More

    ಚಿತ್ರದುರ್ಗ ಜಿಲ್ಲೆಯ 60 ಗ್ರಂಥಾಲಯ ಡಿಜಿಟಲೀಕರಣ

    ಚಿತ್ರದುರ್ಗ: ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳ ಮೂಲಕ ಜಿಲ್ಲೆಯಲ್ಲಿ ಈಗಾಗಲೇ 60 ಗ್ರಂಥಾಲಯಗಳ ಡಿಜಿಟಲೀಕರಣ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿದೇವಿ ತಿಳಿಸಿದರು.

    ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಶಿಕ್ಷಣ ಫೌಂಡೇಶನ್ ಹಾಗೂ ಡೆಲ್ ಸಂಸ್ಥೆ ಸಹಭಾಗಿತ್ವದಲ್ಲಿ ಆಯ್ದ 40 ಗ್ರಾಪಂ ಗ್ರಂಥಾಲಯ, ಗ್ರಾಮ ಡಿಜಿ ವಿಕಸನ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಗ್ರಂಥಾಲಯಗಳಿಗೆ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ವಿತರಿಸಿ ಮಾತನಾಡಿದರು.

    ಜಿಲ್ಲೆಯಲ್ಲಿ ಈಗಾಗಲೇ 60 ಗ್ರಂಥಾಲಯಗಳ ಡಿಜಿಟಲೀಕರಣ ಮಾಡಿದ್ದು, ಇದರ ಜತೆಗೆ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿಯಲ್ಲಿ ಶಿಕ್ಷಣ ಫೌಂಡೇಶನ್ ಸಂಸ್ಥೆ ನೀಡಿರುವ ಎಲ್ಲ ಡಿಜಿಟಲ್ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಪಂಚಾಯಿತಿ ಹಾಗೂ ಗ್ರಂಥಾಲಯ ಮೇಲ್ವಿಚಾರಕರಿಗೆ ಸಲಹೆ ನೀಡಿದರು.

    ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೋಜಕ ಗುರುಪಾದ ಶಿರಬಡಗಿ ಮಾತಾನಾಡಿ, ಈಗಾಗಲೇ 40 ಗ್ರಂಥಾಲಯಗಳಿಗೆ ಡಿಜಿಟಲ್ ಸಂಪನ್ಮೂಲಗಳನ್ನು ವಿತರಿಸಲಾಗಿದ್ದು, ಪ್ರತಿದಿನ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಬಂದು ಗ್ರಂಥಪಾಲಕರ ಸಹಕಾರದಿಂದ ಕಲಿಯುತ್ತಿದ್ದಾರೆ. ಮುಂದಿನ ಹಂತದಲ್ಲಿ ಗ್ರಂಥಪಾಲಕರಿಗೆ ತಾಲೂಕುವಾರು ಡಿಜಿಟಲ್ ಕೌಶಲಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದರು.

    ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ಗ್ರಾಮೀಣ ಪ್ರದೇಶದಲ್ಲಿರುವ 12 ರಿಂದ 24 ವಯೋಮಾನದ ವಿದ್ಯಾರ್ಥಿಗಳು, ಯುವಕ ಯುವತಿಯರಿಗೆ ಡಿಜಿಟಲ್ ಕೌಶಲಗಳ ಅವಶ್ಯಕತೆ ಇದ್ದು ಅದನ್ನು ನೀಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 40 ಗ್ರಂಥಾಲಯಗಳಿಗೆ 1 ಆಂಡ್ರಾಯ್ಡ್ ಟಿ.ವಿ, 4 ಮೊಬೈಲ್, ಡೆಲ್ ಮಾನಿಟರ್, ಕ್ರೋಮ್ಬುಕ್ ಲ್ಯಾಪ್‌ಟಾಪ್ ಹಾಗೂ ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

    ಮೊಬೈಲ್ಗಳಲ್ಲಿ ಶಿಕ್ಷಣ ಪೀಡಿಯಾ ಎಂಬ ಅಪ್ಲಿಕೇಶನ್ ಅಳವಡಿಸಿದ್ದು ಅದರಲ್ಲಿ 8, 9, 10ನೇ ತರಗತಿ ಪಾಠಗಳು ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು, ಡಿಜಿಟಲ್ ಕೌಶಲಗಳ ವಿಡಿಯೋಗಳನ್ನು ನೋಡಿ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

    ಟಿವಿಗೆ ಇಂಟರ್‌ನೆಟ್ ವ್ಯವಸ್ಥೆ ಇದ್ದು, ವಿದ್ಯಾರ್ಥಿಗಳು ತಮಗೆ ಬೇಕಾಗಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ, ಪಾಠಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ರೈತರು ಸಹ ಬೆಳೆಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯಬಹುದಾಗಿದೆ ಎಂದರು.

    ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯಾಧಿಕಾರಿ ಬಸವರಾಜ ಹೊಳ್ಳಿ, ಜಿಪಂ ಉಪಕಾರ್ಯದರ್ಶಿ ರಂಗಸ್ವಾಮಿ, 6 ತಾಲೂಕಿನ ತಾಪಂ ಸಹಾಯಕ ನಿರ್ದೇಶಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಂಥಪಾಲಕರು ಹಾಗೂ ಶಿಕ್ಷಣ ಫೌಂಡೇಶನ್ ಸಂಸ್ಥೆಯ ಕೃಷ್ಣ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts