More

    ಮುಚ್ಚಿದ ಯೋಗಕ್ಷೇಮ ಕೇಂದ್ರ

    ಕಾರವಾರ: ಸರ್ಕಾರದ ಅನುದಾನ ಕೊರತೆಯಿಂದ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ ಬಾಗಿಲು ಮುಚ್ಚಿದೆ. ಇಲ್ಲಿನ ಹಬ್ಬುವಾಡ ರಸ್ತೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ಈ ಕೇಂದ್ರ ಹಲವು ಹಿರಿಯರಿಗೆ ಆಸರೆಯಾಗಿತ್ತು.

    ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅನುದಾನದಲ್ಲಿ 2015-16 ನೇ ಸಾಲಿನಿಂದ ನಗರದಲ್ಲಿ ಈ ಹಗಲು ಯೋಗಕ್ಷೇಮ ಕೇಂದ್ರ ನಡೆಯುತ್ತಿತ್ತು. ಬೆಳಗಾವಿಯ ಮಲ್ಲಿಕಾರ್ಜುನ ಜನ ಸೇವಾ ಸೊಸೈಟಿ ಇದನ್ನು ನೋಡಿಕೊಳ್ಳುತ್ತಿತ್ತು. ಆದರೆ, ಕರೊನಾ ಬಂದಾಗಿನಿಂದ ಈ ಕೇಂದ್ರಕ್ಕೆ ಹಿರಿಯ ನಾಗರಿಕರಿಗೆ ಪ್ರವೇಶ ನಿರ್ಬಂಧಿಸಲಾಯಿತು. ಈಗ ನಿರ್ಬಂಧ ತೆರೆಯಲಾಗಿದ್ದರೂ ಕೇಂದ್ರ ನಡೆಸಲು ಅನುದಾನದ ಕೊರತೆ ಎದುರಾಗಿದೆ. ಹೀಗಾಗಿ ಸ್ವಯಂ ಸೇವಾ ಸಂಸ್ಥೆ ಸೇವೆಯಿಂದ ಹಿಂದೆ ಸರಿದಿದೆ.

    ಎಲ್ಲೆಡೆ ಇದೇ ಸಮಸ್ಯೆ: ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆ -2007 ರ ಅಡಿ ರಾಜ್ಯದ ಮಹಾ ನಗರಗಳಲ್ಲಿ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ ಪ್ರಾರಂಭಿಸಲಾಗಿತ್ತು. 2014-15 ರಲ್ಲಿ ಅದನ್ನು ರಾಜ್ಯದ ಕೆಲವು ಜಿಲ್ಲೆಗಳಿಗೆ ವಿಸ್ತರಿಸಲಾಯಿತು. 2015-16 ನೇ ಸಾಲಿನಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲೂ ಹಗಲು ಯೋಗಕ್ಷೇಮ ಕೇಂದ್ರ ತೆರೆಯಲು ಆದೇಶ ಹೊರಡಿಸಲಾಗಿತ್ತು. ಆಸಕ್ತ ಸ್ವಯಂ ಸೇವಾ ಸಂಸ್ಥೆಗಳಿಗೆ ಈ ಕೇಂದ್ರ ನಡೆಸುವ ಜವಾಬ್ದಾರಿ ವಹಿಸಲಾಗಿತ್ತು. ಈ ಮೊದಲು ಹಗಲು ಯೋಗಕ್ಷೇಮ ಕೇಂದ್ರ ನಡೆಸುವ ಸ್ವಯಂ ಸೇವಾ ಸಂಸ್ಥೆಗೆ ವಾರ್ಷಿಕ 4.15 ಲಕ್ಷ ರೂ. ನೀಡಲಾಗುತ್ತಿತ್ತು. ಅದನ್ನು 11.20 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿತ್ತು. ಆದರೆ, ಕೋವಿಡ್ ಆರ್ಥಿಕ ಸಂಕಷ್ಟದ ಕಾರಣ ಸರ್ಕಾರ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ.

    ಏನೇನು ಸೌಲಭ್ಯ?

    ಈ ಕೇಂದ್ರಗಳಲ್ಲಿ ಹಿರಿಯ ನಾಗರಿಕರಿಗೆ ಓದಲು ಪತ್ರಿಕೆ, ಪುಸ್ತಕಗಳನ್ನು ಇಡಲಾಗುತ್ತಿತ್ತು. ಒಳಾಂಗಣ ಕ್ರೀಡೆಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ಚಹಾ ಹಾಗೂ ಟಿಫಿನ್ ವ್ಯವಸ್ಥೆಯೂ ಇತ್ತು. ಬಿಪಿ, ಮಧುಮೇಹವನ್ನು ಉಚಿತವಾಗಿ ಪರೀಕ್ಷೆ ಮಾಡಲಾಗುತ್ತಿತ್ತು. ವಾರಕ್ಕೊಮ್ಮೆ ವೈದ್ಯರೊಬ್ಬರು ಬಂದು ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಮಾಡುತ್ತಿದ್ದರು.

    ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರವನ್ನು ಸ್ವಯಂ ಸೇವಾ ಸಂಸ್ಥೆ ನೋಡಿಕೊಳ್ಳುತ್ತಿದೆ. ಅದಕ್ಕೆ ಅನುದಾನ ಬರುವುದು ಬಾಕಿ ಇದೆ. ಆದರೆ, ಕೇಂದ್ರವನ್ನು ಮುಚ್ಚಲು ಆದೇಶವಾಗಿಲ್ಲ. ಆದರೂ ಬಾಗಿಲು ಮುಚ್ಚಿದ ಬಗ್ಗೆ ಪರಿಶೀಲಿಸಲಾಗುವುದು.

    | ಪದ್ಮಾವತಿ ಜಿ.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ

    ಕೋವಿಡ್ ಕಾರಣದಿಂದ ಯೋಗಕ್ಷೇಮ ಕೇಂದ್ರಕ್ಕೆ ಹಿರಿಯ ನಾಗರಿಕರಿಗೆ ಪ್ರವೇಶವಿರಲಿಲ್ಲ. ಈಗ ಕೋವಿಡ್ ಕಡಿಮೆಯಾಗಿರುವುದರಿಂದ ಕನಿಷ್ಠ ಬಿಪಿ, ಶುಗರ್ ಹಾಗೂ ಆರೋಗ್ಯ ಪರೀಕ್ಷೆಗಾದರೂ ವ್ಯವಸ್ಥೆ ಮಾಡಿಕೊಡುವಂತೆ ಇಲಾಖೆಗೆ ವಿನಂತಿ ಮಾಡಿದ್ದೆ.

    | ಬಾಬು ಜಿ.ಅಂಬಿಗ

    ಹಿರಿಯ ನಾಗರಿಕ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts