More

    ರಸ್ತೆಬದಿ ಹಣ್ಣಿನ ಗಾಡಿಗಳ ತೆರವು

    ಹನೂರು: ಪಟ್ಟಣದ ರಸ್ತೆಬದಿಯಲ್ಲಿ ಹಣ್ಣು ಹಾಗೂ ಇತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ತಳ್ಳುವ ಗಾಡಿಗಳನ್ನು ಫುಡ್‌ಜೋನ್ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪೊಲೀಸರ ಭದ್ರತೆಯಲ್ಲಿ ತೆರವುಗೊಳಿಸಿ ಪರ್ಯಾಯ ಸ್ಥಳ ಕಲ್ಪಿಸಿದರು.
    ಫುಡ್‌ಜೋನ್ ನಿರ್ಮಾಣ ಸಂಬಂಧ ಜಿಲ್ಲಾಧಿಕಾರಿ ಆದೇಶದ ಮೇರೆಗೆ ರಸ್ತೆಬದಿಯ ಹಣ್ಣು ಹಾಗೂ ಇತರ ವಸ್ತುಗಳನ್ನು ಮಾರಾಟ ಮಾಡುವ ತಳ್ಳುವ ಗಾಡಿಗಳನ್ನು ತೆರವುಗೊಳಿಸಲಾಗುತ್ತಿದ್ದು, ಹಣ್ಣಿನ ವ್ಯಾಪಾರಿಗಳಿಗೆ ಬಂಡಳ್ಳಿ ರಸ್ತೆಬದಿಯಲ್ಲಿ ಪರ್ಯಾಯ ಸ್ಥಳ ಕಲ್ಪಿಸಲಾಗಿದೆ. ನೈಟ್ ಕ್ಯಾಂಟೀನ್, ಪಾನಿಪುರಿ, ಗೋಬಿ, ತರಕಾರಿ ಹಾಗೂ ಇನ್ನಿತರ ಆಹಾರ ಪದಾರ್ಥಗಳನ್ನು ತಳ್ಳುವ ಗಾಡಿಯ ಮೂಲಕ ಮಾರಾಟ ಮಾಡುವವರಿಗೆ ಜೂ.1ರ ಬಳಿಕ ಪರ್ಯಾಯ ಸ್ಥಳ ಕಲ್ಪಿಸಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಮೂರ್ತಿ ತಿಳಿಸಿದರು.

    ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇನ್ಸ್‌ಪೆಕ್ಟರ್ ರವಿನಾಯ್ಕ ಕಾರ್ಯಾಚರಣೆ ನಡೆಸಿ ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ಮಾಲೀಕರು ಅತಿಕ್ರಮಿಸಿದ್ದ ಸ್ಥಳವನ್ನು ತೆರವುಗೊಳಿಸಲು ಸೂಚನೆ ನೀಡಿದರು. ಇದೇ ವೇಳೆ ರಸ್ತೆಬದಿಯ ಟೀ ಅಂಗಡಿಗಳನ್ನು ತೆರವುಗೊಳಿಸಿದರು. ಬಸ್ ನಿಲ್ದಾಣದ ಬಳಿ ಆಟೋಗಳ ನಿಲ್ದಾಣಕ್ಕೆ ಸ್ಥಳ ನಿಗದಿಪಡಿಸಲಾಯಿತು. ಈ ವೇಳೆ ಆಟೋ ಮಾಲೀಕರು ಹಾಗೂ ಚಾಲಕರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಕಾರ್ಯಾಚರಣೆಯಲ್ಲಿ ಕೋವಿಡ್-19 ನೋಡಲ್ ಅಧಿಕಾರಿ ಬಿಇಒ ಟಿ.ಆರ್.ಸ್ವಾಮಿ ಹಾಜರಿದ್ದರು.

    ಹಣ್ಣಿನ ವ್ಯಾಪಾರಿಗಳ ಆಕ್ಷೇಪ: ಹಲವು ವರ್ಷಗಳಿಂದ ಬಸ್ ನಿಲ್ದಾಣದ ಸಮೀಪದ ರಸ್ತೆಬದಿಯಲ್ಲಿ ನಿಗದಿಗೊಂಡ ಸ್ಥಳದಲ್ಲಿ ತಳ್ಳುವ ಗಾಡಿಯ ಮೂಲಕ ಹಣ್ಣಿನ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಆದರೀಗ ದಿಢೀರ್ ಸ್ಥಳ ಬದಲಾವಣೆ ಮಾಡಲಾಗಿದ್ದು, ಹಣ್ಣಿನ ವ್ಯಾಪಾರಿಗಳೆಲ್ಲರಿಗೂ ಒಂದೇ ಕಡೆ ಪರ್ಯಾಯ ಸ್ಥಳ ನೀಡಿರುವುದು ಪ್ರಯೋಜನಕ್ಕೆ ಬಾರದಂತಾಗಿದೆ. ಇದರಿಂದ ಜೀವನ ನಿರ್ವಹಣೆಯ ಮೇಲೆ ಪೆಟ್ಟು ಬೀಳಲಿದೆ ಎಂದು ಹಣ್ಣಿನ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts