More

    ನರೇಗಾ ಅನುಷ್ಠಾನ, ಕರ್ನಾಟಕ ದ್ವಿತೀಯ ಸ್ಥಾನ

    ಚಿತ್ರದುರ್ಗ: ನರೇಗಾ ಅನುಷ್ಠಾನದಲ್ಲಿ ಕರ್ನಾಟಕ, ದೇಶದಲ್ಲೇ 2ನೇ ಸ್ಥಾನದಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

    ನಗರದ ಕಮ್ಮಾರಡ್ಡಿ ಸಮುದಾಯ ಭವನದಲ್ಲಿ ಶುಕ್ರವಾರ, ಆರ್ಟ್ ಆಫ್ ಲಿವಿಂಗ್ ಸಹಭಾಗಿತ್ವದಲ್ಲಿ ನರೇಗಾದಡಿ ಅನುಷ್ಠಾನ ಗೊಳಿಸಲು ಉದ್ದೇಶಿಸಿರುವ 470 ಕೋಟಿ ರೂ.ವೆಚ್ಚದ ಅಂತರ್ಜಲ ಚೇತನ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

    ಕೇಂದ್ರದಿಂದ ರಾಜ್ಯಕ್ಕೆ ಈ ವರ್ಷ 1425 ಕೋಟಿ ರೂ. ನರೇಗಾ ಅನುದಾನ ಬಂದಿದೆ. ಹಿಂಬಾಕಿ 1841 ಕೋಟಿ ರೂ. ಕೂಡ ಬಿಡುಗಡೆಯಾಗಿದೆ. ಕಾರ್ಮಿಕರಿಗೆ 15 ದಿನದೊಳಗೆ ಕೂಲಿ ಹಣ ಪಾವತಿ ಆಗುತ್ತಿದೆ. ಕೂಲಿ ಬಂದಿಲ್ಲವೆಂಬ ದೂರಿಲ್ಲ. ನಿತ್ಯ ರಾಜ್ಯದಲ್ಲಿ 10.76 ಲಕ್ಷ ಕಾರ್ಮಿಕರು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ನರೇಗಾ ಕೂಲಿ ಮಾಡುತ್ತಿದ್ದ ಮೈಸೂರಿನ ಎಂಕಾಂ ಪದವೀಧರೆಗೆ ಸೂಕ್ತ ಉದ್ಯೋಗ ಕಲ್ಪಿಸಲು ಸರ್ಕಾರ ಮುಂದಾಗಿದೆ. ರಾಜ್ಯವನ್ನು ಮೊದಲ ಸ್ಥಾನಕ್ಕೆ ತರುವ ಗುರಿ ಇದೆ ಎಂದರು.

    ಯೋಜನೆಯಡಿ ಕಾಮಗಾರಿಗಳು ಒಂದು ವರ್ಷ ನಿರಂತರವಾಗಿ ನಡೆಯಲಿವೆ. ರೈತರು ಸದುಪಯೋಗ ಪಡೆಯಬೇಕು. ಭೂಮಿ ಮೇಲೆ ಇನ್ನಿಲ್ಲದ ಅತಿಕ್ರಮಣವಾಗಿದ್ದು, ತಪ್ಪಿನ ಪ್ರಾಯಶ್ಚಿತಕ್ಕಾಗಿ ಯೋಜನೆಯನ್ನು ಯಶಸ್ವಿಗೊಳಿಸಬೇಕಿದೆ. ವಿಶೇಷವಾಗಿ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳ ಮೇಲೆ ಹೆಚ್ಚಿನ ಹೊಣೆ ಇದೆ ಎಂದರು.

    ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಜಾಗೃತಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು. ಅಂತರ್ಜಲ ಚೇತನ ಪ್ರಧಾನಿ ನರೇಂದ್ರ ಮೋದಿ ಕನಸು. ಸತತ ಬರಗಾಲಕ್ಕೀಡಾದ ನಮ್ಮ ಜಿಲ್ಲೆಗಂತೂ ಹೆಚ್ಚಿನ ಅನುಕೂಲವಾಗಲಿದ್ದು, ವ್ಯಾಪಕ ಪ್ರಮಾಣದಲ್ಲಿ ಅಂತರ್ಜಲ ಸುಧಾರಣೆ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಅನುದಾನ ಮರಳಿಸಿ: ಪಂ.ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಸರ್ಕಾರಕ್ಕೆ ಹಿಂದಕ್ಕೆ ಹೋಗಿರುವ 24.49 ಕೋಟಿ ರೂ.ಅನುದಾನ ಮರಳಿಕೊಡಿಸ ಬೇಕೆಂದು ಸಚಿವ ಈಶ್ವರಪ್ಪಗೆ ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಮನವಿ ಮಾಡಿದರು.

    ಸಂಸದ ಎ.ನಾರಾಯಣ ಸ್ವಾಮಿ ಮಾತನಾಡಿ, ಜಿಲ್ಲೆಯ ಹಲವು ಭಾಗದ ಗ್ರಾಮೀಣರು ಫ್ಲೋರೈಡ್‌ಯುಕ್ತ ನೀರನ್ನು ಕುಡಿಯುವಂತಾಗಿದ್ದು, ಯೋಜನೆಯಿಂದ ಅಂತರ್ಜಲ ಹೆಚ್ಚಾಗಿ, ಅಧಿಕ ಪ್ರಮಾಣದಲ್ಲಿ ಶುದ್ಧ ಕುಡಿವ ನೀರು ಲಭ್ಯವಾಗಲಿದೆ ಎಂದರು.

    ಆರ್ಟ್ ಆಫ್ ಲಿವಿಂಗ್ ಸಂಸ್ಥೆ ನಿರ್ದೇಶಕ ನಾಗರಾಜ್ ಮಾತನಾಡಿ, ಅಂತರ್ಜಲ ಕುಸಿತದ ಪ್ರಮಾಣ ಭಾರತದಲ್ಲೇ ಹೆಚ್ಚು. ಇದರಿಂದಾಗಿ ಕಾಡು ಕೂಡ ನಾಶವಾಗಿದೆ. ಇಂತಹ ಸಂದರ್ಭದಲ್ಲಿ ಅಂತರ್ಜಲ ಉಳಿಸುವುದು ಅನಿವಾರ‌್ಯ ಎಂದು ಹೇಳಿದರು.
    ಸಚಿವರಾದ ಭೈರತಿ ಬಸವರಾಜ್, ಎಚ್.ಟಿ.ಸೋಮಶೇಖರ್, ಶಾಸಕರಾದ ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ಕೆ.ಪೂರ್ಣಿಮಾ ಶ್ರೀನಿವಾಸ್, ಎಂಎಲ್‌ಸಿ ಜಯಮ್ಮ ಬಾಲರಾಜ್, ಜಿಪಂ ಸಿಇಒ ಟಿ.ಯೋಗೇಶ್, ತಾಪಂ ಅಧ್ಯಕ್ಷ ಡಿ.ಎಂ.ಲಿಂಗರಾಜು ಮತ್ತಿತರರು ಇದ್ದರು.

    ಪೇಟಾ ನಿರಾಕರಿಸಿದ ಈಶ್ವರಪ್ಪ: ಸ್ವಾಗತದ ವೇಳೆ ಅಧಿಕಾರಿಗಳು, ಹಾರ-ಶಾಲು ಹಾಗೂ ಮೈಸೂರು ಪೇಟಾದೊಂದಿಗೆ ತಮ್ಮನ್ನು ಗೌರವಿಸಲು ಮುಂದಾದಾಗ, ಈಶ್ವರಪ್ಪ ಪೇಟಾ ತೊಡಲು ನಿರಾಕರಿಸಿದರು. ಸಚಿವ ಸೋಮಶೇಖರ್, ಭೈರತಿ ಬಸವರಾಜ್‌ರನ್ನು ಅವಳಿ ಸಹೋದರರೆಂದು ಕರೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts