More

    ನಿವೇಶನ ಹಂಚಿಕೆ ತ್ವರಿತವಾಗಲಿ

    ಚಿತ್ರದುರ್ಗ:ತಾಲೂಕಿನ ತುರುವನೂರು ಹೋಬಳಿಯ 48 ಗ್ರಾಮಗಳಿಗೆ 49 ಸ್ಮಶಾನದ ಅಗತ್ಯವಿದ್ದು, ನಾಲ್ಕೈದು ಗ್ರಾಮ ಹೊರತುಪಡಿಸಿ ಉಳಿದೆಲ್ಲವಕ್ಕೂ ಜಮೀನು ಮಂಜೂರಾಗಿದೆ. ಇನ್ನುಳಿದೆಡೆ ಸ್ಥಳ ಗುರುತಿಸಿ ಅಭಿವೃದ್ಧಿಗೊಳಿಸಿ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ತಾಪಂ ಸಭಾಂಗಣದಲ್ಲಿ ಬುಧವಾರ ಹೋಬಳಿ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸ್ಮಶಾನವಿಲ್ಲದೆ ಜನ ತೊಂದರೆ ಅನುಭವಿಸುವುದು ಬೇಡ. ಜನವರಿಯಲ್ಲೇ ಈ ಸಂಬಂಧ ತಾಕೀತು ಮಾಡಿದ್ದೆ. ಚುನಾವಣೆ ಮುಗಿದಿದ್ದು, ಸಾರ್ವಜನಿಕ ಕೆಲಸಗಳನ್ನು ತ್ವರಿತವಾಗಿ ಮಾಡಿ. ಸಬೂಬು ಬೇಡ. ಪ್ರತಿಯೊಂದಕ್ಕೂ ನಿಯಮ ಎಂದು ಕೂತರೆ ಕೆಲಸವಾಗೊಲ್ಲ ಎಂದು ಗರಂ ಆದರು.

    49ರಲ್ಲಿ 34 ಗ್ರಾಮಗಳಿಗೆ ಸರ್ಕಾರಿ ಜಾಗದಲ್ಲಿ ನಿವೇಶನ ಮಂಜೂರಾಗಿದೆ. ರಚನೆ ಕಾರ್ಯವೂ ಪ್ರಗತಿಯಲ್ಲಿದೆ. ಇನ್ನುಳಿದ 15 ಗ್ರಾಮಗಳಲ್ಲಿ ಸರ್ಕಾರಿ ಜಮೀನು ಇಲ್ಲದ ಕಾರಣ ಖಾಸಗಿಯಾಗಿ ಖರೀದಿಸಬೇಕಿದೆ. ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪಿಡಿಒಗಳು ಮಾಹಿತಿ ನೀಡಿದರು.

    ಪಿಆರ್‌ಐಡಿ ಅಧಿಕಾರಿಗಳು ಕೂಡಲೇ ಈ ಸಂಬಂಧ ಕಾರ್ಯಪ್ರವೃತ್ತರಾಗಬೇಕು. 15 ಗ್ರಾಮ ಯಾವುವು ಎಂಬ ಮಾಹಿತಿ ಪಡೆದು ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಸ್ಥಳ ಗುರುತಿಸಿ ಎಂದು ತಹಶೀಲ್ದಾರ್ ಡಾ.ನಾಗವೇಣಿ ಅವರಿಗೆ ಶಾಸಕರು ಸೂಚಿಸಿದರು.

    ಬೊಗಳೇರಹಟ್ಟಿ ಗ್ರಾಮದ ಸ್ಮಶಾನಕ್ಕೆ 20 ಗುಂಟೆ ಜಮೀನು ಸಾಕಾಗುವುದಿಲ್ಲ. ಜನಸಂಖ್ಯೆ ಹೆಚ್ಚಾಗಿರುವ ಕಾರಣ ಸ್ಥಳವಕಾಶ ಇನ್ನಷ್ಟು ವಿಸ್ತೀರ್ಣವಾಗಿರಲಿ. ಹೆದ್ದಾರಿ ಹಾದುಹೋಗಿದ್ದು, ಸರ್ವೀಸ್ ರಸ್ತೆಯೂ ಇಲ್ಲ. ಈ ಕುರಿತು ಗಮನಹರಿಸಿ ಎಂದು ತಾಕೀತು ಮಾಡಿದರು.

    ಹೋಬಳಿಯಲ್ಲಿ 6 ಮನೆ, 1 ಹೆಕ್ಟೇರ್ ಮೆಕ್ಕಜೋಳ, 23.4 ಎಕರೆ ವಿಸ್ತೀರ್ಣದಲ್ಲಿ ಬಾಳೆ, ಪಪ್ಪಾಯ, ಅಡಿಕೆ ಬೆಳೆಗೆ ಹಾನಿಯಾಗಿದೆ. ವಾಡಿಕೆಗಿಂತಲೂ ಶೇ 50ರಷ್ಟು ಮಳೆ ಕಡಿಮೆಯಾಗಿದೆ. ಹೀಗಾಗಿ ಬಿತ್ತನೆ ಚಟುವಟಿಕೆ ಚುರುಕು ಪಡೆದಿಲ್ಲ. ಜೂ. 4ರ ನಂತರ ಮುಂಗಾರು ಪ್ರವೇಶಿಸಲಿದ್ದು, ಆನಂತರ ರೈತರ ಆಸಕ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಹಿಂದಿನ ವರ್ಷ ಅರ್ಹರೆಲ್ಲರಿಗೂ ಬೆಳೆ ಪರಿಹಾರ ವಿತರಿಸಲಾಗಿದೆ ಎಂದು ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

    ಹಲವೆಡೆ ಈಚೆಗೆ ಸುರಿದ ಮಳೆ-ಬಿರುಗಾಳಿಗೆ ಜಾನುವಾರು ಮತ್ತು ಕುರಿಗಳ ಶೆಡ್‌ಗಳು ಹಾನಿಯಾಗಿವೆ. ಇದಕ್ಕೆ ತ್ವರಿತವಾಗಿ ಪರಿಹಾರ ಒದಗಿಸಲು ಮುಂದಾಗಿ ಎಂದು ರಘುಮೂರ್ತಿ ಸೂಚನೆ ನೀಡಿದರು. ತಾಪಂ ಅಧಿಕಾರಿ ಧನಂಜಯ ಅವರು ನರೇಗಾ ಯೋಜನೆಯಡಿ ಇದಕ್ಕೆ ಅವಕಾಶವಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts