More

    ದೇಗುಲ ಜಾಗದಲ್ಲಿರುವ ಮನೆ ತೆರವುಗೊಳಿಸಿ

    ಚಿಕ್ಕಮಗಳೂರು: ತರೀಕೆರೆ ತಾಲೂಕಿನ ಎರೇಹಳ್ಳಿ ತಾಂಡಾ ದೇವಾಲಯದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಗ್ರಾಮಸ್ಥರು ಗುರುವಾರ ಮನವಿ ಸಲ್ಲಿಸಿದರು.

    ಗ್ರಾಮದ ನಿವಾಸಿ ರಾಮಬೋವಿ ಮನೆ ಹಾನಿಗೀಡಾಗಿತ್ತು. ಅದನ್ನು ದುರಸ್ತಿ ಮಾಡಿಕೊಳ್ಳುವವರೆಗೆ ಮೂರು ತಿಂಗಳು ದೇವಾಲಯದ ಜಾಗದಲ್ಲಿ ವಾಸವಿರಲು ಗ್ರಾಮಸ್ಥರಲ್ಲಿ ಅನುಮತಿ ಪಡೆದಿದ್ದರು. ಇದಕ್ಕೆ ಒಪ್ಪಿದ ಗ್ರಾಮಸ್ಥರು ತಾತ್ಕಾಲಿಕವಾಗಿ ಇರಲು ಅವಕಾಶ ನೀಡಿದ್ದರು. ಆದರೆ ಈಗ ಶಾಶ್ವತವಾಗಿ ಅಲ್ಲಿಯೇ ವಾಸವಿರಲು ಮುಂದಾಗಿದ್ದು, ಕೂಡಲೇ ಜಾಗ ಖಾಲಿ ಮಾಡಿಸಿಕೊಡಬೇಕೆಂದು ಗ್ರಾಮಸ್ಥ ನಾರಾಯಣಸ್ವಾಮಿ ಒತ್ತಾಯಿಸಿದರು.
    ರಾಮಬೋವಿ ಮೂರು ತಿಂಗಳು ಇರುವುದಾಗಿ ಹೇಳಿ ಮೂರು ವರ್ಷ ಕಳೆದರೂ ತೆರವು ಮಾಡುತ್ತಿಲ್ಲ. ಅವರಿಗೆ ಗ್ರಾಮದಲ್ಲಿ ಮೂರು ನಿವೇಶನಗಳು, ಜಮೀನು ಸಹ ಇದೆ. ದೇವಾಲಯ ಜಾಗ ಬಿಟ್ಟುಕೊಡುವಂತೆ ಗ್ರಾಮಸ್ಥರೆಲ್ಲ ಒತ್ತಾಯ ಮಾಡುತ್ತಿದ್ದರೂ ಸಂಘ ಸಂಸ್ಥೆಗಳ ಮೂಲಕ ನಮ್ಮ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.
    ಜಾಗ ಬಿಟ್ಟುಕೊಡುವಂತೆ ಕೇಳಿದ ಗ್ರಾಮಸ್ಥರ ವಿರುದ್ಧ ಹಾಗೂ ಮಹಿಳೆಯರ, ವಿದ್ಯಾರ್ಥಿಗಳ ವಿರುದ್ಧ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸುವ ಮೂಲಕ ಕಿರುಕುಳ ನೀಡುತ್ತಿದ್ದಾನೆ. ಆ ಮೂಲಕ ಗ್ರಾಮದಲ್ಲಿ ಅಶಾಂತಿ ಉಂಟು ಮಾಡಿದ್ದಾರೆ. ನಾವು ಮನವಿ ನೀಡುವ ಅಧಿಕಾರಿಗಳನ್ನು ಭೇಟಿ ಮಾಡಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಜಾಗದಲ್ಲಿ ತಾತ್ಕಲಿಕ ಮನೆ ನಿರ್ಮಿಸಿಕೊಂಡು ಈಗ ಜಾಗ ನನಗೇ ಸೇರಿದ್ದು ಎಂದು ನಕಲಿ ದಾಖಲೆ ತೋರಿಸುತ್ತಿದ್ದಾರೆ. ಗ್ರಾಮದ ಹಿತದೃಷ್ಟಿಯಿಂದ ಜಾಗವನ್ನು ರಕ್ಷಣೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
    ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಅಧಿಕಾರಿಗಳನ್ನು ಸ್ಥಳಕ್ಕೆ ಭೇಟಿ ನೀಡುವಂತೆ ಹೇಳಿ, ವರದಿ ತರಿಸಿಕೊಳ್ಳಲಾಗುವುದು. ಆ ವ್ಯಕ್ತಿಯ ತಪ್ಪು ಇದ್ದರೆ ಕೂಡಲೇ ಮನೆ ತೆರವು ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
    ಗ್ರಾಮಸ್ಥರಾದ ಆಕಾಶ್, ಗಂಗಾಧರ ಬೋವಿ, ನಾಗರಾಜ, ವಸಂತ, ಗಾಯತ್ರಿ, ಅಂಜನಮ್ಮ, ಪ್ರಮೀಳಾ, ಈರಪ್ಪ, ಲಕ್ಷ್ಮಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts