More

    ಮಕ್ಕಳ ಕಳ್ಳನೆಂದು ಭಾವಿಸಿ ಭಿಕ್ಷುಕನನ್ನು ಪೊಲೀಸರಿಗೊಪ್ಪಿಸಿದ ನಾಗರಿಕರು

    ಬಂಕಾಪುರ: ಮಕ್ಕಳ ಕಳ್ಳ ಎಂದು ಭಾವಿಸಿ ಬುದ್ಧಿಮಾಂದ್ಯ ಭಿಕ್ಷುಕನನ್ನು ಸಾರ್ವಜನಿಕರು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ.

    ಪಟ್ಟಣದ ಕಾರವಾರ-ಇಳಕಲ್ ರಸ್ತೆಯ ತಹಶೀಲ್ದಾರ ಪ್ಲಾಟ್ ಹತ್ತಿರ ಕೈಯಲ್ಲಿ ಹಗ್ಗದ ತುಂಡುಗಳನ್ನು ಹಿಡಿದು ತಿರುಗಾಡುತ್ತಿದ್ದ ವ್ಯಕ್ತಿಯನ್ನು ಕೆಲವರು ಅನುಮಾನ ವ್ಯಕ್ತಪಡಿಸಿ, ಈ ಮಕ್ಕಳ ಕಳ್ಳನಿರಬೇಕು ಎಂದು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಸ್ಥಳೀಯ ಪೊಲೀಸರು ಆತನನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದಾಗ ಆತ ಮಾತುಬಾರದ ಬುದ್ಧಿಮಾಂದ್ಯ ಭಿಕ್ಷುಕ ಎಂಬುದು ತಿಳಿದು ಬಂದಿದೆ. ಇದನ್ನೇ ವಿಡಿಯೋ ಮಾಡಿದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ನೋಡಿದ ಪಾಲಕರು ಆತಂಕದಿಂದ ಪೊಲೀಸ್ ಠಾಣೆಗೆ ಫೋನ್ ಮಾಡಿ ಮಾಹಿತಿ ಪಡೆದು ಕೊಳ್ಳುತ್ತಿದ್ದಾರೆ.

    ಈ ಕುರಿತು ಮಾತನಾಡಿದ ಬಂಕಾಪುರ ಪೊಲೀಸ್ ಠಾಣೆ ಪಿಎಸ್​ಐ ಪರಶುರಾಮ ಕಟ್ಟಿಮನಿ, ಪಟ್ಟಣದಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಸತ್ಯಕ್ಕೆ ದೂರವಾದ ಸಂಗತಿ. ರಾಜ್ಯದಲ್ಲಿ ಇದುವರಿಗೆ ಮಕ್ಕಳ ಕಳ್ಳತನದಂಥ ಯಾವುದೇ ಪ್ರಕರಣ ನಡೆದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕೆಲ ಕಿಡಿಗೇಡಿಗಳು ಮಕ್ಕಳ ಕಳ್ಳರ ಬಗ್ಗೆ ಎಡಿಟ್ ಮಾಡಿದ ವಿಡಿಯೋಗಳನ್ನು ಹರಿಬಿಟ್ಟಿದ್ದಾರೆ. ಕುಲ ಕಸುಬುಗಾಗಿ ಊರೂರು ಅಲೆದಾಡುವ ಬುಡಬುಡಕಿಯರು, ನಾಟಿ ಔಷಧ ನೀಡುವವರು, ಚಿಂದಿ ಆಯುವಂತಹವರನ್ನು ಬಿಂಬಿಸಿ ಅಮಾಯಕರ ಮೇಲೆ ಹಲ್ಲೆ ಮಾಡುವಂತಹ ಪ್ರಚೋದನೆಗಳು ನಡೆಯುತ್ತಿವೆ. ಇದೇ ರೀತಿ ಪಟ್ಟಣದಲ್ಲಿ ಗುರುವಾರ ಮಾತುಬಾರದ ಭಿಕ್ಷುಕನನ್ನು ಮಕ್ಕಳ ಕಳ್ಳ ಎಂದು ಹಿಡಿದಿಟ್ಟು ಕೊಂಡಿದ್ದರು. ಕೂಡಲೇ ಪೊಲೀಸರು ಆತನನ್ನು ಅವರಿಂದ ರಕ್ಷಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಆತ ಮಾತಬಾರದ ಬುದ್ಧಿಮಾಂದ್ಯ ಭಿಕ್ಷುಕ ಎಂದು ತಿಳಿದು ಬಂದಿದೆ. ಆದ್ದರಿಂದ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಬ್ಬಿಸಬಾರದು ಎಂದು ವಿನಂತಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts