More

    ವಿಸ್ಟ್ರಾನ್‌ನಲ್ಲಿ ಕಾರ್ಮಿಕ ಕಾನೂನು ಉಲ್ಲಂಘನೆ ; ನಿಷ್ಪಕ್ಷಪಾತ ತನಿಖೆಗೆ ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಒತ್ತಾಯ

    ಕೋಲಾರ : ವಿಸ್ಟ್ರಾನ್ ಕಂಪನಿಯಲ್ಲಿ ಮಾಲೀಕರಿಂದ ಕಾರ್ಮಿಕರ ಬಗೆಗಿನ ನಿರ್ಲಕ್ಷ್ಯದಿಂದ ಕಾರ್ಮಿಕ ಕಾನೂನು ಉಲ್ಲಂಘನೆಯಾಗಿದ್ದು, ದುರ್ಘಟನೆಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶ ಹೊರತರಬೇಕು ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಸರ್ಕಾರವನ್ನು ಒತ್ತಾಯಿಸಿದರು.

    ನಗರದ ಪತ್ರಕರ್ತರ ಭವನದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಘಟನೆ ಕುರಿತು ಮಾಹಿತಿ ನೀಡಿ, ಕಾರ್ಮಿಕರನ್ನು 12 ಗಂಟೆ ದುಡಿಸಿಕೊಂಡು ನಾಲ್ಕು ತಿಂಗಳಿಂದ ಸಂಬಳ ನೀಡದಿದ್ದರೂ ಕಾರ್ಮಿಕ ಇಲಾಖೆ ಮೌನ ವಹಿಸಿದ್ದುದು ಕಾನೂನು, ಕಾಯ್ದೆ ಉಲ್ಲಂಘನೆಯಾಗಿದೆ. ರಾಜ್ಯ ಸರ್ಕಾರವೇ ಬಂಡವಾಳಗಾರರ ಗುಲಾಮರಂತೆ ಕೆಲಸ ಮಾಡುತ್ತಿದೆ. ಈ ಘಟನೆಗೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ವೈಫಲ್ಯವೇ ಕಾರಣ ಎಂದು ಆರೋಪಿಸಿದರು.

    ಪೊಲೀಸ್ ಇಲಾಖೆ ಒತ್ತಡಕ್ಕೆ ಮಣಿದು ಅಮಾಯಕರನ್ನು ಬಂಧಿಸದ ರೀತಿಯಲ್ಲಿ ಗಮನ ಹರಿಸಬೇಕು. ಆದಷ್ಟು ಬೇಗ ಕೈಗಾರಿಕೆ ಪುನರಾರಂಭ ಮಾಡಬೇಕು, ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಮತ್ತೆ ಕೆಲಸ ಕೊಡಬೇಕು ಹಾಗೂ ಕೆಲಸ ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು. ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಮಾತನಾಡಿ, ಕೈಗಾರಿಗೆ ಸ್ಥಾಪನೆಗೆ ಭೂಮಿ ಕಳೆದುಕೊಂಡ ರೈತರ ಕುಟುಂಬಕ್ಕೆ ಉದ್ಯೋಗ ಕಲ್ಪಿಸಬೇಕೆಂದು ಸರ್ಕಾರದ ಆದೇಶವಿದೆ. ಹೀಗೆ ಉದ್ಯೋಗಕ್ಕೆ ತೆಗೆದುಕೊಂಡವರನ್ನು ಕಾಯಂ ಮಾಡದೆ ಗುತ್ತಿಗೆ ನೌಕರರಾಗಿ ತೆಗೆದುಕೊಳ್ಳುವ ಮೂಲಕ ಮಾಲೀಕರು ಈ ನೆಲದ ಕಾನೂನಿಗೆ ಅಗೌರವ ತರಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ವಿಸ್ಟ್ರಾನ್ ಕಂಪನಿಯ ಕಾರ್ಮಿಕರ ಪರವಾಗಿ ಜೆಸಿಟಿಯು ನಿಲ್ಲಲಿದೆ ಎಂದ ಅವರು, ಸಂಸದ ಎಸ್. ಮುನಿಸ್ವಾಮಿ ಒತ್ತಡ ತಂದು ತನಿಖೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಕಾರ್ಮಿಕರು ತಪ್ಪು ಮಾಡಿದರು ಎಂದು ಎಲ್ಲರನ್ನೂ ಕ್ರಿಮಿನಲ್‌ಗಳ ರೀತಿಯಲ್ಲಿ ನೋಡುವುದು ಸರಿಯಲ್ಲ ಎಂದರು. ಸಿಐಟಿಯು ಅಧ್ಯಕ್ಷೆ ಎಸ್. ವರಲಕ್ಷ್ಮೀ ಮಾತನಾಡಿ, ಗುತ್ತಿಗೆದಾರನಿಗೆ ಕಂಪನಿಯಿಂದ ಎಷ್ಟು ಹಣ ಬಿಡುಗಡೆಯಾಗಿದೆ, ಅದರಲ್ಲಿ ಕಾರ್ಮಿಕರಿಗೆ ಎಷ್ಟು ಸೇರಿದೆ ಎಂಬುದು ತನಿಖೆಯಾಗಬೇಕು ಎಂದರು.

    ಜೆಸಿಟಿಯು ಮುಖಂಡರಾದ ಶ್ಯಾಮಣ್ಣರೆಡ್ಡಿ, ಕೆ.ವಿ.ಭಟ್, ಜಿ.ಆರ್.ಶಿವಶಂಕರ್, ಅಪ್ಪಣ್ಣ, ನಾಗನಾಥ್, ಕಾಳಪ್ಪ, ಷಣ್ಮುಖ, ಸತ್ಯಾನಂದ್, ಗಾಂಧಿನಗರ ನಾರಾಯಣಸ್ವಾಮಿ, ಯಲ್ಲಪ್ಪ ಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts