More

    ದೃಢಚಿತ್ತ ಅಭ್ಯಾಸದಿಂದ ಉತ್ತಮ ಫಲಿತಾಂಶ

    ಚಿತ್ರದುರ್ಗ: ಪರೀಕ್ಷೆಗೆ ಇನ್ನು ಕೆಲ ದಿನಗಳು ಬಾಕಿ ಇದ್ದು, ದೃಢ ಚಿತ್ತದಿಂದ ಅಭ್ಯಾಸ ಮಾಡುವಂತೆ ಎಸಿ ವಿ.ಪ್ರಸನ್ನಕುಮಾರ್ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ತಾಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತೆ ಕುರಿತ 3 ದಿನಗಳ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಉತ್ತಮ ಸೌಲಭ್ಯಗಳೊಂದಿಗೆ ಪ್ರಶಾಂತ ವಾತಾವರಣದಲ್ಲಿರುವ ವಸತಿ ನಿಲಯಗಳು ಅಧ್ಯಯನಕ್ಕೆ ಪೂರಕವಾಗಿವೆ. ಪರೀಕ್ಷೆ ಸಮೀಪಿಸುತ್ತಿದ್ದು, ಕಲಿತದ್ದನ್ನು ಮನನ ಮಾಡಿಕೊಳ್ಳಿ, ನಿತ್ಯ 10-12 ಗಂಟೆ ಏಕಾಗ್ರತೆಯಿಂದ ಓದಿ, ಸಮಯ ಪರಿಪಾಲಿಸಿ. ಇದರಿಂದ ಉತ್ತಮ ಫಲಿತಾಂಶಕ್ಕೆ ಸಹಕಾರಿ ಆಗಲಿದೆ ಎಂದರು.

    ಇಂಗ್ಲೀಷ್ ವಿಷಯದ ಬಗ್ಗೆ ಅನಗತ್ಯ ಭಯ ಬೇಡ. ಕಂಠಪಾಠ ಸಂಸ್ಕೃತಿಯಿಂದ ಹೊರಬಂದು ಪ್ರಯೋಗಾತ್ಮಕ ಕಲಿಕೆ ರೂಢಿಸಿಕೊಳ್ಳಿ, ಕಠಿಣ ವಿಷಯಗಳನ್ನು ಮೊದಲು ಓದಿ, ನಿದ್ದೆ ಬರುವ ಸಮಯದಲ್ಲಿ ಲೆಕ್ಕ ಬಿಡಿಸಿ, ನಿಮ್ಮ ಪ್ರಯತ್ನ ಪ್ರಾಮಾಣಿಕವಾಗಿರಲಿ, ಅಸಾಧ್ಯವಾದದ್ದು ಯಾವುದು ಇಲ್ಲ ಎಂಬುದನ್ನು ಅಂಬೇಡ್ಕರ್ ಸಾಧನೆಯೇ ಸಾಕ್ಷಿಯಾಗಿದೆ ಎಂದು ತಿಳಿಸಿದರು.

    ತಾಪಂ ಅಧ್ಯಕ್ಷ ಡಿ.ಎಂ.ಲಿಂಗರಾಜು ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಜೀವನದ ಅತ್ಯಂತ ಪ್ರಮುಖ ಘಟ್ಟ. ಭವಿಷ್ಯದ ಭದ್ರ ಬುನಾದಿಯಾಗಿರುವ ಈ ಪರೀಕ್ಷೆಯನ್ನು ಆತ್ಮಸ್ಥೈರ್ಯದಿಂದ ವಿದ್ಯಾರ್ಥಿಗಳು ಎದುರಿಸಬೇಕು. ಶಿಕ್ಷಕರು, ಪಾಲಕರು, ಪೋಷಕರ ಆಶಯಗಳಿಗೆ ಧಕ್ಕೆಯಾಗದಂತೆ ವಿದ್ಯಾಭ್ಯಾಸ ಮಾಡಬೇಕು ಎಂದರು.

    ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅವಿನ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಓ.ಪರಮೇಶ್ವರಪ್ಪ ಮಾತನಾಡಿದರು.

    ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ 8 ವಸತಿ ನಿಲಯಗಳಿಂದ 144 ವಿದ್ಯಾರ್ಥಿಗಳಲ್ಲಿ 79 ಬಾಲಕರು, 65 ಬಾಲಕಿಯರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯಗಳಿಂದ 80 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.

    ಬಿಇಒ ಸಿದ್ದಪ್ಪ, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ರುದ್ರಮುನಿ, ಕ್ಷೇತ್ರ ಸಮನ್ವಯಾಧಿಕಾರಿ ಈಶ್ವರಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಸಿ.ಎಲ್.ಏಕನಾಥ್, ಮಹೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts