More

    ಕರೊನಾ ಚಿಕಿತ್ಸೆಗೆ ಹೊಸ ಆಸ್ಪತ್ರೆ ಮೀಸಲು

    ಚಿತ್ರದುರ್ಗ: ಜಿಲ್ಲಾಸ್ಪತ್ರೆ ಆವರಣದಲ್ಲಿ ಉದ್ಘಾಟನೆಗೊಳ್ಳದ ತಾಯಿ ಮತ್ತು ಮಕ್ಕಳ ಹೊಸ ಆಸ್ಪತ್ರೆಯನ್ನು ಕೋವಿಡ್-19 ಚಿಕಿತ್ಸೆಗೆ ಮೀಸಲಿಡಲಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಜತೆ ಗುರುವಾರ ವಿಡಿಯೋ ಸಂವಾದ ನಡೆಸಿದ ಬಳಿಕ ಅರೋಗ್ಯ, ಆಹಾರ, ಪೊಲೀಸ್ ಸೇರಿ ಪ್ರಮುಖ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

    ಜಿಲ್ಲೆಗೆ ಹೊರ ದೇಶದಿಂದ 117 ಜನ ಬಂದಿದ್ದು, ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಈಗಾಗಲೇ 75 ಜನ 14 ದಿನಗಳ ಹೋಂ ಕ್ವಾರಂಟೈನ್ ಮುಗಿಸಿ ಗುಣಮುಖರಾಗಿದ್ದಾರೆ. ಇನ್ನು ಉಳಿದವರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. 59 ಜನರ ಗಂಟಲು ದ್ರವ, ರಕ್ತ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಅದರಲ್ಲಿ 28 ಜನರ ವರದಿ ನೆಗೆಟಿವ್ ಬಂದಿದ್ದು, 24 ಜನರ ವರದಿ ಬರಬೇಕಿದೆ ಎಂದರು.

    ಜಿಲ್ಲೆಯಲ್ಲಿ ಕರೊನಾ 1 ಪಾಸಿಟಿವ್ ಬಂದಿದ್ದು, ಚಿಕಿತ್ಸೆಗೆ ದಾವಣಗೆರೆಗೆ ವರ್ಗಾಯಿಸಲಾಗಿದೆ. ಪಾಸಿಟಿವ್ ಬಂದಿರುವ ಮನೆಯ 5 ಕಿಮೀ ಸುತ್ತಳತೆಯಲ್ಲಿ ರೆಡ್ ಝೋನ್ ಮತ್ತು ಬಫರ್ ಝೋನ್ ಗುರುತು ಮಾಡಲಾಗಿದ್ದು, ಯಾರೂ ಹೊರ ಬರದಂತೆ ನಿಗಾವಹಿಸಲಾಗಿದೆ ಎಂದು ತಿಳಿಸಿದರು.

    ಕರೊನಾ ಚಿಕಿತ್ಸೆ ಮತ್ತು ಅಗತ್ಯ ಪರಿಕರ ಖರೀದಿಗೆ ಜಿಲ್ಲಾಡಳಿತದ ಬಳಿ 9 ಕೋಟಿ ರೂ. ಅನುದಾನ ಇದೆ. ತ್ರಿಬಲ್ ಎ ಮಾಸ್ಕ್, ಎನ್-95 ಮಾಸ್ಕ್, ಪಿಪಿ ಕಿಟ್, ವೆಂಟಿಲೇಟರ್ ಮತ್ತು ವೆಂಟಿಲೇಟರ್ ಆಪರೇಟರ್ ಅವಶ್ಯಕತೆ ಇದ್ದು, ಶೀಘ್ರದಲ್ಲೇ ಪೂರೈಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.

    ಕರೊನಾ ಚಿಕಿತ್ಸೆಗೆ ಖಾಸಗಿ ನರ್ಸಿಂಗ್ ಹೋಮ್, ಕ್ಲಿನಿಕ್‌ಗಳು, ಆಯುರ್ವೇದಿಕ್ ಆಸ್ಪತ್ರೆಗಳು ಸರ್ಕಾರದ ಕಾರ್ಯಕ್ಕೆ ಸ್ಪಂದಿಸಬೇಕು. ಇಲ್ಲದೇ ಇದ್ದರೆ ದಂಡಂ ದಶಗುಣಂ ರೀತಿ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಸಿಎಂ ಕೂಡ ಸೂಚನೆ ನೀಡಿದ್ದು, ಎಲ್ಲ ಖಾಸಗಿ ವೈದ್ಯಕೀಯ ಸಂಸ್ಥೆಗಳು ಸಾರ್ವಜನಿಕರ ಪರವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

    ಶಾಸಕರಾದ ಕೆ.ಪೂರ್ಣಿಮಾ, ಜಿ.ಎಚ್.ತಿಪ್ಪಾರೆಡ್ಡಿ, ಟಿ.ರಘುಮೂರ್ತಿ, ಎಂ.ಚಂದ್ರಪ್ಪ, ಎಸ್ಪಿ ಜಿ.ರಾಧಿಕಾ, ಸಿಇಒ ಹೊನ್ನಾಂಬ, ಡಿಎಚ್‌ಒ ಪಾಲಾಕ್ಷ ಇತರರಿದ್ದರು.

    ವೈದ್ಯಕೀಯ ಸಿಬ್ಬಂದಿಗೆ ಕಿರಿಕಿರಿ ಮಾಡಿದ್ರೆ ಕ್ರಮ: ಕರೊನಾಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ನರ್ಸ್ ಮತ್ತು ಸಿಬ್ಬಂದಿಗೆ ಕೆಲವರು ಮನೆ ಖಾಲಿ ಮಾಡುವಂತೆ ಮಾಲೀಕರು ಕಿರಿಕಿರಿ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ. ಇದು ಸರಿಯಲ್ಲ. ಯಾರೇ ಕಿರಿಕಿರಿ ನೀಡಿದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ರಾಮುಲು ಎಚ್ಚರಿಸಿದರು.

    ಮನೆ ಬಾಗಿಲಿಗೆ ಬರಲಿವೆ ತರಕಾರಿ: ಜಿಲ್ಲಾಡಳಿತವೇ ಪ್ರತಿಯೊಬ್ಬರ ಮನೆ ಬಾಗಿಲಿಗೆ ಅಗತ್ಯ ದಿನಸಿ ವಸ್ತು, ತರಕಾರಿ, ಹಣ್ಣು ಕಳುಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಈಗಾಗಲೇ ತಳ್ಳುವ ಗಾಡಿಗಳನ್ನು ಬಾಡಿಗೆ ತೆಗೆದುಕೊಂಡಿದ್ದು, ವ್ಯಾಪಾರಸ್ಥರ ಜತೆ ಮಾತುಕತೆ ನಡೆದಿದೆ ಎಂದು ಸಚಿವರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts