More

    ಶಸ್ತ್ರಚಿಕಿತ್ಸೆ ಹೆರಿಗೆ ಹೆಚ್ಚಳಕ್ಕೆ ತಡೆ ಹಾಕಿ

    ಚಿತ್ರದುರ್ಗ: ಗ್ರೂಪ್ ಡಿ ದರ್ಜೆ ನೌಕರರಿಂದ ವೈದ್ಯರವರೆಗೂ ಲಂಚ ಪಡೆದು ಸಿಕ್ಕಿಬಿದ್ದು ಜೈಲು ಸೇರಿದ್ದಾರೆ. ಇಂತಹ ಪರಿಸ್ಥಿತಿಗೆ ಹೋಗದಂತೆ ಆಸ್ಪತ್ರೆಗೆ ಸಿಬ್ಬಂದಿಗೆ ಸೂಚಿಸಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸರಿಗೆ ಚಿತ್ರದುರ್ಗ ಪ್ರಭಾರ ಲೋಕಾಯುಕ್ತ ಎಸ್‌ಪಿ ಪುರುಷೋತ್ತಮ್ ಸೂಚಿಸಿದರು.

    ಜಿಲ್ಲಾಸ್ಪತ್ರೆಗೆ ಅಧಿಕಾರಿಗಳ ತಂಡದೊಂದಿಗೆ ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಜಿಲ್ಲಾ ಶಸ್ತ್ರ ಚಿಕಿತ್ಸಕರ ಕೊಠಡಿಯಲ್ಲಿ ಮಾತನಾಡಿದರು.

    ಹೆರಿಗೆ ಯಾವ ರೀತಿ ಮಾಡಿಸಬೇಕು ಎಂಬುದು ಅಂತಿಮವಾಗಿ ವೈದ್ಯರ ನಿರ್ಧಾರ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಇಲ್ಲಿ ಹೆರಿಗೆಗಳು ಹೆಚ್ಚಿನ ಪ್ರಮಾಣದಲ್ಲಿ ಶಸ್ತ್ರಚಿಕಿತ್ಸೆ ಆಗುತ್ತಿವೆ. ಕೊನೆ ಕ್ಷಣದವರೆಗೂ ಸಾಮಾನ್ಯ ಹೆರಿಗೆಗೆ ಏಕೆ ಪ್ರಯತ್ನ ಪಡುತ್ತಿಲ್ಲ ಎಂದು ಪ್ರಶ್ನಿಸಿದರು.

    ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲು 5 ಸಾವಿರ ಕೇಳುತ್ತಿದ್ದಾರಂತಲ್ಲ? ಇದೊಂದೇ ಅಲ್ಲ. ಬೇರೆ ಬೇರೆ ಶಸ್ತ್ರಚಿಕಿತ್ಸೆಗಳಿಗೆ ಒಂದೊಂದು ರೀತಿಯ ಬೆಲೆ ನಿಗದಿ ಪಡಿಸಿದ್ದಾರೆ ಎಂಬ ದೂರು ಭೇಟಿ ವೇಳೆ ಕೆಲವೆಡೆ ಕೇಳಿ ಬಂದಿವೆ. ಈ ರೀತಿ ವ್ಯವಸ್ಥೆ ಇಲ್ಲಿಯೂ ಇದ್ದು, ಸಿಕ್ಕಿ ಬಿದ್ದಲ್ಲಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

    ಹಾವೇರಿಯಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಸಹಿ ಮಾಡಿ ಹೊರಗೆ ಹೋಗುವ ಸಿಬ್ಬಂದಿ ಇರುವುದು ಗಮನಕ್ಕೆ ಬಂದಿದೆ. ವೈದ್ಯರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ದಾವಣಗೆರೆಯಲ್ಲಿ ಕರ್ತವ್ಯ ಲೋಪದಡಿ ವೈದ್ಯರ ಮೇಲೆ ಕ್ರಮ ಜರುಗಿಸಲಾಗಿದೆ. ಇಲ್ಲಿ ಆ ರೀತಿ ಆಗಬಾರದು. ಪ್ರಾಮಾಣಿಕವಾಗಿ ಕೆಲಸ ಮಾಡುವ ಸಿಬ್ಬಂದಿ ಕೂಡ ಇದ್ದಾರೆ. ಎಲ್ಲರೂ ಇದಕ್ಕೆ ಬದ್ಧರಾದರೆ ಯಾವ ಸಮಸ್ಯೆಯೂ ಉಂಟಾಗದು ಎಂದರು.

    ರೋಗಿ ಚೀಟಿ ಪಡೆದ ನಂತರ ಯಾವ ವೈದ್ಯರನ್ನು ಕಾಣಬೇಕು, ತಪಾಸಣೆ ನಂತರ ಎಕ್ಸ್‌ರೇ ಇತರೆ ಪರೀಕ್ಷೆಗಳನ್ನು ಎಲ್ಲಿ ಮಾಡಿಸಿಕೊಳ್ಳಬೇಕು ಎಂಬ ಮಾಹಿತಿ ಪ್ರತಿ ರೋಗಿಗೂ ತಿಳಿಯಬೇಕು. ರೋಗಿಗಳು ಪರದಾಡುವಂತೆ ಮಾಡಬೇಡಿ ಎಂದು ತಾಕೀತು ಮಾಡಿದರು.

    ಸಾರ್ವಜನಿಕರ ಒತ್ತಾಯದ ಮೇರೆಗೆ ಖಾಲಿ ಹುದ್ದೆಗಳ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

    ಲೋಕಾಯುಕ್ತ ಡಿವೈಎಸ್‌ಪಿ ಮಂಜುನಾಥ್, ಇನ್ಸ್‌ಪೆಕ್ಟರ್ ಎಚ್.ಎಸ್.ರಾಷ್ಟ್ರಪತಿ ಇದ್ದರು.

    ರೋಗಿಗಳಿಗೆ ಸಮಸ್ಯೆ ಆಗದಂತೆ ಚಿಕಿತ್ಸೆ: ಎಂಆರ್‌ಐ ಸ್ಕ್ಯಾನಿಂಗ್‌ಗೆ ಬಳ್ಳಾರಿ, ದಾವಣಗೆರೆ ಜಿಲ್ಲೆಗಳಿಂದಲೂ ರೋಗಿಗಳು ಇಲ್ಲಿಗೆ ಬರುತ್ತಿದ್ದಾರೆ. ಪ್ರತಿಯೊಬ್ಬರಿಗೂ ಪ್ರತ್ಯೇಕವಾದ ದಿನಾಂಗ ನಿಗದಿಪಡಿಸಲಾಗುತ್ತಿದೆ. ರೇಡಿಯೋಲಾಜಿಸ್ಟ್ ಕೊರತೆ ಇದ್ದು, ಹುದ್ದೆ ಭರ್ತಿಯಾದರೆ ಹೆಚ್ಚಿನ ಸಮಸ್ಯೆ ಉಂಟಾಗದು. ಮುಂದಿನ ವಾರದಿಂದ ಸಿಟಿ ಸ್ಕ್ಯಾನಿಂಗ್ ಕಾರ್ಯಾರಂಭವಾಗಲಿದೆ. ರೋಗಿಗಳಿಗೆ ತೊಂದರೆಯಾಗದಂತೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಬಸವರಾಜಪ್ಪ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts