More

    ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ

    ಸಾಗರ: ಸಾಗರ ಉಪವಿಭಾಗ ವ್ಯಾಪ್ತಿಯ ಸೊರಬ ತಾಲೂಕಿನ ಉಳವಿ ಹಾಗೂ ಚಂದ್ರಗುತ್ತಿ ಹೋಬಳಿಯ ಹಲವು ಗ್ರಾಮಗಳಲ್ಲಿ ಕಾನು, ಅರಣ್ಯ, ಕಂದಾಯ ಭೂಮಿ ಒತ್ತುವರಿ ಹೆಚ್ಚುತ್ತಿದೆ. ಕಾಡುಪ್ರಾಣಿಗಳಿಗೆ ವಿದ್ಯುತ್ ಶಾಕ್ ಹೊಡೆಸಿ ಸಾಯಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ವೃಕ್ಷಲಕ್ಷ ಆಂದೋಲನಾ ಹಾಗೂ ಸೊರಬದ ಪರಿಸರ ಜಾಗೃತಿ ಟ್ರಸ್ಟ್ನ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಕಚೇರಿಗೆ ಶನಿವಾರ ಮನವಿ ಸಲ್ಲಿಸಿದರು.

    ಸೊರಬ ತಾಲೂಕಿನ ಉಳವಿ ಹೋಬಳಿಯ ಹಲಸಿನಕೊಪ್ಪ ಗ್ರಾಮದ ಸರ್ವೇ ನಂ.4ರಲ್ಲಿ ಗ್ರಾಮಸ್ಥರು ಕಾಪಾಡಿಕೊಂಡು ಬಂದಿರುವ 235 ಎಕರೆ ಅರಣ್ಯ ಮತ್ತು 152 ಎಕರೆ ಗೋಮಾಳಕ್ಕೆ ಅರಣ್ಯ ಇಲಾಖೆಯವರು ಸಿಪಿಟಿ ನಿರ್ಮಿಸಿದ್ದಾರೆ. ಆದರೂ ಸಾಗರ ತಾಲೂಕಿನ ಬೇಳೂರು ಗ್ರಾಮದ ಕೆಲವರು ಕಾಡುಗಳಿಗೆ ನುಗ್ಗಿ ಒತ್ತುವರಿ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ನೆಟ್ಟಿದ್ದ ಗಿಡಗಳನ್ನು ಕಿತ್ತು ಅರಣ್ಯ ಒತ್ತುವರಿ ಮಾಡಲಾಗಿದೆ. ಸೊರಬದ ಬರಿಗೆ ಗ್ರಾಮದ ಸರ್ವೇ ನಂ.92ರಲ್ಲಿ 400 ಎಕರೆ ಮೀಸಲು ಅರಣ್ಯ ಅತಿಕ್ರಮಣವಾಗುತ್ತಿದೆ ಎಂದು ದೂರಿದರು.
    ಚಂದ್ರಗುತ್ತಿ ಹೋಬಳಿಯ ದ್ಯಾವಗೋಡು ಗ್ರಾಮದ ಸರ್ವೇ ನಂ.5ರಲ್ಲಿ 220 ಎಕರೆ ಅರಣ್ಯಭೂಮಿ ಕಾಪಾಡಲು ಅರಣ್ಯ ಇಲಾಖೆ ಅಗಳ ತೆಗೆದಿತ್ತು. ಇಲ್ಲಿಯೂ ಸಹ ಅಗಳವನ್ನು ದಾಟಿ ಹಲವರು ಕಾಡು ಅತಿಕ್ರಮಣ ಮಾಡುವ ಪ್ರಯತ್ನ ನಡೆಸಿದ್ದಾರೆ. ಮುಟಗುಪ್ಪ ಗ್ರಾಮದ ಸರ್ವೇ ನಂ.27, 56ರಲ್ಲಿನ ಸೊಪ್ಪಿನಬೆಟ್ಟ ಒತ್ತುವರಿಯಾಗುತ್ತಿದೆ. ಇತ್ತೀಚಿನ ಕೆಲವು ದಿನಗಳಲ್ಲಿ ಸೊರಬ ತಾಲೂಕಿನ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಒತ್ತುವರಿ ಪ್ರಕರಣ ಹೆಚ್ಚುತ್ತಿದೆ. ಬೆಲೆಬಾಳುವ ಅರಣ್ಯ ಮರಗಳ ನಾಶ ಹಾಗೂ ಜನವಸತಿ ಪ್ರದೇಶಗಳಿಗೆ ವನ್ಯಜೀವಿಗಳು ಪ್ರವೇಶಿಸುವಂತೆ ಆಗಿದೆ ಎಂದರು.
    ಅರಣ್ಯ ನಾಶದಿಂದ ಮನುಷ್ಯ ಹಾಗೂ ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚುತ್ತಿದೆ. ತಾಲೂಕಿನ ಕಸಬಾ ಹೋಬಳಿಯ ಶಾಂತಗೆರೆ ಗ್ರಾಮದಲ್ಲಿ ಇತ್ತೀಚೆಗೆ ವಿದ್ಯುತ್ ಹರಿಸಿ ಜಿಂಕೆ, ಬರ್ಕ ಇತರ ಕಾಡುಪ್ರಾಣಿಗಳನ್ನು ಸಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಅರಣ್ಯ ಮತ್ತು ಕಾಡುಪ್ರಾಣಿಗಳ ಸಂರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಭೂ ಒತ್ತುವರಿದಾರರ ವಿರುದ್ಧ ಸೂಕ್ತ ಕ್ರಮ ಜರುಗಿಸಿ, ಕಾಡುಪ್ರಾಣಿಗಳನ್ನು ಹತ್ಯೆ ಮಾಡುತ್ತಿರುವವರಿಗೆ ಕಟ್ಟುನಿಟ್ಟಿನ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದರು.
    ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪರಿಸರ ಜಾಗೃತಿ ಟ್ರಸ್ಟ್‌ನ ಶ್ರೀಪಾದ ಬಿಚ್ಚುಗತ್ತಿ, ಪ್ರಮುಖರಾದ ವೆಂಕಟೇಶ ಕವಲಕೋಡು, ಆನೆಗೊಳಿ ಸುಬ್ರಾವ್, ಆರ್.ಎಸ್.ಗಿರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts