More

    ಪೋಲಿಯೋ ಗೆಲುವು ಮುಂದುವರಿಸೋಣ

    ಚಿತ್ರದುರ್ಗ: ದೇಶದಲ್ಲಿ ಪೋಲಿಯೋ ಗೆಲುವನ್ನು ಮುಂದುವರಿಸಲು ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಶ್ರಮಿಸಬೇಕು ಎಂದು ಜಿಪಂ ಸಿಇಒ ಸಿ.ಸತ್ಯಭಾಮಾ ಮನವಿ ಮಾಡಿದರು.

    ಜಿಲ್ಲಾಸ್ಪತ್ರೆ ಆವರಣ ಬಿ.ಸಿ.ರಾಯ್ ಸಭಾಂಗಣದಲ್ಲಿ ಶುಕ್ರವಾರ, ಜ.19ರಿಂದ 22ರ ವರೆಗೆ ನಡೆಯುವ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದ ಐಇಸಿ ಸಾಮಗ್ರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ಪೋಲಿಯೋ ವಿರುದ್ಧ ಹೋರಾಡಿ ಗೆಲುವು ಸಾಧಿಸಿದ್ದು, 5 ವರ್ಷ ವಯಸ್ಸಿನೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸುವ ಮೂಲಕ ಪಡೆದಿರುವ ಜಯವನ್ನು ಕಾಪಾಡಿಕೊಳ್ಳೋಣ ಎಂದರು.

    ಇದಕ್ಕಾಗಿ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ನಾಗರಿಕರ ಸಹಕಾರ ಮುಖ್ಯ. ಈ ಬಾರಿ ಲಸಿಕಾ ಕಾರ್ಯಕ್ರಮದಲ್ಲಿ ಅರ್ಹವಿರುವ ಯಾವೊಂದು ಮಗುವು ಲಸಿಕೆಯಿಂದ ತಪ್ಪಿಸಿಕೊಳ್ಳ ಬಾರದು. ಈಗಾಗಲೇ ಉತ್ತಮ ವೆನಿಸಿರುವ ಜಿಲ್ಲೆಯ ಆರೋಗ್ಯ ಸೂಚ್ಯಂಕವನ್ನು ಮತ್ತಷ್ಟು ಉತ್ತಮ ಪಡಿಸೋಣ ಎಂದು ತಿಳಿಸಿದರು.

    ಲಸಿಕೆ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದ ಡಿಸಿ ಆರ್.ವಿನೋತ್ ಪ್ರಿಯಾ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಬಾರಿ ಶೇ.99 ಪ್ರಮಾಣದಲ್ಲಿ ಯಶಸ್ವಿಯಾಗಿದ್ದು, ಈ ಬಾರಿ ಶೇ.100 ಗುರಿ ಸಾಧಿಸಬೇಕು ಎಂದರು.

    ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ, ಜಿಲ್ಲಾ ಸರ್ಜನ್ ಎಚ್.ಜೆ.ಬಸವರಾಜಪ್ಪ, ಆರ್‌ಎಂಒ ಡಾ.ಆನಂದ್‌ಪ್ರಕಾಶ್, ಆರ್‌ಸಿಎಚ್ ಅಧಿಕಾರಿ ಡಾ.ಕುಮಾರ ಸ್ವಾಮಿ, ಡಾ.ಸತೀಶ್, ಡಾ.ದೇವರಾಜ್ ಇತರರಿದ್ದರು.

    ಮನೆ ಮನೆಗೆ ಭೇಟಿ ಲಸಿಕೆ: 81 ಪ್ರಾ.ಆರೋಗ್ಯ ಕೇಂದ್ರಗಳು, 11 ಸಮುದಾಯ ಕೇಂದ್ರಗಳು, 5 ತಾಲೂಕು ಆಸ್ಪತ್ರೆ, 5 ನಗರ ಆರೋಗ್ಯ ಕೇಂದ್ರಗಳು ಹಾಗೂ ಜಿಲ್ಲಾಸ್ಪತ್ರೆಯಿಂದ 1,85380 ಡೋಸ್ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿ ಇದೆ. ಇದಕ್ಕಾಗಿ ಐದು ವರ್ಷ ವಯೋಮಿತಿ ಒಳಗಿನ 151951 ಮಕ್ಕಳನ್ನು ಗುರುತಿಸಲಾಗಿದೆ. ನಗರ-35218 ಹಾಗೂ ಗ್ರಾಮೀಣ 116733 ಮಕ್ಕಳಿಗೆ ಲಸಿಕೆ ಹಾಕಲಾಗುವುದು. 61 ಟ್ರಾೃನಿಟ್ ಹಾಗೂ 13 ಮೊಬೈಲ್ ಸಹಿತ 1080 ಬೂತ್‌ಗಳಿರುತ್ತವೆ. 19ರಂದು ಬೂತ್‌ಗಳಲ್ಲಿ ಹಾಗೂ 20ರಿಂದ 22ರ ವರೆಗೆ ಮನೆಗೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಾಗುತ್ತದೆ.

    19ರಂದು ಪೋಲಿಯೋ ಉದ್ಘಾಟನೆ: ಆರೋಗ್ಯ ಇಲಾಖೆ ಹಮ್ಮಿಕೊಂಡಿರುವ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಜ.19ರ ಬೆಳಗ್ಗೆ 9.30ಕ್ಕೆ ನಗರದ ಸ್ಟೇಡಿಯಂ ರಸ್ತೆ ನಗರ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಉದ್ಘಾಟಿಸಲಿದ್ದಾರೆ. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಲಿದ್ದು, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳಿರುತ್ತಾರೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts