More

    6 ತಿಂಗಳಲ್ಲಿ 383 ಕೇಸ್‌ಗಳ ತನಿಖೆ ಪೂರ್ಣಗೊಳಿಸಿದ ಸಿಐಡಿ

    ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
    ಹೆಚ್ಚುತ್ತಿರುವ ಸೈಬರ್ ಅಪರಾಧ ಮತ್ತು ನಾರ್ಕೋಟಿಕ್ಸ್ ತಡೆಗಟ್ಟಲು ಅಪರಾಧ ತನಿಖಾ ವಿಭಾಗ (ಸಿಐಡಿ) ಹೊಸದಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಹುದ್ದೆ ಸೃಜಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

    ಮತ್ತೊಂದೆಡೆ, 2018ರಿಂದ 854 ಪ್ರಕರಣಗಳು ತನಿಖೆ ನಡೆಯದೆ ಬಾಕಿ ಉಳಿದಿದ್ದವು. ಆರೇ ತಿಂಗಳಲ್ಲಿ ಸಿಐಡಿ ಅಧಿಕಾರಿಗಳು 383 ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ. 544 ಪ್ರಕರಣಗಳು ಬಾಕಿ ಉಳಿದಿದ್ದು, ಇದರಲ್ಲಿ 100ಕ್ಕೂ ಅಧಿಕ ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ.
    ಆರೋಪಪಟ್ಟಿ ಸಲ್ಲಿಸಿದ ಮೇಲೆ ಕೋರ್ಟ್‌ನಲ್ಲಿ ವಿಚಾರಣೆಯ ಮೇಲ್ವಿಚಾರಣೆಗೆ ಪ್ರತಿ ಘಟಕಕ್ಕೆ ಓರ್ವ ಇನ್‌ಸ್ಪೆಕ್ಟರ್‌ನನ್ನು ನೇಮಿಸಲಾಗಿದೆ. ನಿಗದಿತ ಸಮಯದಲ್ಲಿ ಬಾಕಿ ಪ್ರಕರಣ ತನಿಖೆ ಪೂರ್ಣ ಆಗಲಿದೆ ಎಂದು ಸಿಐಡಿ ಡಿಜಿಪಿ ಡಾ.ಎಂ.ಎ. ಸಲೀಂ, ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.
    ಸೈಬರ್ ಕ್ರೈಂಗಳು ಮತ್ತು ಮಾದಕ ದ್ರವ್ಯ ಮಾರಾಟ, ಸೇವನೆ, ಸಾಗಣೆ ದಿನೇದಿನೆ ಹೆಚ್ಚಾಗುತ್ತಿವೆ. ರಾಜ್ಯದಲ್ಲಿ ಸಿಇಎನ್ ಪೊಲೀಸ್ ಠಾಣೆ ಅಲ್ಲದೆ ಸಾಮಾಜಿಕ ಸಿವಿಲ್ ಪೊಲೀಸ್ ಠಾಣೆಗಳಲ್ಲೂ ಸೈಬರ್ ಕ್ರೈಂ ದೂರುಗಳನ್ನು ಸ್ವೀಕರಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗುತ್ತಿದೆ.
    ಇನ್ನೂ ನಾಗರಿಕ ಸಮಾಜಕ್ಕೆ ಮಾರಕವಾಗಿರುವ ಡ್ರಗ್ಸ್‌ದಂಧೆಗೆ ಕಡಿವಾಣ ಹಾಕಬೇಕಾಗಿದೆ. ಇವುಗಳ ತನಿಖೆಗೆ ವಿಶೇಷ ತರಬೇತಿ ಮತ್ತು ಅತ್ಯಾಧುನಿಕ ಉಪಕರಣ, ಉಸ್ತುವಾರಿ ಅಗತ್ಯವಿದೆ. ಆದರಿಂದ ಎಡಿಜಿಪಿ ದರ್ಜೆಯ ವಿಭಾಗ ತೆರೆಯುವ ಉದ್ದೇಶದಿಂದ ಹೊಸ ಹುದ್ದೆ ಸೃಜಿಸುವಂತೆ ಸರ್ಕಾರಕ್ಕೆ ಸಿಐಡಿ ಪ್ರಸ್ತಾವನೆ ಸಲ್ಲಿಸಿದೆ.

    ಇದಲ್ಲದೆ, ಕೇಂದ್ರ ತನಿಖಾ ಸಂಸ್ಥೆಗಳ ಮಾದರಿ ತನಿಖೆ ನಡೆಸುವ ಉದ್ದೇಶದಿಂದ ಸಿಬಿಐ, ಎನ್‌ಐಎ ಮಾದರಿಯಲ್ಲಿ ಪ್ರತ್ಯೇಕ ಎ್ಐಆರ್ ದಾಖಲಿಸುವ ಅಧಿಕಾರವನ್ನು ಸಿಐಡಿಗೆ ಕೊಡಬೇಕೆಂದು ಸಹ ಸರ್ಕಾರದ ಬಳಿ ಕೋರಲಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ಕೊಲೆ, ಆರ್ಥಿಕ ವಂಚನೆ ಸೇರಿದಂತೆ ಗಂಭೀರ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸಲಾಗುತ್ತಿದೆ.
    ಸ್ಥಳೀಯ ಪೊಲೀಸರು ದಾಖಲಿಸುವ ಎ್ಐಆರ್ ಆಧಾರದ ಮೇಲೆ ತನಿಖೆ ನಡೆಸಿ ಸಂಬಂಧಪಟ್ಟ ಸ್ಥಳೀಯ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸುತ್ತಿದ್ದಾರೆ. ಇದೀಗ ಸರ್ಕಾರದಿಂದ ಕೇಸ್ ವರ್ಗಾವಣೆ ಆದ ಕೂಡಲೇ ಸಿಐಡಿ ಪ್ರತ್ಯೇಕ ಎ್ಐಆರ್ ದಾಖಲಿಸಿ ಅದರ ಮೇಲೆ ತನಿಖೆ ನಡೆಸುವ ಪ್ರಕ್ರಿಯೆಗೆ ಅನುಮತಿ ಕೋರಿದೆ. ಸರ್ಕಾರದ ಆದೇಶಕ್ಕಾಗಿ ಸಿಐಡಿ ಅಧಿಕಾರಿಗಳು ಕಾಯುತ್ತಿದ್ದಾರೆ.

    ಪ್ರತಿ ವಲಯಕ್ಕೆ ಡಿವೈಎಸ್‌ಪಿ

    ಆರ್ಥಿಕ ಅಪರಾಧಗಳ ಮೇಲೆ ನಿಗಾವಹಿಸಲು ‘ಕ್ರಿಮಿನಲ್ ಇಂಟಲಿಜೆನ್ಸ್ ಯುನಿಟ್’ (ಸಿಐಯು) ಸ್ಥಾಪಿಸಲಾಗಿದೆ. ಅಧಿಕ ಲಾಭಾಂಶ, ಕಮಿಷನರ್, ಅಧಿಕ ಲಾಭಾಂಶ ಆಮಿಷವೊಡ್ಡಿ ವಂಚಿಸುವ ಸಂಬಂಧ ಸ್ಥಳೀಯ ಠಾಣೆಗಳಲ್ಲಿ ಎ್ಐಆರ್ ದಾಖಲಾಗುತ್ತಿದಂತೆ ಸಿಐಯು ಭೇಟಿ ಕೊಟ್ಟು ಹಣಕಾಸಿನ ವಹಿವಾಟು ದಾಖಲೆ ಪತ್ರಗಳನ್ನು ಸಂಗ್ರಹಿಸಲಿದೆ. ಸರ್ಕಾರದಿಂದ ಪ್ರಕರಣ ವರ್ಗಾವಣೆ ಆದ ಕೂಡಲೇ ಅಧಿಕೃತವಾಗಿ ತನಿಖೆ ಶುರು ಮಾಡಲಿದೆ. ರಾಜ್ಯದ ಪ್ರತಿ ವಲಯಕ್ಕೆ ಡಿವೈಎಸ್‌ಪಿ, ಓರ್ವ ಇನ್‌ಸ್ಪೆಕ್ಟರ್ ನೇಮಕ ಮಾಡಲಾಗಿದೆ.

    ನೀಗಿದ ವಾಹನ ಕೊರತೆ

    ಸಿಐಡಿಗೆ ವರ್ಗಾವಣೆ ಆದರೆ ತನಿಖೆ ಇನ್ನಿತರ ಕೆಲಸ ಕಾರ್ಯಕ್ಕೆ ಓಡಾಡಲು ಸರ್ಕಾರಿ ವಾಹನಗಳು ಸಿಗುವುದಿಲ್ಲ. ಸ್ವಂತ ವಾಹನ ಮತ್ತು ಕ್ಯಾಬ್‌ಗಳನ್ನೇ ಬಳಸಬೇಕೆಂಬ ಅಳಲು ಅಧಿಕಾರಿಗಳಲ್ಲಿತ್ತು. ಆದರೆ, ಇದೀಗ ಪ್ರತಿ ಪಿಎಸ್‌ಐಗೆ ಬೈಕ್ ಮತ್ತು 32 ಇನ್‌ಸ್ಪೆಕ್ಟರ್‌ಗಳಿಗೆ ಹೊಸ ಜೀಪ್ ಕೊಡಲಾಗಿದೆ.

    ಸೈಬರ್ ಕ್ರೈಂ ಮತ್ತು ನಾರ್ಕೋಟಿಕ್ ವಿಭಾಗಕ್ಕೆ ಹೊಸ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹುದ್ದೆ (ಎಡಿಜಿಪಿ) ಹುದ್ದೆ ಕೋರಲಾಗಿದೆ. ಹೆಚ್ಚುವರಿ ಹುದ್ದೆ ಲಭ್ಯವಾದರೇ ಸೈಬರ್ ಕ್ರೈಂ, ನಾರ್ಕೋಟಿಕ್ ಪ್ರಕರಣ ತನಿಖೆಗೆ ಮತ್ತಷ್ಟು ಚುರುಕುಗೊಳ್ಳಲಿವೆ.
    ಡಾ.ಎಂ.ಎ. ಸಲೀಂ-ಸಿಐಡಿ, ಡಿಜಿಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts