More

    ಬಂಡೆ ನಾಡಲ್ಲಿ ಬಿರುಸಿನ ಮಳೆ; ಚಿತ್ರದುರ್ಗ ಜಿಲ್ಲೆಯಲ್ಲಿ 24 ಮನೆ, 22 ಎಕರೆ ಬೆಳೆ ಹಾನಿ, ತುಂಬಿ ಹರಿದ ಹಳ್ಳ-ಕೊಳ್ಳಗಳು

    ಚಿತ್ರದುರ್ಗ: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ 24 ಮನೆಗಳು ಭಾಗಶಃ ಹಾನಿಗೊಳಗಾಗಿವೆ. 6.19 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾಗೂ 15.78 ಹೆಕ್ಟೇರ್ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ.

    ಹಿರಿಯೂರು ಭಾಗದಲ್ಲಿ ಭಾರಿ ಮಳೆ ಸುರಿದಿದೆ. ಈ ತಾಲೂಕಿನ ಇಕ್ಕನೂರು ಒಂದರಲ್ಲೇ ಭರ್ಜರಿ 135.2 ಮಿ.ಮೀ ಮಳೆಯಾಗಿದ್ದು, ಸೋಮವಾರ ರಾತ್ರಿ ಇಲ್ಲಿ ಜಿಲ್ಲೆಯಲ್ಲೇ ಅತ್ಯಧಿಕ ಮಳೆ ದಾಖಲಾಗಿದೆ.

    ಜಿಲ್ಲಾದ್ಯಂತ ಅನೇಕ ಮನೆಗಳು ಹಾನಿಗೆ ಒಳಗಾಗಿವೆ. ಚಿತ್ರದುರ್ಗ ತಾಲೂಕಲ್ಲಿ 3, ಚಳ್ಳಕೆರೆ 7, ಹಿರಿಯೂರು 2, ಹೊಸದುರ್ಗ 8 ಹಾಗೂ ಹೊಳಲ್ಕೆರೆ ತಾಲೂಕಲ್ಲಿ 4 ಮನೆಗಳಿಗೆ ಹಾನಿಯಾಗಿದೆ.

    ಹಿರಿಯೂರಲ್ಲಿ ಕೆರೆ ಕಟ್ಟೆಗಳಿಗೆ ಜೀವಕಳೆ
    ಹಿರಿಯೂರು ತಾಲೂಕಿನ ವಿವಿಧೆಡೆ ಉತ್ತಮ ಮಳೆಯಾಗಿದ್ದು, ಹಳೇ ಮನೆಗಳು ಬಹುತೇಕ ಕುಸಿದು ಬಿದ್ದಿವೆ. ಹಳ್ಳ-ಕೊಳ್ಳ, ಕೆರೆ ಕಟ್ಟೆಗಳಿಗೆ ಜೀವಕಳೆ ಬಂದಿದೆ. ಕಳೆದ 2 ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಕೋಡಿಹಳ್ಳಿ, ಖಂಡೇನಹಳ್ಳಿ, ಹಲಗಲದ್ದಿ, ಬೇತೂರು ಗ್ರಾಮದ ಕೆರೆಗಳು ಬಹುತೇಕ ತುಂಬಿದ್ದು, ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ.

    ವಿವಿ ಸಾಗರಕ್ಕೆ ದಾಖಲೆ ಒಳ ಹರಿವು: ವೇದಾವತಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗಿದ್ದು, ನದಿ ಮೈದುಂಬಿ ಹರಿಯುತ್ತಿದೆ. ವಾಣಿ ವಿಲಾಸ ಸಾಗರ ಜಲಾಶಯದ ಒಳ ಹರಿವು 2070 ಕ್ಯೂಸೆಕ್ ತಲುಪಿದೆ. ಕಾತ್ರಿಕೇನಹಳ್ಳಿ, ಹೂವಿನಹೊಳೆ, ಕೂಡಲಹಳ್ಳಿ ಬ್ಯಾರೇಜ್‌ಗಳಿಗೆ ಜಲಸಿರಿಯ ಜೀವ ಕಳೆ ಬಂದಿದೆ. ಜಲಾಶಯದಲ್ಲಿ ಪ್ರಸ್ತುತ 124.50 ಅಡಿ ನೀರಿನ ಸಂಗ್ರಹವಿದೆ (23.73 ಟಿಎಂಸಿ).

    ವೇಣುಕಲ್ಲುಗುಡ್ಡ-ಹೂವಿನಹಳ್ಳಿ ಗ್ರಾಮದ ಸಮೀಪ ಈಶ್ವರಗೆರೆ ಕೆರೆಗೆ ಚೆಕ್ ಡ್ಯಾಂ ನಿರ್ಮಿಸಿದ್ದು, ಸೋಮವಾರ ರಾತ್ರಿಯ ಭಾರೀ ಮಳೆಗೆ ಚೆಕ್ ಡ್ಯಾಂ ಉಕ್ಕಿ ಅಕ್ಕ-ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ಪರಿಣಾಮ ತೆಂಗು, ಅಡಕೆ, ಮೆಕ್ಕೆಜೋಳ, ದಾಳಿಂಬೆ, ಹತ್ತಿ ಬೆಳೆಗೆ ಹಾನಿಯಾಗಿದೆ.

    ಮೊಳಕಾಲ್ಮೂರಲ್ಲಿ ತುಂಬಿ ಹರಿದ ಹಳ್ಳ-ಕೊಳ್ಳ
    ಮೊಳಕಾಲ್ಮೂರು ಭಾಗದಲ್ಲೂ ಧಾರಾಕಾರ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ಮೊಳಕಾಲ್ಮೂರು, ರಾಯಾಪುರ, ರಾಂಪುರ, ದೇವಸಮುದ್ರ ಭಾಗದಲ್ಲಿ ಸೋಮವಾರ ಇಡೀ ರಾತ್ರಿ ಭರ್ಜರಿ ಮಳೆ ಸುರಿದ್ದು, ಕೆರೆಗಳಿಗೆ ಜೀವ ಕಳೆ ತಂದಿದೆ. ಕಳೆದ ಮೂರ‌್ನಾಲ್ಕು ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆ ಶೇಂಗಾ ಬಿತ್ತನೆಗೆ ಅಡ್ಡಿಪಡಿಸಿದೆ.
    ಮೊಳಕಾಲ್ಮೂರಿನ ಕೋನಸಾಗರ ರಸ್ತೆ ಬದಿ ಬೇವಿನಮರ ನೆಲಕ್ಕುರುಳಿ ಸಂಚಾರಕ್ಕೆ ಅಡ್ಡಿಯಾಗಿತ್ತು. ಮೇಗಳ ಕಣಿವೆ ಹತ್ತಿರ ಗುಡ್ಡದ ಬಂಡೆ ಮೇಲೆ ಜಲಪಾತದಂತೆ ನೀರು ಹರಿಯುತ್ತಿದ್ದು, ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಮೊಳಕಾಲ್ಮೂರು- 44.06 ಮಿಮೀ, ರಾಯಾಪುರ 44.04, ಬಿಜಿಕೆರೆ 30.08, ದೇವಸಮುದ್ರ 34.02, ರಾಂಪುರ 32.02 ಮಿಮೀ ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts