More

    ದ.ಕ. ಒಡಿಎಫ್ ಪ್ಲಸ್ 1 ಘೋಷಣೆ

    ಮಂಗಳೂರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಆಯುಕ್ತರ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈಯುಕ್ತಿಕ ಶೌಚಗೃಹ ನಿರ್ಮಾಣ ಹಾಗೂ ಘನತ್ಯಾಜ್ಯ ನಿರ್ವಹಣೆಯಲ್ಲಿ ಉತ್ತಮ ಪ್ರಗತಿ ಸಾಧಿಸಿರುವ ಆಧಾರದ ಮೇಲೆ 354 ಗ್ರಾಮ, 223 ಗ್ರಾಪಂ, 7 ತಾಲೂಕು ಸೇರಿ ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತ(Open Defecation Free) ಪ್ಲಸ್-1 ಎಂದು ಘೋಷಿಸಲಾಗಿದೆ.

    ಭಾನುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾದ ಸರಳ ಸಮಾರಂಭದಲ್ಲಿ ಜಿಲ್ಲಾ ಉಪಕಾರ್ಯದರ್ಶಿ, ಸ್ವಚ್ಛ ಭಾರತ್ ಮಿಷನ್(ಗ್ರಾ) ನೋಡೆಲ್ ಅಧಿಕಾರಿ ಕೆ.ಆನಂದ ಕುಮಾರ್ ಈ ಕುರಿತ ಘೋಷಣಾ ಫಲಕ ಅನಾವರಣಗೊಳಿಸಿದರು.

    ಜಿಲ್ಲೆ ಈಗಾಗಲೇ ಬಯಲು ಬಹಿರ್ದೆಸೆ ಮುಕ್ತವಾಗಿದ್ದು, ಅದರ ಮುಂದಿನ ಹಂತವೇ ಒಡಿಎಫ್ ಪ್ಲಸ್-1 ಘೋಷಣೆ. ಶೌಚಗೃಹಗಳ ಸುಸ್ತಿರ ನಿರ್ವಹಣೆ, ಘನತ್ಯಾಜ್ಯ ವಿಲೇವಾರಿ ವಿಚಾರವಾಗಿ ಈ ಸ್ಥಾನಮಾನ ಸಿಕ್ಕಿದೆ. ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿಯ ಕುಟುಂಬಗಳಿಗೆ ಶೌಚಗೃಹ ಸೌಲಭ್ಯ ಕಲ್ಪಿಸಲಾಗಿದ್ದು, ಶಾಲೆ ಮತ್ತು ಅಂಗನವಾಡಿಗಳಲ್ಲಿ ಶೌಚಗೃಹ ನಿರ್ಮಾಣ ಮಾಡಿ ಬಳಕೆ ಮಾಡಲಾಗುತ್ತಿದೆ. ಅಗತ್ಯ ಸ್ಥಳಗಳಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಾಣ ಮಾಡಲಾಗಿದೆ ಎಂದರು.

    ಘನತ್ಯಾಜ್ಯ ನಿರ್ವಹಣೆ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡಲು ಪ್ರತಿ ಮನೆಗೆ ಕಸದ ಬುಟ್ಟಿ ವಿತರಿಸಿದ್ದು, ಸ್ವಚ್ಛ ವಾಹಿನಿ ಮೂಲಕ ತ್ಯಾಜ್ಯ ಸಂಗ್ರಹಣೆ ಮಾಡಿ ಸ್ವಚ್ಛ ಸಂಕೀರ್ಣದಲ್ಲಿ ಶೇಖರಿಸಿ ಮರುಬಳಕೆ ಮೂಲಕ ಸಂಪನ್ಮೂಲವಾಗಿ ಮಾರ್ಪಡಿಸಲಾಗುತ್ತಿದೆ. ಇತರ ಕಸವನ್ನು ವೈಜ್ಞಾನಿಕ ವಿಲೇವಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸುವ ಮೂಲಕ ಸ್ವಚ್ಛ ಪರಿಸರ ನಿರ್ಮಿಸಲು ಕ್ರಮ ವಹಿಸಲಾಗಿದೆ ಎಂದರು.
    ಮುಖ್ಯ ಯೋಜನಾಧಿಕಾರಿ ಸಂಧ್ಯಾ ಕೆ.ಎಸ್, ಯೋಜನಾ ನಿರ್ದೇಶಕ ಎಚ್.ಆರ್.ನಾಯಕ್, ಜಿಲ್ಲಾ ಪಂಚಾಯಿತಿ ಅಧೀನ ಕಚೇರಿಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts