More

    ಋತುಚಕ್ರದ ತಿಳಿವಳಿಕೆ ನೀಡಿ

    ಚಿತ್ರದುರ್ಗ: ಆರೋಗ್ಯ ತಪಾಸಣೆಗೆಂದು ಮನೆ, ಮನೆಗೆ ಭೇಟಿ ನೀಡುವ ಆಶಾ ಕಾರ್ಯಕರ್ತೆಯರು ಪ್ರತಿ ಮನೆಯಲ್ಲೂ ಋತುಸ್ರಾವ ಸಂದರ್ಭ ಅನುಸರಿಸ ಬೇಕಾದ ನೈರ್ಮಲ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕೆಂದು ಜಿಪಂ ಸಿಇಒ ಎಸ್.ಹೊನ್ನಾಂಬಾ ಹೇಳಿದರು.

    ಆರೋಗ್ಯ ಇಲಾಖೆ ಋತುಚಕ್ರ ನೈರ್ಮಲ್ಯದ ದಿನದ ಅಂಗವಾಗಿ ಜಿಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಋತುಚಕ್ರ ನೈರ್ಮಲ್ಯ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಪ್ರತಿ ಹೆಣ್ಣಿನ ಜೀವನ ಚಕ್ರದಲ್ಲಿ ಋತುಸ್ರಾವವು ಒಂದು. ಋತುಸ್ರಾವ ನಿಯಮಿತವಾಗದೇ ಇದ್ದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಕುರಿತು ಆಶಾ ಕಾರ್ಯಕರ್ತೆಯರು ಮಹಿಳೆಯರೊಂದಿಗೆ ಮುಕ್ತವಾಗಿ ಚರ್ಚಿಸಬೇಕು.

    ಋತುಸ್ರಾವದ ಕುರಿತು ಮಹಿಳೆಯಲ್ಲಿರುವ ಹಿಂಜರಿಕೆ ಹಾಗೂ ಮುಜುಗರ ಸ್ವಭಾವವನ್ನು ನಿರ್ಮೂಲನೆ ಮಾಡಬೇಕು. ಕೆಲ ಗ್ರಾಮಗಳಲ್ಲಿ ಋತು ಸ್ರಾವವಾದ ಮಹಿಳೆಯರನ್ನು ಮನೆ, ಊರ ಹೊರಗೆ ಕೂರಿಸುವ ಪದ್ಧತಿ ಇದ್ದು, ಇದನ್ನು ಹೋಗಲಾಡಿಸಲು ಜಾಗೃತಿ ಮೂಡಿಸಬೇಕು ಎಂದರು.

    ಜಿಲ್ಲಾ ಆಶಾ ಮೇಲ್ವಿಚಾರಕಿ ಪೂರ್ಣಿಮಾ ಮಾತನಾಡಿ, ಅನಿಯಮಿತ ಆಹಾರ ಪದ್ಧತಿ, ಮಾನಸಿಕ ಹಾಗೂ ದೈಹಿಕ ಒತ್ತಡ, ಪ್ರಸ್ತುತ ಜೀವನ ಶೈಲಿಯಿಂದಾಗಿ ಗರ್ಭಕೋಶದ ಸಮಸ್ಯೆಗಳು ಕಂಡು ಬರುತ್ತವೆ ಎಂದು ತಿಳಿಸಿದರು.

    ಚಿತ್ರದುರ್ಗ ತಾಲೂಕು ಆಶಾ ಮೇಲ್ವಿಚಾರಕಿ ಶಾಬಾನು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜಾನಾಯಕ್, ಡಿಎಚ್‌ಒ ಡಾ.ಸಿಎಲ್.ಪಾಲಾಕ್ಷ, ಜಿಪಂ ಯೋಜನಾ ನಿರ್ದೇಶಕ ಮುಬೀನ್ ಇತರರಿದ್ದರು.

    ದೇಶದಲ್ಲಿ ಶೇ.30 ಋತುಚಕ್ರ ಸಂದರ್ಭದಲ್ಲಿ ಮಹಿಳೆಯರು ನೈರ್ಮಲ್ಯದ ಬಗ್ಗೆ ನಿರ್ಲಕ್ಷತೆ ವಹಿಸುವುದರಿಂದಾಗಿ ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಋತುಸ್ರಾವದ ಸಮಯದಲ್ಲಿ ಹೆಚ್ಚು ವಿಶ್ರಾಂತಿ ಪಡೆಯುವುದರಿಂದ ಹಾಗೂ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಿದಲ್ಲಿ ಈ ರೀತಿಯ ಸಮಸ್ಯೆಗಳಿಂದ ದೂರವಿರಬಹುದು.
    ಪೂರ್ಣಿಮಾ
    ಜಿಲ್ಲಾ ಆಶಾ ಮೇಲ್ವಿಚಾರಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts