More

    ಮತಪಟ್ಟಿ ಪರಿಷ್ಕರಣೆ ಸಮಗ್ರ ವರದಿ ಬೇಕು

    ಚಿತ್ರದುರ್ಗ: ಮತಪಟ್ಟಿ ಪರಿಷ್ಕರಣೆ ವೇಳೆ ಜಿಲ್ಲೆಯಲ್ಲಿ ಆಗಿರುವ ಅತಿ ಹೆಚ್ಚು ಹಾಗೂ ಅತೀ ಕಡಿಮೆ ನೋಂದಣಿ ಆಗಿರುವ ಮತಗಟ್ಟೆಗಳ ವಾಸ್ತವ ಸ್ಥಿತಿ ಪರಿಶೀಲಿಸಿ, ಸಮಗ್ರ ವರದಿ ಸಲ್ಲಿಸುವಂತೆ ಮತದಾರರ ಪಟ್ಟಿ ವೀಕ್ಷಕ ಮಹೇಶ್ವರ ರಾವ್, ಡಿಸಿಗೆ ಸೂಚಿಸಿದರು.

    ಡಿ.16ರಿಂದ ಜ.15ರ ವರೆಗೆ ಜಿಲ್ಲೆಯಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

    ಹೊಸದಾಗಿ ಹೆಸರು ಸೇರ್ಪಡೆಗೆ 20731 ಅರ್ಜಿ, ಹೆಸರು ತೆಗೆದುಹಾಕಲು-8751, ತಿದ್ದುಪಡಿಗೆ-6488, ಕ್ಷೇತ್ರ ವ್ಯಾಪ್ತಿ ಸ್ಥಳಾಂತರಕ್ಕೆ 1139 ಸೇರಿ 37,109 ಅರ್ಜಿಗಳು ಸ್ವೀಕೃತಗೊಂಡಿವೆ. ಹೆಚ್ಚಿನ ನೋಂದಣಿ ಅಥವಾ ಅತಿ ಕಡಿಮೆ ನೋಂದಣಿ, ಪಟ್ಟಿಯಿಂದ ಹೆಸರು ಕೈ ಬಿಟ್ಟಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ, ವಾಸ್ತವತೆ ಅರಿಯಲು ಮತಗಟ್ಟೆಗಳಿಗೆ ಖುದ್ದು ಭೇಟಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ದಾಖಲೆ ಪರಿಶೀಲಿಸಿ: ಮರಣದಿಂದಾಗಿ ಹೆಸರು ತೆಗೆದು ಹಾಕುವಾಗ ದಾಖಲೆ ಪರಿಶೀಲನೆ ಕಡ್ಡಾಯ. 22 ವರ್ಷ ವಯಸ್ಸಿನ ಮೇಲಿದ್ದವರ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದಲ್ಲಿ, ಅಂತಹವರು ಹಿಂದೆ ಎಲ್ಲಿಯಾದರೂ ನೋಂದಣಿ ಮಾಡಿದ್ದಾರೆಯೇ ಎಂಬ ಇತ್ಯಾದಿ ಮಾಹಿತಿ ಪರಿಶೀಲಿಸಬೇಕು. ಕನ್ನಡದಲ್ಲಿ ಆನ್‌ಲೈನ್ ಮೂಲಕ ಮತಪಟ್ಟಿಗೆ ಹೆಸರು ಸೇರಿಸಲು ತೊಂದರೆ ಆಗಿದೆ ಎಂಬ ದೂರಿದ್ದು, ಈ ಸಂಬಂಧ ತಂತ್ರಾಂಶ ಸುಧಾರಣೆಗೆ ಪ್ರಯತ್ನ ನಡೆದಿದೆ ಎಂದರು.

    ಜಿಲ್ಲೆಯಲ್ಲಿ 18-19 ವರ್ಷ ವಯಸ್ಸಿನೊಳಗಿನ 7845 ಯುವ ಜನರು ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದಾರೆ. ಮೊಳಕಾಲ್ಮೂರು-1092, ಚಳ್ಳಕೆರೆ-1206, ಚಿತ್ರದುರ್ಗ-1692, ಹಿರಿಯೂರು-860, ಹೊಸದುರ್ಗ-733, ಹೊಳಲ್ಕೆರೆ-2262 ಅರ್ಜಿ ಸಲ್ಲಿಕೆಯಾಗಿದೆ. ಪ್ರತಿ ವರ್ಷ ಲಭ್ಯವಾಗಬಹುದಾದ ಯುವಜನರ ಸಂಖ್ಯೆ ಪರಿಗಣಿಸಿದಾಗ, ಇನ್ನೂ ಹೆಚ್ಚಿನ ಸಂಖ್ಯೆ ಅರ್ಜಿಗಳನ್ನು ಯುವ ಜನರಿಂದ ನಿರೀಕ್ಷೆ ಇತ್ತು ಎಂದು ಡಿಸಿ ಆರ್.ವಿನೋತ್‌ಪ್ರಿಯಾ ಹೇಳಿದರು.

    ಜಿಪಂ ಸಿಇಒ ಸಿ.ಸತ್ಯಭಾಮಾ ಮಾತನಾಡಿ, ಮಿಂಚಿನ ನೋಂದಣಿ ಕಾರ್ಯಕ್ರಮ 14142 ಅರ್ಜಿಗಳು ಸ್ವೀಕೃತಗೊಂಡಿವೆ ಎಂದರು.

    ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಈ ವೇಳೆ ಎಡಿಸಿ ಸಿ.ಸಂಗಪ್ಪ ಪ್ರತಿಜ್ಞಾ ವಿಧಿ ಭೋದಿಸಿದರು. ಎಸಿ ವಿ.ಪ್ರಸನ್ನಕುಮಾರ್, ನಗರಸಭೆ ಪೌರಾಯುಕ್ತ ಜೆ.ಟಿ.ಹನುಮಂತರಾಜು, ಚುನಾವಣಾ ವಿಭಾಗದ ಅಧಿಕಾರಿ ಸಂತೋಷ್ ಸೇರಿ ವಿವಿಧ ತಾಲೂಕುಗಳ ತಹಸೀಲ್ದಾರ್, ಅಧಿಕಾರಿಗಳು ಇದ್ದರು.

    1.34 ಲಕ್ಷ ಮತದಾರರು: ಜಿಲ್ಲೆಯಲ್ಲಿ ಸದ್ಯ 13,43,207 ಮತದಾರರರು, 1648 ಮತಗಟ್ಟೆಗಳಿವೆ. ಪುರುಷ-6,75,771, ಮಹಿಳೆ-6,67,348 ಹಾಗೂ ಇತರೆ-88 ಮತದಾರರಿದ್ದಾರೆ. ಹೊಸದಾಗಿ ಸಲ್ಲಿಕೆಯಾದ 20,731 ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಡಿಸಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts