

ಚೆನ್ನೈ: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಅಮ್ಮಾ, ಥಲೈವಿ ಎಂದೇ ಖ್ಯಾತಿಗಳಿಸಿದ್ದ ಜಯಲಲಿತಾ ಒಂದು ದಂತಕತೆ. ಪುರುಷ ಪ್ರಧಾನ ವ್ಯವಸ್ಥೆ ಎಂದೇ ನಂಬಲಾಗಿರುವ ರಾಜಕಾರಣದಲ್ಲಿ ಭರ್ತಿ 6 ಭಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಏಕಮೇವ ವ್ಯಕ್ತಿತ್ವ ಎಂದರೆ ಅದು ಜಯಲಲಿಯಾ ಅವರದ್ದಾಗಿತ್ತು.
ಜಯಲಲಿತಾ ಅವರ ಮರಣದ ನಂತರ ತಮಿಳುನಾಡು ರಾಜಕೀಯದಲ್ಲಿ ಮತ್ತೊಬ್ಬ ಗಟ್ಟಿಗಿತ್ತಿ ಮಹಿಳೆ ಈ ಸ್ಥಾನದಲ್ಲಿ ಕೂರಲ್ಲ, ಅವರಂತೆ ಇನ್ನೊಬ್ಬ ಹೆಣ್ಣು ರಾಜಕೀಯದಲ್ಲಿ ಕಾಣಿಸಿಕೊಳ್ಳಲ್ಲ ಎಂಬ ಮಾತುಗಳು ಈಗಲೂ ತಮಿಳುನಾಡಿನಲ್ಲಿ ಕೇಳಿ ಬರುತ್ತಿದೆ.
ಆದರೆ, 2026 ರ ತಮಿಳುನಾಡು ವಿಧಾನಸಭಾ ಚುನಾವಣೆ ಎಲ್ಲಾ ರೀತಿಯ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿತು. ಸಾಂಪ್ರದಾಯಿಕ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಬದಲು ಮೊದಲ ಬಾರಿಗೆ ಕಣಕ್ಕಿಳಿದಿದ್ದ ಟಿವಿಕೆ ಪಕ್ಷಕ್ಕೆ ಬಹುಮತ ನೀಡಿದ ಮತದಾರ, ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯವನ್ನು ಬರೆದ.
ಈಗ ಇದೇ ವಿಧ್ಯಮಾನವನ್ನು ಬಳಸಿಕೊಂಡು, ಕಾಲಿವುಡ್ನ ಖ್ಯಾತ ನಟಿ ಹಾಗೂ ಸಿಎಂ ಜೋಸೆಫ್ ವಿಜಯ್ ಅವರ ಆಪ್ತೆ ತ್ರಿಷಾ ಕೃಷ್ಣನ್ ಅವರನ್ನು ಜಯಲಲಿತಾ ಅವರ ಮುಂದಿನ ವಾರಸುದಾರಳಾಗಿ ಅವರ ಬೆಂಬಲಿಗರು ಬಿಂಬಿಸಲು ಶುರುವಿಟ್ಟಿದ್ದಾರೆ.
ಜೋಸೆಫ್ ವಿಜಯ್ ಮುಖ್ಯಮಂತ್ರಿ ಸ್ಥಾನಕ್ಕೇರಿದ ನಂತರ ನಟಿ ತ್ರಿಷಾ ಕೂಡ ರಾಜಕೀಯ ವೇದಿಕೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರು ಕೂಡ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಟಾಕ್ ಈಗ ಜೋರಾಗಿದೆ.
ಇದಕ್ಕೆ ನಿದರ್ಶನವೆಂಬಂತೆ, ತ್ರಿಷಾ ಅವರ ಅಭಿಮಾನಿಗಳು 'ಇಳಯ ಪುರಾತ್ಚ್ರಿ ಥಲೈವಿ ತ್ರಿಷಾ' ಎಂಬ ವೇದಿಕೆಯನ್ನು ಆರಂಭಿಸಿದ್ದಾರೆ. ಇದರ ಅರ್ಥ ತ್ರಿಷಾ ತಮಿಳುನಾಡಿನ ಕ್ರಾಂತಿಯ ಯುವ ನಾಯಕಿ ಎಂದು ಅವರನ್ನು ತೋರ್ಪಡಿಸುವುದು ಈ ವೇದಿಕೆಯ ಆಶಯವಾಗಿದೆ.
ಇದಕ್ಕೂ ಮೊದಲು ಮಾಜಿ ಸಿಎಂ ಜಯಲಲಿತಾ ಅವರನ್ನು "ಪುರಾತ್ಚ್ರಿ ಥಲೈವಿ" ಎಂದರೆ ಕ್ರಾಂತಿಯ ನಾಯಕಿ ಎಂದು ಸಂಭೋದಿಸಲಾಗುತ್ತಿದ್ದು, ಈ ಮೂಲಕ ಜಯಲಲಿತಾ ಬಳಿಕ ತ್ರಿಷಾ ಅವರ ಸ್ಥಾನವನ್ನು ತುಂಬಲಿದ್ದಾರೆಂಬ ಸಂದೇಶವನ್ನು ರವಾನಿಸಲಾಗುತ್ತಿದೆ.
ಇನ್ನು ತಮಿಳುನಾಡಿನ ರಾಜಕೀಯದಲ್ಲಿ ಪಾದಾರ್ಪಣೆ ಮಾಡಿದ ಮೊದಲ ಚುನಾವಣೆಯಲ್ಲೇ ಭರ್ಜರಿ ಗೆಲುವನ್ನು ಸಾಧಿಸಿ, ಸಿಎಂ ಸ್ಥಾನ ಅಲಂಕರಿಸಿರುವ ವಿಜಯ್ ಅವರಿಗೆ ಈ ತ್ರಿಷಾ ಅತ್ಯಾಪ್ತೆ. ಹೀಗಾಗಿ ತ್ರಿಷಾ ಏನಾದರೂ ರಾಜಕೀಯಕ್ಕೆ ಎಂಟ್ರಿ ಕೊಟ್ಟರೆ ಆಕೆ ವಿಜಯ್ ಅವರ ಟಿವಿಕೆ ಪಕ್ಷ ಸೇರುವ ಸಾಧ್ಯತೆ ಹೆಚ್ಚಿದೆ. ಅಂತೆಯೇ ಟಿವಿಕೆ ಪಕ್ಷಕ್ಕೂ ಕೂಡ ಯಾವುದೇ ಪ್ರಮುಖ ಮಹಿಳಾ ನಾಯಕಿ ಇಲ್ಲದ ಕಾರಣ ನಟಿ ತ್ರಿಷಾ ಆಗಮನ ರಾಜ್ಯದ ಮಹಿಳೆಯರ ಮತಬ್ಯಾಂಕ್ಅನ್ನು ಗಟ್ಟಿ ಮಾಡುತ್ತದೆ ಎಂದು ಹೇಳಲಾಗುತ್ತಿದೆ.
ಇನ್ನೂ ತಮ್ಮ ಅಭಿಮಾನಿ ಬಳಗ ತಮ್ಮ ಹೆಸರಿನಲ್ಲಿ ರಾಜಕೀಯ ವೇದಿಕೆ ನಿರ್ಮಿಸಿದರೂ ನಟಿ ಇಲ್ಲಿವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ನಟ ವಿಜಯ್ ಜೊತೆಗಿನ ಸ್ನೇಹ ಹಾಗೂ ರಾಜಕೀಯ ನಾಯಕರ ಪರಿಚಯದ ಜತೆಗೆ ತಮಿಳುನಾಡಿನಲ್ಲಿ ಸಿನಿಮಾ ನಟರ ಭಾಗವಹಿಸುವಿಕೆ ಸಾಮಾನ್ಯವಾಗಿರುವ ಕಾರಣ ಮುಂದಿನ ದಿನಗಳಲ್ಲಿ ತ್ರಿಷಾ ರಾಜಕಾರಣಕ್ಕೆ ಪ್ರವೇಶ ಪಡೆದರೆ ಆಶ್ಚರ್ಯವೇನಿಲ್ಲ, (ಏಜೆನ್ಸೀನ್).