More

    ಕುಂಚಿಗ ಸಮುದಾಯದಲ್ಲಿದೆ ನಾಯಕತ್ವ ಕೊರತೆ

    ಚಿತ್ರದುರ್ಗ: ದಶಕಗಳಿಂದಲೂ ಸಮಾಜ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಆದರೆ ನಮ್ಮಲ್ಲಿ ಸಾಮರಸ್ಯ, ಹಣಕಾಸು ಸಾಮರ್ಥ್ಯ ಹಾಗೂ ನಾಯಕತ್ವದ ಕೊರತೆ ಇದೆ. ಈ ಎಲ್ಲದನ್ನೂ ನೀಗಿಸಿಕೊಳ್ಳುವ ದೃಢ ಸಂಕಲ್ಪ ನಮ್ಮದಾಗಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.

    ನಗರದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಶನಿವಾರ ಕುಂಚಿಗ ವೀರಶೈವ ಸಮಾಜ, ಉತ್ಥಾನ ಟ್ರಸ್ಟ್ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಅಂತರ್ಮುಖಿ ಆಗಿರುವ ನಮ್ಮ ಸಮಾಜದ ಸರ್ವಾಂಗೀಣ ಏಳಿಗೆಗೆ ಪರಸ್ಪರ ಸಹಾಯ, ಸಹಕಾರ ಮುಖ್ಯವಾಗಿದೆ ಎಂದರು.

    ಕಷ್ಟದಲ್ಲಿರುವ ಕನಿಷ್ಠ ಐವರು ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಭವಿಷ್ಯಕ್ಕೆ 20 ವರ್ಷ ಸೂಕ್ತ ನೆರವು ಒದಗಿಸುತ್ತೇವೆಂಬ ಸಾತ್ವಿಕ ನಿರ್ಣಯಕ್ಕೆ ನಾವು ಬಂದರೆ ಇತರ ಸಮಾಜಗಳಂತೆ ನಾವೂ ಗಟ್ಟಿಯಾಗಿ ನಿಲ್ಲಬಹುದು ಎಂದು ಹೇಳಿದರು.

    ಉದ್ಯಮಿಯಾಗಿರುವ ನನಗೆ ರಾಜಕೀಯ ಕ್ಷೇತ್ರ ಅನಿವಾರ್ಯ ಆಗಿರಲಿಲ್ಲ. ಎಲ್ಲರಂತೆ ನಮ್ಮ ಸಮಾಜ ಮುಖ್ಯವಾಹಿನಿಯಲ್ಲಿ ಸದೃಢವಾಗಿ ಗುರುತಿಸಿಕೊಳ್ಳಬೇಕಿದೆ. ಇದಕ್ಕಾಗಿ ನನ್ನ ಕೈಲಾದ ನೆರವು ನೀಡಬೇಕೆಂಬ ಸಂಕಲ್ಪದೊಂದಿಗೆ ರಾಜಕೀಯ ಪ್ರವೇಶಿಸಿರುವುದಾಗಿ ಹೇಳಿದರು.

    ನಿವೃತ್ತ ಕೃಷಿ ವಿಜ್ಞಾನಿ ಡಾ.ಕುಮಾರ ಸ್ವಾಮಿ ಮಾತನಾಡಿ, ತಂತ್ರಜ್ಞಾನವನ್ನು ಆಧರಿಸಿದ ಕೃಷಿಯಲ್ಲಿ ತೊಡಗಿಕೊಳ್ಳುವಂತೆ ರೈತರನ್ನು ಇನ್ನು ಹೆಚ್ಚಿನದಾಗಿ ಪ್ರೋತ್ಸಾಹಿಸುವ ಕುರಿತು ಚಿಂತನೆ ನಡೆಸಬೇಕಿದೆ ಎಂದರು.

    ಮಾಜಿ ಶಾಸಕ ಎಂ.ಬಿ.ತಿಪ್ಪೇರುದ್ರಪ್ಪ ಮಾತನಾಡಿ, ಸಂಘದ ಏಳಿಗೆಗೆ ದೇಣಿಗೆ ನೀಡಲು ಸಮಾಜದವರು ಉದಾರತೆ ತೋರಬೇಕು. ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವನ್ನು ಕ್ರೋಢಿಕರಿಸಬೇಕು. ಇದಕ್ಕೆ ನಾನೂ ದೇಣಿಗೆ ನೀಡುವುದಾಗಿ ಪ್ರಕಟಿಸಿದರು.

    ಸಮುದಾಯದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಐಎಫ್‌ಎಸ್ ಅಧಿಕಾರಿ ಎಸ್.ಪರಮೇಶ್ವರಪ್ಪ ಸಮಾಜದ ಕಟ್ಟಡಕ್ಕೆ 5 ಲಕ್ಷ ರೂ. ದೇಣಿಗೆ ನೀಡಿದರು. ಸಮಾಜದ ಜಿಲ್ಲಾಧ್ಯಕ್ಷ ಎಲ್.ಬಿ.ರಾಜಶೇಖರ್, ನಿರ್ದೇಶಕ ಕೃಷ್ಣಮೂರ್ತಿ, ಎಚ್.ಕುಬೇರಪ್ಪ ಇತರರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts