More

    ಗುಜ್ಜರಕೆರೆ ನೀರು ಶುದ್ಧೀಕರಣವೇ ಸವಾಲು, 4 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ

    ಪ್ರಕಾಶ್ ಮಂಜೇಶ್ವರ ಮಂಗಳೂರು

    ಸಾರ್ಟ್ ಸಿಟಿ ಯೋಜನೆಯಡಿ ಐತಿಹಾಸಿಕ ಗುಜ್ಜರಕೆರೆಯ ಸಮಗ್ರ ಅಭಿವೃದ್ಧಿ ಕಾಮಗಾರಿ ಸಾಗಿದ್ದು, ಕೆರೆ ಆಸುಪಾಸು ಹೊಸ ಚಿತ್ರಣ ಮೂಡಿದೆ.

    ಒಳಚರಂಡಿ ಮರುನಿರ್ಮಾಣ ಕಾಮಗಾರಿ ಮುಗಿದಿದೆ. ಸುತ್ತಲಿನ ಪಿಟ್ ಮತ್ತು ಅವೈಜ್ಞಾನಿಕ ಹಳೇ ಚರಂಡಿಗಳಿಂದ ಬಸಿದು ಕೆರೆ ಸೇರುತ್ತಿದ್ದ ಕಲುಷಿತ ನೀರಿನ ಹರಿವು ನಿಂತಿದೆ ಎಂದು ಅಧಿಕಾರಿ ವರ್ಗ ಹೇಳುತ್ತಿದೆ. ಆದರೆ ಇತ್ತೀಚೆಗೆ ಮಿನುಗಾರಿಕಾ ಕಾಲೇಜು ತಜ್ಞರು ನೀಡಿದ ವರದಿಯೂ ಕೆರೆ ನೀರು ಮಲಿನ ಮುಕ್ತವಾಗಿಲ್ಲ. ಈ ನೀರು ಕುಡಿಯಲು ಯೋಗ್ಯವಾಗಿಲ್ಲ ಎನ್ನುವ ವಾಸ್ತವವನ್ನು ಮತ್ತೊಮ್ಮೆ ಮುಂದಿಟ್ಟಿದೆ. ಪ್ರಸ್ತುತ ಕೆರೆ ನೀರು ಸಾಕಷ್ಟು ಶುದ್ದೀಕರಣಗೊಂಡಿದೆ. ಆದರೆ ಕುಡಿಯಲು ಸಾಧ್ಯವಾಗುವಷ್ಟು ಶುದ್ದವಾಗಿಲ್ಲ ಎನ್ನುತ್ತಾರೆ ಇಲಾಖೆ ತಜ್ಞರು.

    ಕೆರೆ ನೀರಿನ ಇತರ ಸಂಪರ್ಕಗಳನ್ನು ತೆರವುಗೊಳಿಸಿದ ಬಳಿಕ ನೀರು ಶುದ್ಧೀಕರಣ ಉದ್ದೇಶದಿಂದ ಕೆಲ ಜಾತಿಯ ಮೀನುಗಳನ್ನು ಕೂಡ ನೀರಿನಲ್ಲಿ ಬಿಡಲಾಗಿದೆ. ಓಕ್ಸಿಡೇಶನ್ ಪೋಂಡ್ ತಂತ್ರಜ್ಞಾನ ಮೂಲಕ ನೀರನ್ನು ಇನ್ನಷ್ಟು ಶುದ್ದಗೊಳಿಸುವ ಕಾರ್ಯ ನಡೆಯಲಿದೆ. ಇದು ನಿರಂತರ ನಡೆಯಬೇಕಾದ ಪ್ರಕ್ರಿಯೆ ಎಂದು ಇಲಾಖೆಯ ತಾಂತ್ರಿಕ ವಿಭಾಗದ ಅಧಿಕಾರಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಓಕ್ಸಿಡೇಶನ್ ಪೋಂಡ್ ತಂತ್ರಜ್ಞಾನದಲ್ಲಿ ಕೆರೆಯ ನೀರನ್ನು ಕಾರಂಜಿಯಂತೆ ಚಿಮ್ಮಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ನೀರು ವಾತಾವರಣದ ಆಮ್ಲಜನಕ ಹೀರಿ ಶುದ್ಧಗೊಳ್ಳುವುದು.

    ಕೆರೆ ಅಭಿವೃದ್ಧಿ ಕಾಮಗಾರಿ 4 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದ್ದು, ಶೇ.50 ಪೂರ್ಣಗೊಂಡಿದೆ. ಹೂಳೆತ್ತುವ ಕಾಮಗಾರಿ ನಡೆದಿದ್ದರೂ ಕೆರೆಯ ಬದಿಯಲ್ಲಿ ಹೂಳು ತುಂಬಿರುವುದು ಮತ್ತು ಅವುಗಳ ಜೊತೆ ಮದ್ಯ, ಹಾಗೂ ಇತರ ಪಾನೀಯದ ಬಾಟಲಿಗಳು ತುಂಬಿರುವುದು ಕಂಡುಬರುತ್ತದೆ. ಕೆರೆ ಹೂಳೆತ್ತುವ ಸಂದರ್ಭ ಬದಿಯ ಹೂಳನ್ನು ಎತ್ತಲಾಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

    ಸ್ಮಾರ್ಟ್ ಸಿಟಿ ಅಧಿಕಾರಿಗಳ ಲೆಕ್ಕಾಚಾರದಂತೆ ನಡೆದರೆ ಮುಂದಿನ ಮೇ ತಿಂಗಳ ಒಳಗೆ ಕೆರೆ ಅಭಿವೃದ್ದಿ ಕಾಮಗಾರಿ ಪೂರ್ಣಗೊಳ್ಳಲಿದೆ. ಕೆರೆಯ ಸುತ್ತಲೂ ಆವರಣ ಗೋಡೆ, ಸ್ಟೀಲ್ ರೇಲಿಂಗ್, ಫುಟ್‌ಪಾತ್, ಸೈಕ್ಲಿಂಗ್ ಟ್ರಾೃಕ್, ಟೇಬಲ್ ಮುಂತಾದ ಕೆಲಸಗಳು ನಡೆಯಬೇಕಿವೆ. ಕೆರೆಯ ಸುತ್ತಲಿನ ಮೆಟ್ಟಿಲುಗಳು ದುರಸ್ತಿಗೊಂಡಿದ್ದು, ಸ್ವಚ್ಛಗೊಂಡಿರುವ ಪರಿಸರ, ಮರಗಳು ಸಂದರ್ಶಕರಿಗೆ ಮುದ ನೀಡುತ್ತವೆ.

    ಜನಪ್ರತಿನಿಧಿಗಳು ಕೆರೆ ಅಭಿವೃದ್ಧಿಗೆ ಸಾಕಷ್ಟು ಮುತುವರ್ಜಿ ವಹಿಸುತ್ತಿದ್ದಾರೆ. ಈ ಕೆರೆ ಇಡೀ ಮಂಗಳೂರಿನ ಸಂಪತ್ತು. ದೈವಿಕವಾಗಿ ಆಲೋಚಿಸಿದರೆ ಇದು ನಾಡಿನ ಗ್ರಾಮ ದೇವತೆ ಮಂಗಳಾಂಬೆಯ ಜಳಕದ ಕೆರೆಯಾಗಿಯೂ ಪ್ರಸಿದ್ಧಿ ಪಡೆದಿದೆ. ಕಾಮಗಾರಿ ಒಂದು ಸಮಧಾನಕರ ಹಂತ ತಲುಪಿದೆ. ಕೆರೆ ನೀರು ಶುದ್ಧೀಕರಣ ವಿಷಯದಲ್ಲಿ ಇನ್ನಷ್ಟು ಕೆಲಸಗಳು ಆಗಬೇಕು.

    ನೇಮು ಕೊಟ್ಟಾರಿ, ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ

    ಸ್ಮಾರ್ಟ್ ಸಿಟಿ ಯೋಜನೆಯಡಿ ಗುಜ್ಜರಕೆರೆ ಅಭಿವೃದ್ದಿ ಕಾಮಗಾರಿ ಉತ್ತಮ ರೀತಿಯಲ್ಲಿ ಸಾಗಿದೆ. ಹೂಳೆತ್ತುವ, ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದೆ. ಭವಿಷ್ಯದಲ್ಲೂ ಗುಜ್ಜರಕೆರೆ ಮಂಗಳೂರಿಗೆ ಒಳ್ಳೆಯ ಕೊಡುಗೆಯಾಗಲಿದೆ.

    ಪ್ರೇಮಾನಂದ ಶೆಟ್ಟಿ, ಮೇಯರ್ ಮನಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts