More

    ಸ್ವಚ್ಛತೆ, ಮೂಲಸೌಲಭ್ಯ ಮರೀಚಿಕೆ

    ಗದಗ: ಅದು ಪ್ರತಿಷ್ಠಿತರ ವಾಸಸ್ಥಳ. ಕೆಲವೆಡೆ ಚರಂಡಿಗಳಿಲ್ಲ, ಇರುವಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಚರಂಡಿ ನೀರು ಸರಿಯಾಗಿ ಹರಿಯಲು ಆಸ್ಪದವಿಲ್ಲದ ಕಾರಣ ಖಾಲಿ ಸೈಟ್​ನಲ್ಲಿ ಜಮೆಯಾಗಿ ಗೊಬ್ಬು ನಾರುತ್ತಿದೆ.

    ಇದು 11ನೇ ವಾರ್ಡ್ ವ್ಯಾಪ್ತಿಯ ವಿವೇಕಾನಂದ ನಗರ, ನಿಸರ್ಗ ಬಡಾವಣೆಯ ಸ್ಥಿತಿ. ಇಲ್ಲಷ್ಟೇ ಅಲ್ಲ, ಈ ವಾರ್ಡ್ ವ್ಯಾಪ್ತಿಯ ಕರಿಯಮ್ಮನಕಲ್ಲ ಬಡಾವಣೆ, ಇರಾನಿ ಕಾಲನಿ, ಶಿವಬಸವ ನಗರ, ಹಮಾಲರ ಕಾಲನಿಗಳಲ್ಲಿ ಮೂಲಸೌಲಭ್ಯಗಳ ಕೊರತೆಯಿಂದ ಜನರು ತತ್ತರಿಸುವಂತಾಗಿದೆ.

    ಚರಂಡಿ ನೀರಿನಿಂದ ಹೆಚ್ಚಾಗಿರುವ ಸೊಳ್ಳೆಗಳ ಕಾಟದಿಂದ ಜನರು ಬೇಸತ್ತಿದ್ದಾರೆ. ಇದರಿಂದ ಮಲೇರಿಯಾ, ಡೆಂಘೆ, ಚಿಕೂನ್​ಗುನ್ಯಾ ಮತ್ತಿತರ ರೋಗಗಳು ಹರಡುವ ಭೀತಿಯಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

    ಈ ವಾರ್ಡ್​ನಲ್ಲಿ ರಸ್ತೆಗಳೇ ಇಲ್ಲ. ಇರುವ ರಸ್ತೆಗಳೂ ತಗ್ಗು-ಗುಂಡಿಗಳಿಂದ ಕೂಡಿವೆ. ಮಳೆ ಬಂದರೆ ವಾಹನ ಸಂಚಾರವಿರಲಿ, ನಡೆದಾಡುವುದು ಕಷ್ಟವಿದೆ. ಹಲವೆಡೆ ಬೀದಿದೀಪಗಳಿಲ್ಲ. ಹಾಕುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದಾಗಿ ವಾರ್ಡ್​ನ ಕೆಲವೆಡೆ ಕತ್ತಲು ಆವರಿಸಲಿದೆ. ಇಂಥ ಪ್ರದೇಶದ ಮನೆಗಳ ಮುಂದೆ ನಿಲ್ಲಿಸಿದ ವಾಹನಗಳ ಪೆಟ್ರೋಲ್ ಕಳ್ಳತನ ನಡೆದಿದೆ. ಸರಗಳ್ಳತನಗಳು ನಡೆದಿವೆ ಎಂಬುದು ನಿವಾಸಿಗಳ ಆರೋಪ.

    ನಿರಂತರ ಕುಡಿಯುವ ನೀರು ಯೋಜನೆಯಡಿ ನೀರು ಪೂರೈಕೆ ವ್ಯವಸ್ಥೆ ಸಮರ್ಪಕವಾಗಿಲ್ಲ. ರಾತ್ರಿ ನೀರು ಬಿಡಲಾಗುತ್ತಿದೆ. ಅದಕ್ಕಾಗಿ ಕಾಯುತ್ತ ಕುಳಿತುಕೊಳ್ಳುವ ಜನರು ನಳಗಳನ್ನು ಚಾಲೂ ಮಾಡಿಟ್ಟು ಮಲಗಿಬಿಡುತ್ತಾರೆ. ಸರಹೊತ್ತಿನಲ್ಲಿ ನೀರು ಬಿಡುವುದರಿಂದ ಚಾಲೂ ಇರುವ ನಲ್ಲಿಗಳಿಂದ ಅಪಾರ ಪ್ರಮಾಣದ ನೀರು ಚರಂಡಿ ಸೇರುತ್ತದೆ. ನೀರು ಪೂರೈಕೆಗೆ ಸಮಯ ನಿಗದಿಪಡಿಸದ ಕಾರಣ ಜನರಿಗೆ ತೊಂದರೆಯಾಗಿದೆ. ಈ ಲೇಔಟ್​ನ ಉದ್ಯಾನಗಳಲ್ಲಿ ಕಸಕಂಟಿಗಳು ಬೆಳೆದಿದ್ದು ವಿಷಜಂತುಗಳ ವಾಸಸ್ಥಾನವಾಗಿದೆ.

    ಸಿಬ್ಬಂದಿ ನೇಮಿಸಲು ಒತ್ತಾಯ

    ವಾರ್ಡ್​ನ ಚರಂಡಿಗಳ ಸ್ವಚ್ಛತೆಗೆ ಪೌರ ಸಿಬ್ಬಂದಿ ನೇಮಿಸಬೇಕು. ಚರಂಡಿ ಇಲ್ಲದ ಕಡೆ ಚರಂಡಿ ನಿರ್ವಿುಸಬೇಕು. ರಸ್ತೆಗಳನ್ನು ದುರಸ್ತಿಪಡಿಸಬೇಕು. ವಿದ್ಯುತ್ ಕಂಬಗಳಿಗೆ ವಿದ್ಯುದ್ದೀಪಗಳನ್ನು ಅಳವಡಿಸಬೇಕು. ಹಾತಲಗೇರಿ ನಾಕಾದಿಂದ ಪಿಪಿಜಿ ಕಾಲೇಜ್​ವರೆಗೆ, ರಿಂಗ್ ರಸ್ತೆಗೆ ವಿದ್ಯುದ್ದೀಪ ಅಳವಡಿಸಬೇಕು. ಪಿ ಆಂಡ್ ಟಿ ಕ್ವಾರ್ಟರ್ಸ್ ಹತ್ತಿರದ ಹೈಮಾಸ್ಟ್ ದೀಪವನ್ನು ದುರಸ್ತಿ ಮಾಡಬೇಕು ಎಂದು ವಾರ್ಡ್ ನಿವಾಸಿಗಳಾದ ಚಂದ್ರಕಾಂತ ಚವ್ಹಾಣ, ಭಾಷಾ ಮಲ್ಲಸಮುದ್ರ, ಈಶ್ವರ ಲಕ್ಷ್ಮೇಶ್ವರ ಮತ್ತಿತರರು ಒತ್ತಾಯಿಸಿದ್ದಾರೆ.

    ನಿಸರ್ಗ ಬಡಾವಣೆಯಲ್ಲಿ ಚರಂಡಿ ಸ್ವಚ್ಛಗೊಳಿಸಲು ಸೂಚಿಸಲಾಗುವುದು. ಇತರ ಸಮಸ್ಯೆಗಳ ಪರಿಹಾರಕ್ಕೂ ಗಮನ ಹರಿಸಲಾಗುವುದು.

    | ರಮೇಶ ಜಾಧವ, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts