More

    ಲಂಡಿ ಹಳ್ಳ ಸ್ವಚ್ಛತೆ ಕಾರ್ಯ ಶುರು

    ಲಕ್ಷ್ಮೇಶ್ವರ: ಪಟ್ಟಣದ ಜನವಸತಿ ಪ್ರದೇಶದಲ್ಲಿ ಹರಿದಿರುವ ಲಂಡಿ ಹಳ್ಳದಲ್ಲಿನ ಆಳೆತ್ತರ ಬೆಳೆದು ನಿಂತಿರುವ ಗಿಡಗಂಟಿ, ಕಸ, ಗಲೀಜು ನೀರು ಮತ್ತು ಅಕ್ಕಪಕ್ಕದ ತಿಪ್ಪೆಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಳ್ಳುವ ಮೂಲಕ ಪುರಸಭೆಯವರು ಅನೇಕ ವರ್ಷಗಳ ಸಮಸ್ಯೆ ನಿವಾರಣೆಗೆ ಮುಂದಾಗಿದ್ದಾರೆ.
    ಹಳ್ಳದಕೇರಿ, ಕೆಂಚಲಾಪುರ, ಆಸಾರ, ಬಳಿಗಾರ ಓಣಿಗೆ ಹೊಂದಿಕೊಂಡು ಹರಿಯುತ್ತಿರುವ ಈ ಹಳ್ಳದುದ್ದಕ್ಕೂ ಗಲೀಜು ನೀರು ನಿಲ್ಲುತ್ತಿತ್ತು. ಗಿಡಗಂಟಿಗಳು ಬೆಳೆದು ವಿಷ ಜಂತುಗಳಿಂದ ತಾಣವಾಗಿತ್ತು. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೆ ಅಕ್ಕಪಕ್ಕದ ಮನೆಗಳಿಗೆ ನುಗ್ಗುವಂತಾಗಿತ್ತು. ಹಳ್ಳದ ಸುತ್ತಮುತ್ತಲಿನ ಪ್ರದೇಶದ ಜನರು ಗಬ್ಬುವಾಸನೆ, ಸೊಳೆಗಳ್ಳ ಕಡಿತದಿಂದ ಬೇಸತ್ತಿದ್ದರು. ವಿಷ ಜಂತುಗಳ ಭಯದಲ್ಲೇ ಕಾಲ ಕಳೆಯುವಂತಾಗಿತ್ತು.
    ಮಳೆಗಾಲ ಪ್ರಾರಂಭ ದೊಳಗೆ ಈ ಹಳ್ಳ ಸ್ವಚ್ಛಗೊಳಿಸ ಬೇಕೆಂದು ನಿರ್ಣಯಿಸಿದ ಪುರಸಭೆ ಜಿಲ್ಲಾ ನಗರ ಯೋಜನಾ ನಿರ್ದೇಶಕರಿಗೆ ಲಂಡಿ ಹಳ್ಳದ ಸ್ವಚ್ಛತೆಗೆ ಗದಗ, ನರೇಗಲ್, ಶಿರಹಟ್ಟಿ, ಮುಳಗುಂದ, ಮುಂಡರಗಿ ಪುರಸಭೆಗಳ ಜೆಸಿಬಿ ಕಳುಹಿಸುವಂತೆ ಕೋರಲಾಗಿತ್ತು. ಈ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಮೇ 22ರಂದು ಹಳ್ಳದ ಸ್ವಚ್ಛತೆ ಕಾರ್ಯ ಕೈಗೊಳ್ಳಲು ಅನುಕೂಲ ಮಾಡಿಕೊಟ್ಟರು. ಈ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ಹಾಗೂ ನೆರೆಯ ಪುರಸಭೆ, ಪಟ್ಟಣ ಪಂಚಾಯಿತಿಗಳ ಜೆಸಿಬಿಗಳಿಂದ ಸ್ವಚ್ಛತಾ ಕಾರ್ಯ ಶನಿವಾರ ಭರದಿಂದ ಸಾಗಿತು.
    ತಹಸೀಲ್ದಾರ್ ಎಸ್.ಆರ್. ಪಾಟೀಲ, ಪಿಎಸ್​ಐ ಶಿವಯೋಗಿ ಲೋಹಾರ, ಪುರಸಭೆ ಸದಸ್ಯರಾದ ಜಯವ್ವ ಅಂದಲಗಿ, ಮಂಜುಳಾ ಗುಂಜಳ, ಎಂ.ಆರ್. ಪಾಟೀಲ, ದುಂಡೇಶ ಕೊಟಗಿ, ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಗಿರೀಶ ಹಿರೇಮಠ, ಎಸ್.ಪಿ. ಲಿಂಬಯ್ಯನಮಠ, ವಿನೋದ ಬದಿ, ಬ.ಕೆ. ಬೆಳವಗಿ, ಪೌರ ಕಾರ್ವಿುಕ ಮುಖಂಡ ದೇವಪ್ಪ ನಂದೆಣ್ಣವರ ಹಾಗೂ ಪೌರ ಕಾರ್ವಿುಕರಿದ್ದರು.
    ವರದಿಗೆ ಸ್ಪಂದನೆ: ಲಕ್ಷ್ಮೇಶ್ವರದಲ್ಲಿ ಜನರ ಆರೋಗ್ಯಕ್ಕೆ ಮಾರಕವಾಗಿರುವ ಲಂಡಿಹಳ್ಳ ಸ್ವಚ್ಛತೆ ಅಗತ್ಯತೆ ಕುರಿತು ವಿಜಯವಾಣಿಯಲ್ಲಿ ಮೇ 17ರಂದು ವರದಿ ಪ್ರಕಟವಾಗಿತ್ತು. ಅದೇ ದಿನ ಗದಗ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಮೇ 22, 23ರಂದು ಹಳ್ಳದ ಸ್ವಚ್ಛಗೊಳಿಸುವಂತೆ ಜಿಲ್ಲೆಯ ಪುರಸಭೆ, ಪಪಂಗಳು ಜೆಸಿಬಿ ನೀಡುವಂತೆ ಆದೇಶಿಸಿದ್ದರು.
    ಜನರ ಸಹಕಾರ ಅಗತ್ಯ: ಲಂಡಿ ಹಳ್ಳ ಅನೇಕ ವರ್ಷಗಳಿಂದ ಸ್ವಚ್ಛವಾಗಿರಲಿಲ್ಲ. ಹಿರಿಯ ಅಧಿಕಾರಿಗಳ ಸಹಕಾರದಿಂದ ಗದಗ ಜಿಲ್ಲೆಯ ನರೇಗಲ್, ಶಿರಹಟ್ಟಿ, ಮುಂಡರಗಿ, ಮುಳಗುಂದ, ಗದಗ ನಗರಸಭೆಯ ಜೆಸಿಬಿಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. 1 ಹಿಟಾಚಿ ಬಾಡಿಗೆ ಪಡೆಯಲಾಗಿದ್ದು, ಮೂರ್ನಾಲ್ಕು ದಿನಗಳ ಕಾಲ ಸ್ವಚ್ಛತೆ ಕಾರ್ಯ ನಡೆಯಲಿದೆ. ಆನಂತರ ಹಳ್ಳದ ಅಕ್ಕಪಕ್ಕವಿರುವ ತಿಪ್ಪೆ, ಬಣವೆಗಳನ್ನು ತೆರವುಗೊಳಿಸಲಾಗುವುದು. ತಿಪ್ಪೆ, ಬಣವೆ ಹಾಕಿದವರಿಗೆ ದಂಡ ವಿಧಿಸಲಾಗುವುದು. ಜನರ ಸಹಕಾರವಿದ್ದರೆ ಮಾತ್ರ ಹಳ್ಳ ಸ್ವಚ್ಛವಾಗಿರಲು ಸಾಧ್ಯ ಎಂದು ಲಕ್ಷ್ಮೇಶ್ವರ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ತಿಳಿಸಿದ್ದಾರೆ.

    ಹಳ್ಳದಲ್ಲಿ ಆಳೆತ್ತರ ಕಸ ಬೆಳೆದಿದ್ದರಿಂದ ನೀರು ಹರಿಯದೆ ಕೊಳಚೆ ನಿರ್ವಣವಾಗಿತ್ತು. ವಿಷ-ಜಂತುಗಳು ಮನೆ ಮಾಡಿದ್ದವು. ಮಳೆ ಬಂದಾಗ ಕೊಳಚೆ ನೀರು ಮನೆ, ಓಣಿಯಲ್ಲಿ ಹರಿಯುತ್ತಿತ್ತು. ಹಳ್ಳದ ಸುತ್ತಮುತ್ತಲಿನ ಜನರು, ಜಾನುವಾರು ರೋಗ ಬಾಧೆ, ಪ್ರಾಣಭಯದಲ್ಲಿ ಬದುಕುವಂತಾಗಿತ್ತು. ಪುರಸಭೆ ಸ್ವಚ್ಛತಾ ಕಾರ್ಯ ಕೈಗೊಂಡಿರುವುದು ಉತ್ತಮ ಕಾರ್ಯ.
    | ಜಯವ್ವ ಅಂದಲಗಿ, ವಾರ್ಡ್ ಸದಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts