More

    ಮತ್ತೆ ಐದು ವರ್ಷ ಸ್ವಚ್ಛ ಮಂಗಳೂರು

    ಮಂಗಳೂರು: 2014ರಿಂದ 2019ರವರೆಗೆ ಕೈಗೊಳ್ಳಲಾದ ಸ್ವಚ್ಛ ಮಂಗಳೂರು ಅಭಿಯಾನವನ್ನು ಮತ್ತೆ ಐದು ವರ್ಷ ಕಾಲ ಮುಂದುವರಿಸಲು ರಾಮಕೃಷ್ಣ ಮಠದ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಗಿದೆ.
    ರಾಮಕೃಷ್ಣ ಮಠದಲ್ಲಿ ಭಾನುವಾರ ಆಯೋಜಿಸಲಾದ ‘ಸ್ವಚ್ಛ ಮಂಗಳೂರು ಮುಂದೇನು’ ಎಂಬ ಕಾರ್ಯಕ್ರಮದಲ್ಲಿ ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಈ ತೀರ್ಮಾನಕ್ಕೆ ಬರಲಾಯಿತು.
    ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಪಾಲ್ಗೊಂಡ ಹಿರಿಯ ಕಾರ್ಯಕರ್ತರನ್ನು ಸೇರಿಸಿ ಸ್ವಚ್ಛ ಮಂಗಳೂರು ಫೌಂಡೇಶನ್ ಸ್ಥಾಪಿಸಲಾಗುವುದು. ಇದರ ಮೂಲಕ ಮುಂದಿನ ಎಲ್ಲ ಸ್ವಚ್ಛತಾ ಅಭಿಯಾನದ ಕಾರ್ಯಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಸ್ವಚ್ಛ ಮಂಗಳೂರು ಅಭಿಯಾನದೊಂದಿಗೆ ಹಸಿರು ಮಂಗಳೂರು ಯೋಜನೆಯನ್ನೂ ಸೇರಿಸಿಕೊಂಡು ಮುಂದುವರಿಸಲಾಗುವುದು.

    ಸಭೆಯಲ್ಲಿ ಪಾಲ್ಗೊಂಡ ಸರ್ವರೂ ಇಂತಹ ಅಭಿಯಾನವನ್ನು ಮುಂದುವರಿಸಿಕೊಂಡು ಹೋಗಲೇಬೇಕು, ಅದರಲ್ಲೂ ಸ್ವಚ್ಛ ಮನಸ್‌ನಂತಹ ಕಾರ್ಯಕ್ರಮಗಳು ಯುವಮನಸ್ಸುಗಳನ್ನು ಸ್ವಚ್ಛತೆಯತ್ತ ಜಾಗೃತಗೊಳಿಸುತ್ತವೆ. ಆಯಾ ವಾರ್ಡ್‌ಗಳಲ್ಲೂ ಸ್ವಚ್ಛತೆಯ ಕುರಿತು ಸಂಘಟನೆಗಳನ್ನು ಸೇರಿಸಿಕೊಂಡು ಅವರನ್ನು ಸ್ಥಳೀಯವಾಗಿ ಜವಾಬ್ದಾರರನ್ನಾಗಿ ಮಾಡುವುದು ಮುಂತಾದ ಸಲಹೆಗಳು ಕೇಳಿಬಂದವು.

    ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ‘ವೇದಾಂತ ಕೇಸರಿ’ ಸಂಪಾದಕ ಸ್ವಾಮಿ ಮಹಾಮೇಧಾನಂದಜಿ, ಸ್ವಚ್ಛತಾ ಅಭಿಯಾನವೆಂಬ ಸಂಘಟಿತ ಸೇವೆ ಮುಂದುವರಿಯಬೇಕು. ಕರೊನೋತ್ತರ ವರ್ಷದಲ್ಲಿ ಸಮಾಜದಲ್ಲಿ ಅಪೌಷ್ಟಿಕತೆ ದೊಡ್ಡ ಸವಾಲಾಗಿದ್ದು, ಸ್ವಸ್ಥಮಂಗಳೂರು ಎನ್ನುವ ಯೋಜನೆ ಸೇರಿಸಿ ಸ್ಲಂನಲ್ಲಿರುವ ಬಡ ಗರ್ಭಿಣಿಯರಿಗೆ ಪೌಷ್ಟಿಕಾಹಾರ ಒದಗಿಸುವುದೂ ಸೂಕ್ತ ಎಂದರು.

    ನಿಟ್ಟೆ ಸಂಸ್ಥೆಗಳ ಮುಖ್ಯಸ್ಥ ನಿಟ್ಟೆ ವಿನಯ ಹೆಗ್ಡೆ ರಾಮಕೃಷ್ಣ ಮಿಷನ್ ಕೈಗೊಳ್ಳುವ ಕಾರ್ಯಗಳಿಗೆ ಬೆಂಬಲ ಇದೆ ಎಂದರು. ಸಹ್ಯಾದ್ರಿ ಸಂಸ್ಥೆಗಳ ಮುಖ್ಯಸ್ಥ ಡಾ.ಮಂಜುನಾಥ ಭಂಡಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಹಾಜರಿದ್ದರು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಸ್ವಾಗತಿಸಿದರು. ಸ್ವಚ್ಛ ಮಂಗಳೂರು ಸಂಚಾಲಕ ಏಕಗಮ್ಯಾನಂದಜಿ ಅಭಿಯಾನ ಸಾಗಿ ಬಂದ ಹಾದಿಯನ್ನು ವಿವರಿಸಿದರು.

    ಮುಂದುವರಿಯಲಿ ಸ್ವಚ್ಛತಾ ಅಭಿಯಾನ: ಕಲಾವಿದರನ್ನು ಬಳಸಿಕೊಂಡು ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಬೇಕು ಎಂದು ಮೆಜೀಶಿಯನ್ ಕುದ್ರೋಳಿ ಗಣೇಶ್, ಕೇವಲ ಸ್ವಚ್ಛತಾ ಕಾರ್ಯವಷ್ಟೇ ಅಲ್ಲ, ಕಸ ಎಸೆದು ಗಲೀಜು ಮಾಡುವವರ ಮೇಲೆ ಕಠಿಣ ಕ್ರಮ, ದಂಡ ಹಾಕಬೇಕು ಎಂದು ಸಾಮಾಜಿಕ ಕಾರ್ಯಕರ್ತ ದೀಪು ಶೆಟ್ಟಿಗಾರ್, ಮಕ್ಕಳಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸುವುದು ಶಾಶ್ವತ ಕ್ರಮ ಎಂದು ಉಪನ್ಯಾಸಕಿ ಸರಿತಾ, ರಾಮಕೃಷ್ಣ ಆಶ್ರಮವೇ ಅಭಿಯಾನದ ನೇತೃತ್ವ ವಹಿಸಿದರೆ ಹೆಚ್ಚು ವಿಶ್ವಾಸಾರ್ಹತೆ ಇರುತ್ತದೆ ಎಂದು ಸದಾನಂದ ಉಪಾಧ್ಯಾಯ ಅಭಿಪ್ರಾಯಪಟ್ಟರು. ಜಿಲ್ಲಾದ್ಯಂತ ಸ್ವಚ್ಛತಾ ಕಾರ್ಯಕ್ಕೆ ಸಂಘಟನೆಗಳಿಗೆ ರಾಮಕೃಷ್ಣ ಆಶ್ರಮ ತರಬೇತಿ ನೀಡಬೇಕೆಂದು ರಾಜಮಣಿ ರಾಮಕುಂಜ, ಕಸ ಪ್ರತ್ಯೇಕಿಸುವಿಕೆ ಬಗ್ಗೆ ಮನೆ ಮನೆಗಳಲ್ಲಿ ಜಾಗೃತಿಗೆ ವಿಭಿನ್ನ ಕಾರ್ಯವಾಗಬೇಕು ಎಂದು ಮನಪಾ ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ, ವಾರ್ಡ್ ಮಟ್ಟದಲ್ಲಿ ಕಸ ಸಂಗ್ರಹ ಕೇಂದ್ರ ನಿರ್ಮಾಣವಾಗಬೇಕೆಂದು ಮಾಜಿ ಕಾರ್ಪೊರೇಟರ್ ಪ್ರಕಾಶ್ ಸಾಲಿಯಾನ್ ಆಶಿಸಿದರು.

    ಪಚ್ಚನಾಡಿ ತ್ಯಾಜ್ಯ ಸವಾಲು ಕಗ್ಗಂಟು: ಪಚ್ಚನಾಡಿಯಲ್ಲಿರುವ 3 ಲಕ್ಷ ಟನ್‌ಗೂ ಹೆಚ್ಚು ಪ್ರಮಾಣದ ತ್ಯಾಜ್ಯ ವಿಲೇ ದೊಡ್ಡ ಸವಾಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಕಳವಳ ವ್ಯಕ್ತಪಡಿಸಿದರು. 1970ರಿಂದೀಚೆಗೆ ಪಚ್ಚನಾಡಿಗೆ ಕಸ ಪ್ರತ್ಯೇಕಿಸದೆ ಡಂಪ್ ಮಾಡಿದ್ದರಿಂದ ಈಗ ಪ್ರತ್ಯೇಕಿಸಲು ಸಾಧ್ಯವಾಗದ ರೀತಿ ಬೆಳೆದುನಿಂತಿದೆ. ಹಲವು ಸಂಸ್ಥೆಗಳು ಪರಿಶೀಲನೆ ನಡೆಸಿದ್ದರೂ ಏನೂ ಮಾಡಲಾಗಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts