ಚಿತ್ರದುರ್ಗ: ಕೇಂದ್ರ, ರಾಜ್ಯ ಸರ್ಕಾರಗಳು ಮೇ 31ರ ಬಳಿಕ ಲಾಕ್‌ಡೌನ್‌ನ್ನು ಸಂಪೂರ್ಣವಾಗಿ ಸಡಿಲಗೊಳಿಸುವ ಸಾಧ್ಯತೆ ಇದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಜಿಪಂ ಸಭಾಂಗಣದಲ್ಲಿ ಬುಧವಾರ ಇಲಾಖೆ ಪ್ರಗತಿ ಪರಿಶೀಲಿಸಿ ಮಾತನಾಡಿ, ಕೋವಿಡ್-19 ವೈರಾಣು ಸದ್ಯಕ್ಕಂತೂ ನಿವಾರಣೆಯಾಗುವ ಲಕ್ಷಣಗಳಿಲ್ಲ ಎಂದರು.
ಲಾಕ್‌ಡೌನ್‌ನಿಂದ ಶೇ.90 ದುಡಿಯುವ ವರ್ಗಗಳು ಸಂಕಷ್ಟಕ್ಕೆ ಸಿಲುಕಿವೆ. ರೋಗ ಹತೋಟಿ ಜತೆಯಲ್ಲೇ ಅಭಿವೃದ್ಧಿ, ಕೃಷಿ ಹಾಗೂ ಆರ್ಥಿಕ ಚಟುವಟಿಕೆಗಳು ಮೊದಲಿನಂತೆ ನಿರಂತರ ನಡೆಯಲು ಜಿಲ್ಲಾಡಳಿತ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಎಲ್ಲ ಕ್ಲಿನಿಕ್, ನರ್ಸಿಂಗ್ ಹೋಂ ಗಳನ್ನು ಕಡ್ಡಾಯವಾಗಿ ತೆರೆಯಬೇಕು ಎಂದು ಸೂಚಿಸಿದರು.
ಇವುಗಳನ್ನು ತೆರೆಯದಿದ್ದರೆ ಸಂಬಂಧಿಸಿದವರಿಗೆ ನೋಟಿಸ್ ಕೊಡಬೇಕು. 65 ವರ್ಷ ವಯಸ್ಸು ಮೀರಿದ ವೈದ್ಯರಿಗೆ ಇದರಿಂದ ವಿನಾಯಿತಿ ಇದೆ ಎಂದರು.
ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳಿಗೆ ಪಿಂಚಣೆಯನ್ನು ಸಮರ್ಪಕವಾಗಿ ತಲುಪಿಸಬೇಕು. ಈ ಕುರಿತ ದೂರುಗಳಿಗೆ ಸಂಬಂಧಿಸಿದಂತೆ ವಾರದೊಳಗೆ ಸಮಗ್ರ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಪ್ರತಿ ಹಳ್ಳಿಗಳಿಗೂ ಸ್ಮಶಾನ ಇರಬೇಕು. ಈಗಾಗಲೇ ರಚನೆ ಆಗಿರುವ ಬಗರ್ ಹುಕುಂ ಸಮಿತಿ ಮುಂದೆ ಸಾಕಷ್ಟು ಅರ್ಜಿಗಳು ಬಾಕಿ ಇದ್ದು, ಸಮಿತಿ ಅನುಮೋದಿಸಿದ ಅರ್ಜಿದಾರರಿಗೆ ಶೀಘ್ರ ಹಕ್ಕುಪತ್ರ ವಿತರಿಸಲು ತಹಸೀಲ್ದಾರ್‌ಗಳಿಗೆ ತಿಳಿಸಿದರು.
ಸಂಸದ ಎ.ನಾರಾಯಣಸ್ವಾಮಿ, ಶಾಸಕರಾದ ಟಿ.ರಘುಮೂರ್ತಿ, ಕೆ.ಪೂರ್ಣಿಮಾ ಶ್ರೀನಿವಾಸ್, ಗೂಳಿಹಟ್ಟಿ ಡಿ.ಶೇಖರ್, ಎಂ.ಚಂದ್ರಪ್ಪ, ಜಿ.ಎಚ್.ತಿಪ್ಪಾರೆಡ್ಡಿ, ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಡಿಸಿ ಆರ್.ವಿನೋತ್ ಪ್ರಿಯಾ, ಜಿಪಂ ಸಿಇಒ ಎಸ್.ಹೊನ್ನಾಂಬ ಹಾಗೂ ಕಂದಾಯ, ಆರೋಗ್ಯ ಮತ್ತಿತರ ಇಲಾಖೆಗಳ ಹಿರಿಯ ಅಧಿಕಾರಿಗಳಿದ್ದರು.
ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳಿಗೆ ಮಾಸಿಕ ಪಿಂಚಣಿ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ. ಕೆಲವು ಫಲಾನುಭವಿಗಳಿಗೆ ಎಂಒ ಮೂಲಕ ತಲುಪಿಸಲಾಗುತ್ತಿದೆ. ಇದರಿಂದ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಪಿಂಚಣೆ ಕೈಸೇರುತ್ತಿಲ್ಲ.
ಎಂ.ಚಂದ್ರಪ್ಪ ಶಾಸಕ
ರಾಜ್ಯದಲ್ಲಿರುವ ಸಾಮಾಜಿಕ ಭದ್ರತಾ ಯೋಜನೆಗಳ ಎಲ್ಲ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪಿಂಚಣಿಯ ಮೊತ್ತವನ್ನು ನೇರವಾಗಿ ಜಮಾ ಮಾಡಿದರೆ ಹಣ ತಲುಪುತ್ತಿಲ್ಲವೆಂಬ ದೂರನ್ನು ಸರಿಪಡಿಸಬಹುದು.
ಎ.ನಾರಾಯಣಸ್ವಾಮಿ ಸಂಸದ