More

    ಕಾರ್ಮಿಕರಿಗೆ ಸೌಲಭ್ಯ ಒದಗಿಸಲು ಸಿಐಟಿಯು ಒತ್ತಾಯ

    ಮಂಡ್ಯ: ಬೀಡಿ ಕಾರ್ಮಿಕರಿಗೆ ಕಾನೂನು ಬದ್ಧ ಸೌಲಭ್ಯ ಹಾಗೂ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾ ಬೀಡಿ ಕಾರ್ಮಿಕರ ಸಂಘ ಮತ್ತು ಸಿಐಟಿಯು ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ರಾಜ್ಯದ 8 ಲಕ್ಷ ಸೇರಿದಂತೆ ದೇಶದಲ್ಲಿ ಸುಮಾರು 96 ಲಕ್ಷ ಜನ ಬೀಡಿ ಕಾರ್ಮಿಕರಿದ್ದಾರೆ. ಆದರೆ ಇತ್ತೀಚೆಗೆ ಸರ್ಕಾರದ ನೀತಿಗಳ ಪರಿಣಾಮ ಕೆಲಸವಿಲ್ಲದೆ ಸಂಕಟಮಯ ಬದುಕು ನಡೆಸುವಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.
    ಆದ್ದರಿಂದ ಒಂದು ಸಾವಿರ ಬೀಡಿಗೆ ಕನಿಷ್ಟ 395 ರೂ ನೀಡಬೇಕು. ನಿರುದ್ಯೋಗಿಗಳಾಗುತ್ತಿರುವ ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವುದರ ಜತೆಗೆ ಪರ್ಯಾಯ ಉದ್ಯೋಗದ ಯೋಜನೆ ಪ್ರಕಟಿಸಬೇಕು. ಕಾನೂನು ಬಾಹಿರ ಬೀಡಿ ಉತ್ಪಾದನೆ ನಿಲ್ಲಿಸಬೇಕು. ರಾಜ್ಯದಲ್ಲಿ ಕನಿಷ್ಟ ಕೂಲಿಯನ್ನು ಬಾಕಿ ಸಹಿತ ಜಾರಿಗೆ ತರಬೇಕು. ಬೀಡಿ ರೋಲರ್ಸ್‌ಗಳನ್ನು ಹೊರತುಪಡಿಸಿ ಉಳಿದ ಕಾರ್ಮಿಕರಿಗೆ ಮಾಸಿಕ 21 ಸಾವಿರ ರೂ ವೇತನ ನಿಗದಿ ಮಾಡಬೇಕೆಂದು ಆಗ್ರಹಿಸಿದರು.
    ಮಾರುವ ಮತ್ತು ಕೊಳ್ಳುವ ಉಪಗುತ್ತಿಗೆ ವ್ಯವಸ್ಥೆ ರದ್ದುಪಡಿಸಬೇಕು. ಕಾರ್ಮಿಕರನ್ನು ನೇರವಾಗಿ ಪ್ರಧಾನ ಉದ್ಯೋಗದಾತರಿಂದ ಖಾತೆ ಸಂಖ್ಯೆಗಳನ್ನು ನಿಜವಾದ ಕಾರ್ಮಿಕರ ಹೆಸರಿನಲ್ಲಿ ನೀಡಬೇಕು. ಬೀಡಿ ಉದ್ಯಮದಲ್ಲಿ ಸೆಸ್ ಮರುಸ್ಥಾಪಿಸಬೇಕು. ಕಾರ್ಮಿಕರಿಗೆ ಗುರುತಿನ ಚೀಟಿ ಮತ್ತು ಲಾಗ್ ಪುಸ್ತಕವನ್ನು ಕಡ್ಡಾಯವಾಗಿ ವಿತರಿಸಬೇಕು. ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಿದರು.
    ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷೆ ರಜಿಯಾಬೇಗಂ, ಖಜಾಂಚಿ ಸಮೀನಾ, ಕಾರ್ಯದರ್ಶಿ ಸಿ.ಕುಮಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts