More

    ರೋಗ ತಾಣ ಸರ್ಕಲ್‌ಗಳು, ಡೆಂಘೆ-ಮಲೇರಿಯಾ ಆತಂಕ

    ಭರತ್ ಶೆಟ್ಟಿಗಾರ್ ಮಂಗಳೂರು

    ನಗರದ ಕೆಲವು ಜಂಕ್ಷನ್‌ಗಳಲ್ಲಿರುವ ಸರ್ಕಲ್‌ಗಳು ಸಾಂಕ್ರಾಮಿಕ ರೋಗಗಳನ್ನು ಹರಡುವ ತಾಣಗಳಾಗುತ್ತಿವೆಯೇ ಎಂಬ ಆತಂಕ ಮನೆ ಮಾಡಿದೆ.

    ಮುಂಗಾರು ಕಾಲಿಟ್ಟರೂ ನಿರೀಕ್ಷಿತ ಮಳೆ ಸುರಿಯದೆ ಬಿಸಿಲು -ಬಿಟ್ಟು ಬಿಟ್ಟು ಮಳೆಯಾಗುವ ವಾತಾವರಣ ಇದೆ. ಮಲೇರಿಯಾ, ಡೆಂಘೆ ರೋಗಗಳು ಹರಡಲು ಇಂಥ ವಾತಾವರಣ ಪೂರಕವಾಗಿರುವುದರಿಂದ ರೋಗದ ಆತಂಕ ಹೆಚ್ಚಾಗಿದೆ. ಅದಕ್ಕಾಗಿ ಸಾಕಷ್ಟು ಮುಂಜಾಗರೂಕತೆ ವಹಿಸುವ ಅಗತ್ಯವೂ ಇದೆ. ಬಹುತೇಕ ಸರ್ಕಲ್‌ಗಳಲ್ಲಿ ಮಾಡಿರುವ ಆಲಂಕಾರಿಕಾ ರಚನೆಗಳಲ್ಲಿ ಮಳೆ ನೀರು ನಿಲ್ಲುತ್ತಿದ್ದು ಸೊಳ್ಳೆ ಉತ್ಪತ್ತಿ ತಾಣಗಳಾಗಿರುವಂತೆ ಕಾಣಿಸುತ್ತಿವೆ. ನಿರಂತರ ಮಳೆಯಾದರೆ ತುಂಬಿ ಹರಿದು ಹೋಗುವುದರಿಂದ ಸಮಸ್ಯೆಯಾಗದು. ಆದರೆ ಬಿಟ್ಟು ಬಿಟ್ಟು ಎರಡು-ಮೂರು ದಿನಕ್ಕೊಮ್ಮೆ ಮಳೆಯಾದರೆ ಅಪಾಯ ಖಚಿತ.

    ಸ್ವಚ್ಛತೆ ಅಗತ್ಯ: ಸದ್ಯದ ಪರಿಸ್ಥಿತಿಯಲ್ಲಿ ವಾರಕೊಮ್ಮೆಯಾದರೂ ಇಂಥ ವೃತ್ತಗಳನ್ನು ಸ್ವಚ್ಛಗೊಳಿಸುವ ಅಗತ್ಯವಿದೆ. ಮಂಗಳೂರಿನ ವಿವಿಧ ವೃತ್ತಗಳನ್ನು ವಿವಿಧ ಸಂಘ ಸಂಸ್ಥೆಗಳು ನಿರ್ವಹಿಸುತ್ತಿವೆ. ಕೆಲವು ಸರ್ಕಲ್‌ಗಳು ಉತ್ತಮವಾಗಿ ನಿರ್ವಹಣೆಗೊಳಪಡುತ್ತಿದ್ದು, ಕೆಲವನ್ನು ಕೇಳುವವರೇ ಇಲ್ಲ. ಹಂಪನಕಟ್ಟೆ ಕ್ಲಾಕ್‌ಟವರ್‌ನ ಸುತ್ತ ಅಲಂಕಾರಕ್ಕೆಂದು ನೀರು ನಿಲ್ಲಿಸಲಾಗುತ್ತಿದೆ. ಅಲ್ಲಿ ಈಗಾಗಲೇ ತಳದಲ್ಲಿ ಪಾಚಿ ಬೆಳೆದಿದ್ದು, ನೀರು ಖಾಲಿ ಮಾಡದಿದ್ದರೆ, ಮುಂದಕ್ಕೆ ಸೊಳ್ಳೆ ಸಂತಾನೋತ್ಪತ್ತಿ ತಾಣವಾಗಲಿದೆ. ಸ್ಟೇಟ್‌ಬ್ಯಾಂಕ್, ಮಲ್ಲಿಕಟ್ಟೆ ಸರ್ಕಲ್‌ಗಳಲ್ಲೂ ನೀರು ನಿಲ್ಲುತ್ತಿದೆ. ದೊಡ್ಡ ವೃತ್ತಗಳಲ್ಲಿ ಸೊಳ್ಳೆ ಲಾರ್ವಗಳನ್ನು ತಿನ್ನುವಂಥ ಗಪ್ಪಿ ಮೀನುಗಳನ್ನು ಬಿಡುವ ವ್ಯವಸ್ಥೆಯಾಗಬೇಕು.

    ಸಾಂಕ್ರಾಮಿಕ ರೋಗಗಳ ನಿರ್ಲಕ್ಷೃ: ಮಂಗಳೂರು ನಗರದಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಮಲೇರಿಯಾ ಮತ್ತು ಡೆಂಘೆ ಕಾಟ ಇದ್ದೇ ಇದೆ.ಪ್ರಸ್ತುತ ಕರೊನಾದಿಂದ ಡೆಂಘೆ-ಮಲೇರಿಯಾ ಕುರಿತು ಜನ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮಲೇರಿಯಾ ಬಹಳ ಹಿಂದಿನಿಂದಲೇ ಇದ್ದರೆ, ಡೆಂಘೆ ಇತ್ತೀಚಿನ ಎರಡು ಮೂರು ವರ್ಷಗಳಲ್ಲಿ ಹೆಚ್ಚಾಗಿದೆ. ಮನೆ ಅಕ್ಕಪಕ್ಕ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ರೋಗಗಳು ಹರಡುತ್ತಿವೆ. ಆದ್ದರಿಂದ ಜನ ಎಚ್ಚರಿಕೆ ವಹಿಸುವ ಅಗತ್ಯವಿದೆ.

    ಸರ್ಕಲ್‌ಗಳಲ್ಲಿರುವ ನೀರು ನಿಲ್ಲುವ ತಾಣಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ನಿರಂತರ ಮಳೆಯಾದರೆ ಸಮಸ್ಯೆಯಾಗದು. ಆದರೆ ಬಿಸಿಲು-ಮಳೆ ಕಾಣಿಸಿದರೆ ಸೊಳ್ಳೆ ಮೊಟ್ಟೆ ಇಡುವ ಸಾಧ್ಯತೆಯಿದೆ. ಆದ್ದರಿಂದ ನಿರಂತರ ನಿಗಾ ವಹಿಸುವುದು ಅಗತ್ಯ. ಜನರೂ ತಮ್ಮ ಮನೆ ಸುತ್ತಮುತ್ತ, ತಾರಸಿ, ಹೂ ಕುಂಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

    ಪ್ರೇಮಾನಂದ ಶೆಟ್ಟಿ, ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts