More

    ನೌಕರರ ಮುಷ್ಕರಕ್ಕೆ ಜನ ತತ್ತರ

    ಚಿತ್ರದುರ್ಗ: ಏಳನೇ ವೇತನ ಆಯೋಗದ ಶಿಫಾರಸು ಜಾರಿಗೆ ಹಾಗೂ ಒಪಿಎಸ್‌ಗೆ ಆಗ್ರಹಿಸಿ ಸರ್ಕಾರಿ ನೌಕರರ ಸಂಘ ಕರೆ ನೀಡಿದ್ದ ಮುಷ್ಕರದ ಹಿನ್ನೆಲೆಯಲ್ಲ ರಾಜ್ಯಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರಾದ ಪರಿಣಾಮ ಜಿಲ್ಲೆಯಲ್ಲಿ ಆರೋಗ್ಯ ಸೇರಿದಂತೆ ಮತ್ತಿತರ ಸೇವೆಗಳಲ್ಲಿ ತುಸು ವ್ಯತ್ಯಯ ಆಗಿತ್ತು. ಸರ್ಕಾರಿ ಕಚೇರಿ, ಶಾಲೆಗಳು ಬಿಕೋ ಎನ್ನುತ್ತಿದ್ದವು.

    ಜಿಲ್ಲೆಯ ಬಹುತೇಕ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ವಿಭಾಗ ಸಂಪೂರ್ಣ ಬಂದ್ ಆಗಿತ್ತು. ಇದರಿಂದ ಮಕ್ಕಳು, ಮಧ್ಯ ವಯಸ್ಕರು, ಹಿರಿಯರು ಕೆಲಕಾಲ ಸಮಸ್ಯೆ ಎದುರಿಸಿದರು.

    ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ, ತುರ್ತು ಚಿಕಿತ್ಸಾ ಘಟಕ, ಪ್ರಯೋಗಾಲಯ ಹೊರತುಪಡಿಸಿ ಇನ್ನುಳಿದ ವಿಭಾಗಗಳು ಮುಚ್ಚಿದ್ದವು. ತುರ್ತು ಸೇವೆಯ ವೈದ್ಯರು, ನರ್ಸ್‌ಗಳು ಮಾತ್ರ ಇದ್ದರು. ಇದರಿಂದಾಗಿ ಎರಡು- ಮೂರು ಗಂಟೆಗಳ ಕಾಲ ರೋಗಿಗಳಿಗೆ ಸಮಸ್ಯೆ ಆಯಿತು.

    ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಆಗದು ಎಂದು ಭಾವಿಸಿದ್ದ ನೂರಾರು ಹೊರರೋಗಿಗಳು ಚಿಕಿತ್ಸೆಗೆ ಒಂದಿದ್ದರು. ಒಪಿಡಿ ಬಂದ್ ಆಗಿರುವುದು ಗೊತ್ತಾಗುತ್ತಿದ್ದಂತೆ ತುರ್ತು ಚಿಕಿತ್ಸಾ ಘಟಕ, ಅಪಘಾತ ಘಟಕದಲ್ಲಿದ್ದ ವೈದ್ಯರು, ಶುಶ್ರೂಷಕರಿಂದ ಚಿಕಿತ್ಸೆ ಪಡೆಯಲು ಮುಂದಾದರು. ಇಲ್ಲಿ ಎಂದಿಗಿಂತ ಜನಸಂದಣಿ ಹೆಚ್ಚಾಗಿ ಕಂಡುಬಂದಿತು.

    ಜ್ವರ, ಕೆಮ್ಮಿನಿಂದ ಬಳಲುತ್ತಿದ್ದ ಮಕ್ಕಳನ್ನು ಕರೆತಂದಿದ್ದ ಪಾಲಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯ ಇಲ್ಲದ್ದನ್ನು ಕಂಡು ಕೆಲಕ್ಷಣ ಆತಂಕಕ್ಕೆ ಒಳಗಾದರು. ಕೆಲವರು ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳ ಮೊರೆ ಹೋದರು. ಮಕ್ಕಳ ವಿಭಾಗದಲ್ಲಿ ಆರೋಗ್ಯ ಸೇವೆ ಒದಗಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ ನೀಡಿದ್ದರಿಂದ ಬೆಳಗ್ಗೆ 11ರ ನಂತರ ಸೇವೆ ಒದಗಿಸಲಾಯಿತು.

    ವಾಂತಿ, ಭೇದಿ, ಸುಸ್ತು, ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕೆಲವರನ್ನು ಪರೀಕ್ಷಿಸಿ ಒಳ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಯಿತು. ಇನ್ನಷ್ಟು ಮಂದಿ ಡ್ರಿಪ್ ಹಾಕಿಸಿಕೊಂಡು ಮನೆಗೆ ತೆರಳಿದರು.

    ಜಿಲ್ಲೆಯ ಎಲ್ಲ ಸರ್ಕಾರಿ ಶಾಲಾ-ಕಾಲೇಜುಗಳು ಮುಚ್ಚಿದ್ದವು. ಕೊಠಡಿಗಳಿಗೆ ಬೀಗ ಹಾಕಿದ್ದರಿಂದ ವಿದ್ಯಾರ್ಥಿಗಳು ಹಿಂಗತಿರುತ್ತಿದ್ದರು. ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಯೂ ಮುಂದೂಡಲ್ಪಟ್ಟಿತ್ತು.

    ಆರ್‌ಟಿಒ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ನೌಕರರು ಬೆಳಗ್ಗೆ 10ಕ್ಕೆ ಆಗಮಿಸಿದ್ದರಾದರೂ ಬೀಗ ಹಾಕಿದ್ದರಿಂದ ಹಿಂದಿರುಗಿದರು. ಹೊಸ ವಾಹನಗಳ ನೋಂದಣಿ, ಹಳೆ ವಾಹನಗಳ ಎಫ್‌ಸಿ, ಚಾಲನಾ ಪರವಾನಗಿ, ಎಲ್‌ಎಲ್‌ಆರ್ ಸೇರಿ ಇತರೆ ಸೇವೆಗೆ ಬಂದವರು ನಿರಾಸೆಯಿಂದ ಹೊರಟರು.

    ಗಣಿ ಮತ್ತು ಭೂ ವಿಜ್ಞಾನ, ಉಪನೋಂದಣಾಧಿಕಾರಿ ಕಚೇರಿ, ಕಂದಾಯ ಸೇರಿ ಹಲವು ಇಲಾಖೆಗಳಲ್ಲಿನ ನೋಂದಣಿ ಪ್ರಕ್ರಿಯೆ ಸೇರಿ ಇತರೆ ಸಾರ್ವಜನಿಕ ಸೇವೆಗಳೂ ಲಭ್ಯವಾಗಲಿಲ್ಲ. ಜಿಲ್ಲಾಡಳಿ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹಲವು ಇಲಾಖೆಗಳ ನೌಕರರು ಮುಷ್ಕರಕ್ಕೆ ಬೆಂಬಲ ಸೂಚಿಸಿದ ಪರಿಣಾಮ ಕಚೇರಿಗಳು ಮುಚ್ಚಲ್ಪಟ್ಟಿದ್ದವು.

    ಜಿಲ್ಲೆಯಲ್ಲಿ ಆರೋಗ್ಯ ಸೇವೆ ಒದಗಿಸುವಲ್ಲಿ ಹೇಳಿಕೊಳ್ಳುವಂತ ಸಮಸ್ಯೆಗಳು ಕಂಡುಬರಲಿಲ್ಲ. ಅನಿವಾರ್ಯ ಎನಿಸಿದವರಿಗೆ ತುರ್ತು ಚಿಕಿತ್ಸಾ ಘಟಕ, ಒಳರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಯಿತು. ವೈದ್ಯರು, ಶುಶ್ರೂಷಕರ ಸಂಖ್ಯೆ ಎಂದಿಗಿಂತಲೂ ಕಡಿಮೆ ಇದ್ದಿದ್ದರಿಂದ ಒತ್ತಡ ಹೆಚ್ಚಾಗಿತ್ತು.
    ಡಾ.ಆರ್.ರಂಗನಾಥ್ ಡಿಎಚ್‌ಒ

    ಶಿಕ್ಷಕರು ಗೈರಾಗಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದರ ಪರಿಣಾಮ ಶಾಲೆಗಳು ಅನಿವಾರ್ಯ ವಾಗಿ ಮುಚ್ಚಿದ್ದವು. ಇದರಿಂದಾಗಿ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಮೂರನೇ ಪತ್ರಿಕೆಯ ಪರೀಕ್ಷೆ ನಡೆಯಲಿಲ್ಲ. ಅದನ್ನು ಇನ್ನೊಂದು ದಿನ ನಡೆಸಲು ತೀರ್ಮಾನಿಸಲಾಗಿದೆ.
    ಕೆ.ರವಿಶಂಕರ್‌ರೆಡ್ಡಿ ಡಿಡಿಪಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts