More

    ಆರೋಗ್ಯ ಸಮೀಕ್ಷೆ ವೇಳೆ ಹಲ್ಲೆೆ ನಡೆದರೆ ಕಠಿಣ ಕ್ರಮ

    ಚಿತ್ರದುರ್ಗ: ಆಶಾ, ಅಂಗನವಾಡಿ ಹಾಗೂ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ ಕಠಿಣ ಕ್ರಮ ಅನಿವಾರ್ಯ ಎಂದು ಎಸ್ಪಿ ಜಿ.ರಾಧಿಕಾ ಹೇಳಿದರು.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಕೆಲವೆಡೆ ಆರೋಗ್ಯ ಸಮೀಕ್ಷೆಗೆ ಹೋದವರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಯಾರಾದರೂ ಇಂಥ ದುಷ್ಕೃತ್ಯಗಳಿಗೆ ಮುಂದಾದರೆ ಪರಿಣಾಮ ನೆಟ್ಟಗಿರದು ಎಂದು ಎಚ್ಚರಿಸಿದರು.

    ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಆರೋಪದಡಿ 6 ಧಾರ್ಮಿಕ ಮಂದಿರಗಳ ಪ್ರಮುಖರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಡಿತರ ಆಹಾರ ಧಾನ್ಯ ವಿತರಣೆ, ಬ್ಯಾಂಕ್‌ಗಳಲ್ಲಿ ಹಾಗೂ ಉಚಿತ ಊಟ ವಿತರಣೆ ವೇಳೆ ಜನ ದಟ್ಟಣೆ ನಿರ್ವಹಿಸುವುದು ಪೊಲೀಸರಿಗೆ ಸವಾಲಾಗಿದೆ. ಯಾರೊಬ್ಬರೂ ಅನಗತ್ಯವಾಗಿ ಮನೆಯಿಂದ ಹೊರ ಬರಬಾರದು. ಜಾಲಿ ರೈಡ್ ಬೇಡ, ಅನವಶ್ಯಕ ತಿರುಗಾಡವವರ ವಿರುದ್ಧ ಎಫ್‌ಐಆರ್ ದಾಖಲಿಸಿ, ವಾಹನ ವಶಪಡಿಸಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಾಹನ ಬಿಡಿಸಿಕೊಳ್ಳುವುದು ಹಾಗೂ ಪ್ರಕರಣದಿಂದ ಹೊರಬರಲು ಕೋರ್ಟ್ ಕಚೇರಿ ಅಲೆದಾಡಬೇಕಾಗುತ್ತದೆ. ಕೆಲ ದಿನಗಳ ಕಾಲ ಗಂಜಿ ಕುಡಿದರೂ ಪರವಾಗಿಲ್ಲ. ಮನೆಯಲ್ಲಿರಿ ಎಂದು ಸಲಹೆ ನೀಡಿದರು.

    ಆಟೋ, ಟ್ಯಾಕ್ಸಿ ಮತ್ತಿತರ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ. ಅವಶ್ಯಕತೆ ಇದ್ದವರು ವಾಹನಗಳಿಗೆ ಆರ್‌ಟಿಒ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಎಂಥದ್ದೇ ಸಮಯದಲ್ಲಾದರೂ ನಾಗರಿಕರು ಪೊಲೀಸ್ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದೆಂದರು.

    33 ಚೆಕ್‌ಪೋಸ್ಟ್‌ಗಳು: ಹಿರಿಯೂರು ತಾಲೂಕು ಜೆಜೆಹಳ್ಳಿ, ಚಳ್ಳೆಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳ ಅಂತಾರಾಜ್ಯ ಸೇರಿ ಜಿಲ್ಲೆಯಲ್ಲಿ 33 ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಒಂದು ಸಾವಿರ ಪೊಲೀಸರು ಹಾಗೂ ಐನೂರು ಗೃಹರಕ್ಷಕ ದಳದ ಸಿಬ್ಬಂದಿ ಮೂರು ಪಾಳಿಗಳಲ್ಲಿ ಲಾಕ್‌ಡೌನ್ ಬಂದೋಬಸ್ತ್‌ದಲ್ಲಿ ನಿರತರಾಗಿದ್ದಾರೆ.

    ತಬ್ಲಿಘಿ ಜಮಾತ್ ಸಂಘಟನೆ: ನಿಜಾಮುದ್ದೀನ್‌ಗೆ ಸಂಬಂಧಿಸಿದಂತೆ ಚಿತ್ರದುರ್ಗದ ನಾಲ್ವರಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದವರ ಪೈಕಿ ಒಬ್ಬರು ಹೊಸದಿಲ್ಲಿಯಲ್ಲೇ ಇದ್ದಾರೆ. ಸಭೆಯಲ್ಲಿದ್ದ ಇಬ್ಬರು ಹಾಗೂ ಅಲ್ಲಿಯ ರೈಲ್ವೆ ಇಲಾಖೆ ನೌಕರರೊಬ್ಬರು ಈಗ ಚಿತ್ರದುರ್ಗದಲ್ಲಿದ್ದಾರೆ. ಸೂರತ್ ಹಾಗೂ ಕತಾರ್ ನಿಂದ ಹಿಂತಿರುಗಿರುವ ಚಳ್ಳಕೆರೆ ಹಾಗೂ ಹಿರಿಯೂರಿನ ತಬ್ಲಿಘಿ ಜಮಾತ್ ಸಂಘಟನೆಯವರು ಈಗ ಚಿತ್ರದುರ್ಗದಲ್ಲಿ ಹಾಗೂ ಅಹಮದಬಾದ್‌ನ ತಬ್ಲಿಘಿ ಜಮಾತ್ ಸಂಘಟನೆಗೆ ಸೇರಿದ 18 ಜನರು ಈಗ ಹೊಸದುರ್ಗದ ಹೋಂಕ್ವಾರಂಟೈನ್‌ನಲ್ಲಿದ್ದಾರೆ. ನಮ್ಮ ಜಿಲ್ಲೆ ತಬ್ಲಿಘಿ ಜಮಾತ್ ಸಂಘಟನೆಗೆ ಸೇರಿದ ಹಲವರು ರಾಜ್ಯದ ಕೆಲ ಜಿಲ್ಲೆ ಮತ್ತು ಹೊರ ರಾಜ್ಯಗಳಲ್ಲಿದ್ದಾರೆ. ಈ ಮಾಹಿತಿಯನ್ನು ಅಲ್ಲಿಯ ಜಿಲ್ಲಾಡಳಿತಗಳಿಗೆ ಕೊಡಲಾಗಿದೆ ಎಂದರು. ಎಎಸ್ಪಿ ಎಂ.ಬಿ.ನಂದಗಾವಿ ಇದ್ದರು.

    ವಾಟ್ಸ್ ಆ್ಯಪ್ ಮಾಡಿಳ ಲಾಕ್‌ಡೌನ್ ಉಲ್ಲಂಘನೆ ಪ್ರಕರಣ ಕಂಡರೆ ನಾಗರಿಕರು ಫೋಟೊ, ವಿಡಿಯೋ ವಾಟ್ಸ್ ಆ್ಯಪ್ ಮಾಡಬಹುದು. ಮಾಹಿತಿ ನೀಡಿದವರ ಗೌಪ್ಯತೆ ಕಾಪಾಡುವುದಾಗಿ ಎಸ್ಪಿ ಭರವಸೆ ನೀಡಿದರು.
    ವಾಟ್ಸ್ ಆ್ಯಪ್ ನಂ- 9480803100, 9480803179 ಹಾಗೂ 9480800945

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts