಂ ಗೌಡ, ಮೇಯರ್ ಬಿ.ಜಿ.ಕೃಷ್ಣಪ್ಪ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ರಾಮಚಂದ್ರ, ಕೇಂದ್ರವಲಯ ಐಜಿಪಿ ಚಂದ್ರಶೇಖರ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಎಡಿಸಿ ಕೆ.ಚನ್ನಬಸಪ್ಪ, ಡಿಎಚ್‌ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಉಪಸ್ಥಿತರಿದ್ದರು.

    ಬಿಎಸ್‌ವೈ ದೂರದೃಷ್ಟಿ, ಸುಧಾಕರ್ ಶ್ರಮ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ದೂರದೃಷ್ಟಿ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಶ್ರಮದಿಂದ ಕರೊನಾ ನಿರ್ವಹಣೆಯನ್ನು ಅತ್ಯಂತ ಸಮಪರ್ಕವಾಗಿ ನಿಭಾಯಿಸಿದ್ದು ಮಾದರಿ. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದರಿಂದ 50 ವರ್ಷದಲ್ಲಿ ಆಗದ ಸಾಧನೆ ಒಂದೇ ವರ್ಷದಲ್ಲಾಗಿದೆ. ರಾಜ್ಯದಲ್ಲಿ 24 ಸಾವಿರ ವಿಶೇಷ ಹಾಸಿಗೆ ಹಾಗೂ 4 ಸಾವಿರ ಐಸಿಯು ಹಾಸಿಗೆಗಳ ವ್ಯವಸ್ಥೆ ಆಗಿರುವುದು ಆರೋಗ್ಯ ಕ್ಷೇತ್ರದ ಸಾಧನೆಯಾಗಿದೆ ಎಂದು ಬೊಮ್ಮಾಯಿ ಪ್ರಶಂಸಿಸಿದರು.

    ಸುಸ್ಥಿರ ಆರೋಗ್ಯ ಕರ್ನಾಟಕ ಗುರಿ : ಕಳೆದ 7 ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ 4 ಸಾವಿರ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದ್ದು ಜಿಲ್ಲೆಯಲ್ಲಿ 64 ವೈದ್ಯರನ್ನು ನೇಮಿಸಿಕೊಂಡಿದ್ದು ಎಲ್ಲಾ ಪಿಎಚ್‌ಸಿಗಳಲ್ಲಿ ವೈದ್ಯರ ಸೇವೆ ಲಭ್ಯವಿದೆ. ಸಂಪೂರ್ಣ, ಸಮಗ್ರ, ಸುಸ್ಥಿರ ಕರ್ನಾಟಕ ನಿರ್ಮಾಣ ನಮ್ಮ ಗುರಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
    ತುಮಕೂರು ಜಿಲ್ಲೆ ಗೇಟ್ ವೇ ಆಫ್ ಉತ್ತರ ಕರ್ನಾಟಕ. ಐದು ಜಿಲ್ಲೆಗೆ ಹೊಂದಿಕೊಂಡಿರುವ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು ಜಿಲ್ಲೆಯಲ್ಲಿ ಸಿದ್ಧಾರ್ಥ, ಶ್ರೀದೇವಿ ವೈದ್ಯಕೀಯ ಕಾಲೇಜುಗಳಿದ್ದು, ಸಿದ್ಧಗಂಗಾ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಹ ಸಿದ್ಧತೆ ನಡೆದಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಿರುವುದರಿಂದ ತೃತೀಯ ಹಂತದ ಆರೋಗ್ಯ ಸೇವೆ ಜನರಿಗೆ ಸಿಗಲಿದೆ ಎಂದರು.

    125 ತಾಯಿ ಮತ್ತು ಮಕ್ಕಳ ಆಸ್ಪತ್ರೆ : ರಾಷ್ಟ್ರೀಯ ಆರೋಗ್ಯ ಅಭಿಯಾನದ ಯೋಜನೆಯಡಿ 100 ಹಾಸಿಗೆಗಳುಳ್ಳ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪಾಲುದಾರಿಕೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ದೇಶದ ಸರಾಸರಿಯಲ್ಲಿ 1 ಲಕ್ಷ ಹೆರಿಗೆಯಲ್ಲಿ 122 ತಾಯಂದಿರು ಮರಣ ಹೊಂದುತ್ತಿದ್ದು, ರಾಜ್ಯದಲ್ಲಿ 97 ತಾಯಂದಿರು ಮರಣ ಹೊಂದುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ತಾಯಿ ಮರಣ ಪ್ರಮಾಣವನ್ನು 70ಕ್ಕೆ ತರುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಮುಂದಿನ 5 ವರ್ಷದಲ್ಲಿ ಇಡೀ ರಾಜ್ಯದಲ್ಲಿ 125 ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳನ್ನು ನಿರ್ಮಿಸುವ ಮಹಾತ್ವಾಕಾಂಕ್ಷೆ ಹೊಂದಲಾಗಿದೆ ಎಂದು ಸುಧಾಕರ್ ತಿಳಿಸಿದರು.

    ಪಿಜಿ ಸೆಂಟರ್, ವೈದ್ಯಕೀಯ ಕಾಲೇಜಿಗೆ ಬೇಡಿಕೆ : ಜಿಲ್ಲಾಸ್ಪತ್ರೆಗೆ ಒಂದು ಪಿಜಿ ಸೆಂಟರ್ ಹಾಗೂ ತಿಪಟೂರು ಭಾಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts