More

    ಕನ್ನಡದಲ್ಲಿ ವಿಜ್ಞಾನ ವ್ಯಾಸಂಗಕ್ಕೆ ಅವಕಾಶ

    ಚಿತ್ರದುರ್ಗ; ಮುಂದಿನ ವರ್ಷದಿಂದ ಚಿತ್ರದುರ್ಗ ಜಿಲ್ಲೆಯ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಪಿಯುಸಿ ವಿಜ್ಞಾನ ವಿಷಯ ಓದಬಹುದು!

    ವಿಜ್ಞಾನವನ್ನು ಕನ್ನಡದಲ್ಲಿ ಅಧ್ಯಯನ ಮಾಡಬಯಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಎರಡು ಕಾಲೇಜುಗಳನ್ನು ಗುರುತಿಸುವ ಪ್ರಕ್ರಿಯೆ ಶುರುವಾಗಿದೆ.

    ಈ ಸಂಬಂಧ ಈಗಾಗಲೇ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

    ಎಸ್ಸೆಸ್ಸೆಲ್ಸಿ ವರೆಗೆ ಕನ್ನಡದಲ್ಲಿ ಓದಿ ಬಳಿಕ ಪಿಯುಸಿ ವಿಜ್ಞಾನವನ್ನು ಆಂಗ್ಲ ಮಾಧ್ಯಮದಲ್ಲಿ ಓದಲು ಕಷ್ಟ ಎನ್ನುವ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ.

    ಕನ್ನಡದಲ್ಲಿ ಎಸ್ಸೆಸ್ಸೆಲ್ಸಿ ವರೆಗೆ ಓದಿದ ವಿದ್ಯಾರ್ಥಿಗಳಿಗೆ ಪಿಯುಸಿಯಲ್ಲಿ ವಿಜ್ಞಾನ ಓದುವ ಆಸೆಯಿದ್ದರೂ ಇಂಗ್ಲಿಷ್ ಭಾಷೆ ಕಷ್ಟ ಎಂಬ ಕಾರಣಕ್ಕೆ ಕಲೆ, ವಾಣಿಜ್ಯ ಮತ್ತಿತರ ಕೋರ್ಸ್‌ಗಳಿಗೆ ಸೇರುತ್ತಿದ್ದಾರೆ.

    ಈಗಾಗಲೆ ಪಿಯುಸಿ ವಿಜ್ಞಾನ ವಿಷಯದ ಕನ್ನಡ ಮಾಧ್ಯಮ ಪುಸ್ತಕಗಳು ಲಭ್ಯವಿವೆ. ಪರೀಕ್ಷೆಯಲ್ಲಿ ಕನ್ನಡ, ಇಂಗ್ಲೀಷ್‌ನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗುತ್ತಿದೆ.

    ಮೆಡಿಕಲ್ ಓದಬಯಸುವ ವಿದ್ಯಾರ್ಥಿಗಳು ಬರೆವ ನೀಟ್ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಗಳನ್ನು ಕೂಡ ಕನ್ನಡ ದಲ್ಲಿ ನೀಡಲಾಗುತ್ತಿದೆ. ಹೀಗಿರುವಾಗ ವಿಜ್ಞಾನವನ್ನು ಕನ್ನಡದಲ್ಲಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸುವುದು ಇದರ ಉದ್ದೇಶ ಎಂದು ತಿಳಿಸಿದರು.

    ಅಪರ ಜಿಲ್ಲಾಧಿಕಾರಿ ಸಂಗಪ್ಪ, ವಾರ್ತಾಧಿಕಾರಿ ಬಿ.ಧನಂಜಯ ಇತರರಿದ್ದರು.

    ಭದ್ರೆ ಹರಿದಿದ್ದಕ್ಕೆ ಸಂತಸ: ಜಿಲ್ಲೆಯಲ್ಲಿ ಕಳೆದ ವರ್ಷ ಉತ್ತಮ ಮಳೆ, ಬೆಳೆಯಾಗಿ ರೈತರು ಸಂತಸದಿಂದಿದ್ದಾರೆ. ಭದ್ರಾ ಮೇಲ್ದಂಡೆಯಡಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿದಿದ್ದು ಖುಷಿ ತಂದಿತು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇದರಟ್ಟಿಗೆ ಹಲವು ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಂಡಿವೆ. 2020ರಲ್ಲೂ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಹೆಚ್ಚಾಗಲಿ ಎಂದರು.

    ಹೊಸವರ್ಷ ಸರ್ವರಿಗೂ ಒಳಿತು ಮಾಡಲಿ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಸತ್ಯಭಾಮಾ ಹೊಸ ವರ್ಷ ಎಲ್ಲರಿಗೂ ಒಳಿತು ತರಲಿ ಎಂದರು. ನೂತನ ವರ್ಷಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಕೇಕ್ ಕತ್ತರಿಸಿ, ಸಿಹಿ ಹಂಚಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts