More

    ಅಶಕ್ತರ ಪಿಂಚಣಿ ಹಣ ಗುಳಂ

    ವಿಜಯವಾಣಿ ವಿಶೇಷ ಚಿತ್ರದುರ್ಗ: ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ ಫಲಾನುಭವಿಗಳಿಗೆ ವಿತರಿಸಬೇಕಿದ್ದ ಲಕ್ಷಾಂತರ ರೂ. ದುರ್ಬಳಕೆಯ ಶಂಕೆ ವ್ಯಕ್ತವಾಗಿದೆ.

    ಸಂಧ್ಯಾ ಸುರಕ್ಷಾ, ವೃದ್ಧಾಫ್ಯ, ವಿಧವಾ, ಅಂಗವಿಕಲ, ನಿರ್ಗತಿಕರ ಮಾಸಾಶನ ಇತ್ಯಾದಿ ಚಿತ್ರದುರ್ಗ ತಾಲೂಕಿನ ಫಲಾನುಭವಿಗಳ ಪೈಕಿ ಅನೇಕರಿಗೆ, ಕಳೆದ ಆರು ತಿಂಗಳಲ್ಲಿ ನಾನಾ ಕಾರಣಗಳಿಂದ ತಲುಪದ ಅಂದಾಜು 7 ಲಕ್ಷ ರೂ. ಅಧಿಕ ಮೊತ್ತ ದುರ್ಬಳಕೆ ಆಗಿದೆ.

    ಇಲಾಖೆಯ ಇಬ್ಬರು ಸಿಬ್ಬಂದಿ ಇದರಲ್ಲಿ ಶಾಮೀಲಾಗಿದ್ದಾರೆಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಅಂಚೆ ಇಲಾಖೆ ಮೂಲಗಳು ತಿಳಿಸಿವೆ.

    ಈ ಕುರಿತಂತೆ ಕಳೆದ ಒಂದು ವಾರದಿಂದ ಅಂಚೆ ಇಲಾಖೆ ಚಿತ್ರದುರ್ಗ ವಿಭಾಗದ ಅಂಚೆ ಅಧೀಕ್ಷರ ನೇತೃತ್ವದಲ್ಲಿ ಇಲಾಖಾ ತನಿಖೆ ನಡೆಯುತ್ತಿದೆ. ಇಬ್ಬರು ಹಿರಿಯ ಅಧಿಕಾರಿಗಳು ಪ್ರಕರಣವನ್ನು ಜಾಲಾಡುತ್ತಿದ್ದಾರೆ.

    ಖಜಾನೆ-2 ಮೂಲಕ ಅಂಚೆ ಕಚೇರಿಗೆ ಬಂದ ಮಾಸಾಶನವನ್ನು ಮನೆ ಆರ್ಡರ್ ಮೂಲಕ ತಲುಪಿಸುವ ವೇಳೆ ಫಲಾನುಭವಿ ಮನೆಯಲ್ಲಿ ಇಲ್ಲ, ಡೋರ್ ಲಾಕ್, ನಿಧನ ಇತ್ಯಾದಿ ಕಾರಣಗಳಿಂದಾಗಿ ವಿತರಸದೆ ಉಳಿಯುವ ಹಣವನ್ನು ಸಿಬ್ಬಂದಿ ವಾಪಾಸು ಮಾಡಿದರೆ ಅದನ್ನು ಇಲಾಖೆ ಖಜಾನೆಗೆ ಹಿಂತಿರುಗಿಸುತ್ತದೆ.

    ಆದರೆ, ಫಲಾನುಭವಿಗೆ ಹಣ ಕೊಡದಿದ್ದರೂ, ಕೊಟ್ಟಿದ್ದೇವೆ ಎಂದು ತೋರಿಸಿ ಇಲಾಖೆಯನ್ನು ವಂಚಿಸಲಾಗಿದೆ. ವೋಚರ್ ಮತ್ತು ಪೇಡ್ ಲಿಸ್ಟ್‌ಗೆ ತಾಳೆಯಾಗುತ್ತಿಲ್ಲ. ಏತನ್ಮಧೆ ಮಾಸಾಶನ ವಿತರಿಸಿದ ನೂರಾರು ಸಂಖ್ಯೆ ವೋಚರ್‌ಗಳೇ ನಾಪತ್ತೆಯಾಗಿವೆ ಎನ್ನಲಾಗಿದೆ. ಹಣ ವಿತರಣೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ಪ್ರಕರಣ ನಡೆದಿರುವುದು ಇಲಾಖೆ ಅಧಿಕಾರಿ-ಸಿಬ್ಬಂದಿಯನ್ನು ಕಂಗೆಡಿಸಿದೆ.

    ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ಅಂಚೆ ಇಲಾಖೆಯ ಸೆಂಟ್ರಲ್ ಸರ್ವರ್ (ಸಿಇಪಿಟಿ) ಹಾಗೂ ಖಜಾನೆ ಡೇಟಾವನ್ನೂ ಪರಿಶೀಲಿಸಲಾಗುತ್ತಿದೆ. ಸದ್ಯಕ್ಕೆ ಆರು ತಿಂಗಳಿಂದ ಮಾಸಾಶನ ಮೊತ್ತದ ದುರ್ಬಳಕೆ ಆಗಿದೆ ಎನ್ನಲಾಗಿದ್ದರೂ ಈ ವಂಚನೆ, ಅನೇಕ ವರ್ಷಗಳಿಂದ ನಡೆದಿದೆ ಎಂಬ ಮಾತು ಕೇಳಿ ಬಂದಿದೆ.

    ಚಿತ್ರದುರ್ಗ ವಿಭಾಗದ ಅಂಚೆ ಅಧೀಕ್ಷಕ ನವೀನ್‌ಚಂದ್ರ ಹೇಳಿಕೆ: ಮನಿ ಆರ್ಡರ್ ಮೂಲಕ ವಿತರಿಸುವ ಮಾಸಾಶನದ ಹಣ ದುರ್ಬಳಕೆ ಆಗಿರುವುದು ಕಂಡು ಬಂದಿದೆ. ಕಳೆದ ಆರು ತಿಂಗಳು ಹಲವು ಫಲಾನುಭವಿಗಳಿಗೆ ತಲುಪದ ಹಣವನ್ನು ಇಲಾಖೆಗೆ ಮರಳಿಸದೇ ವಂಚಿಸಲಾಗಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಸಮಗ್ರ ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಅಮಾನತು, ಸೇವೆಯಿಂದ ವಜಾದಂಥ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts