More

    ನೇರ ರೈಲು ಯೋಜನೆ ಭೂ ಸ್ವಾಧೀನ ಗಡುವು ವಿಸ್ತರಣೆ

    ಚಿತ್ರದುರ್ಗ: ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ದಾವಣಗೆರೆ-ತುಮಕೂರು ನೇರ ರೈಲ್ವೆ ಮಾರ್ಗ ಅನುಷ್ಠಾನ ಇನ್ನಷ್ಟು ವಿಳಂಬ ಸಾಧ್ಯತೆ ಹೆಚ್ಚಾಗಿದೆ.

    ವಿಳಂಬದ ಕಾರಣವನ್ನು ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಹೊರಿಸುತ್ತಿದ್ದಾರೆ. ಈ ನಡುವೆ ಹಿರಿಯೂರು ಮತ್ತು ಚಿತ್ರದುರ್ಗ ತಾಲೂಕುಗಳಲ್ಲಿ ಯೋಜನೆಗೆ ಅಗತ್ಯವಿರುವ ಭೂ ಸ್ವಾಧೀನದ ಅವಧಿಯನ್ನು ಸರ್ಕಾರ 6 ತಿಂಗಳ ಕಾಲ ವಿಸ್ತರಿಸಿದೆ.

    2019 ಡಿಸೆಂಬರ್ ಅಂತ್ಯಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಇತ್ತು. ಆದರೆ ಅಧಿಕಾರಿ, ಜನಪ್ರತಿನಿಧಿಗಳ ನಿರಾಸಕ್ತಿ ಫಲವಾಗಿ ಯೋಜನೆ ಕುಂಟುತ್ತಾ ಸಾಗಿದೆ. ಯೋಜನೆ ಮಂಜೂರಿಗೆ ಮುನ್ನ ರಾಜ್ಯಸರ್ಕಾರ ಭೂಮಿ ಹಾಗೂ ಒಟ್ಟು ವೆಚ್ಚದಲ್ಲಿ ಶೇ.50 ನ್ನು ಭರಿಸಬೇಕೆಂದು ಕೇಂದ್ರ ಷರತ್ತು ವಿಧಿಸಿತ್ತು. ರೈಲ್ವೆ ಇಲಾಖೆ ಈವರೆಗೆ ಭೂ ಸ್ವಾಧೀನಕ್ಕೆಂದು, ಕಂದಾಯ ಇಲಾಖೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಷರತ್ತಿನಂತೆ ರಾಜ್ಯಸರ್ಕಾರ, ರೈಲ್ವೆಗೆ ಹಣ ಕೊಡದೇ ರೈಲ್ವೆ ಇಲಾಖೆಯಾದರೂ ಹೇಗೆ ಕಂದಾಯ ಇಲಾಖೆಗೆ ಕೊಡುತ್ತದೆ ಎಂಬ ಪ್ರಶ್ನೆ ಕೇಳಿ ಬಂದಿದೆ.

    ಭೂ ಸ್ವಾಧೀನ ಪರಿಹಾರಕ್ಕಾಗಿ ರಾಜ್ಯಸರ್ಕಾರ, ಕನ್ನಡಿಯೊಳಗಿನ ಗಂಟೆಂದೇ ಪ್ರಸಿದ್ಧವಾಗಿರುವ ಗಣಿ ಹಣವನ್ನು ನೆಚ್ಚಿಕೊಂಡು ಕುಳಿತಿದೆ. ರೈಲ್ವೆ ಇಲಾಖೆ ಡಿ.ಮಾರ್ಕೆಷನ್ ಮತ್ತು ಸೆಂಟರ್ ಲೈನ್ ಬೌಂಡ್ರಿ ಸ್ಟೋನ್ ಅಳವಡಿಕೆ ನಿರ್ಲಕ್ಷಿಸಿದ್ದರಿಂದಲೂ ಸ್ವಾಧೀನ ವಿಳಂಬವಾಗಿದೆ.

    ಆರ್ ಆ್ಯಂಡ್ ಆರ್: ಚಿತ್ರದುರ್ಗ ಜಿಲ್ಲೆಯಲ್ಲಿ ಯೋಜನೆಗೆ 44 ಗ್ರಾಮಗಳಿಂದ 1028 ಎಕರೆ ಜಮೀನು ವಶಪಡಿಸಿಕೊಳ್ಳಬೇಕಿದೆ. ಭರಮಸಾಗರ, ಹಿರೇ ಗುಂಟನೂರು ಮತ್ತು ಕಸಬಾ ಹೋಬಳಿಗಳ ವ್ಯಾಪ್ತಿ 25 ಗ್ರಾಮಗಳಲ್ಲಿ 389 ಎಕರೆ ಜಮೀನು ಸರ್ವೆ ಪೂರ್ಣವಾಗಿ 11(1)ಹಾಗೂ 10 ಗ್ರಾಮಗಳಲ್ಲಿ ಜೆಎಂಸಿ ಆಗಿದ್ದು, 3 ಗ್ರಾಮಗಳಲ್ಲಿ ಪ್ರಗತಿಯಲ್ಲಿದೆ.

    12 ಗ್ರಾಮಗಳಲ್ಲಿ ರೈಲ್ವೆ ಇಲಾಖೆ ಬೌಂಡರಿ ಸ್ಟೋನ್ ಅಳವಡಿಸಿದ್ದು,ಜನವರಿ ಅಂತ್ಯದೊಳಗೆ ಹಾಗೂ ಹಿರಿಯೂರಿನ 19 ಗ್ರಾಮಗಳಲ್ಲಿ ಜೆಎಂಸಿ ಪೂರ್ಣವಾಗಿದ್ದು, ಈ ತಿಂಗಳ ಅಂತ್ಯದೊಳಗೆ ಮರು ವಸತಿ ಮತ್ತು ಮರುನಿರ್ಮಾಣ(ಆರ್ ಆ್ಯಂಡ್ ಆರ್)ಪ್ರಕ್ರಿಯೆ ಪೂರ್ಣ ಗೊಳಿಸಲಾಗುವುದೆಂದು ಎಸಿ ವಿ.ಪ್ರಸನ್ನಕುಮಾರ್ ತಿಳಿಸಿದ್ದಾರೆ.

    535 ಕೋಟಿ ರೂ.: ಸಾಮಾಜಿಕ ಪರಿಣಾಮ ಅಧ್ಯಯನ ವರದಿಯಂತೆ ಭೂಸ್ವಾಧೀನ ಪರಿಹಾರಕ್ಕಾಗಿ 535 ಕೋಟಿ ರೂ. ಕ್ಕೂ ಅಧಿಕ ಮೊತ್ತ ಬಿಡುಗಡೆಗೆ ಜಿಲ್ಲಾಧಿಕಾರಿ ರಾಜ್ಯಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಯೋಜನೆ ಪ್ರಗತಿ ಕುರಿತಂತೆ ಕರ್ನಾಟಕ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ‌್ಯದರ್ಶಿ, ತುಮಕೂರಲ್ಲಿ ಜ.18 ರಂದು ಪ್ರಗತಿ ಪರಿಶೀಲಿಸಿದ್ದಾರೆ. ದಾವಣಗೆರೆಯಲ್ಲಿ 14 ಗ್ರಾಮಗಳಿಂದ 236 ಎಕರೆ ಹಾಗೂ ತುಮಕೂರಿನ 38 ಗ್ರಾಮಗಳ 1005 ಎಕರೆ ಜಮೀನು ಈ ನೇರ ರೈಲು ಮಾರ್ಗಕ್ಕೆ ಅಗತ್ಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts