More

    ಪಂಚಾಯಿತಿಗಳಲ್ಲಿ ಆರೋಗ್ಯ ಕಾರ್ಡ್

    ಚಿತ್ರದುರ್ಗ: ಗ್ರಾಪಂ ರಾಜೀವ್‌ಗಾಂಧಿ ಸೇವಾ ಕೇಂದ್ರಗಳಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

    ತಾಪಂ ಸಭಾಂಗಣದಲ್ಲಿ ಸೋಮವಾರ ಜರುಗಿದ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ಬಿಪಿಎಲ್ ಕುಟುಂಬಕ್ಕೆ 5 ಲಕ್ಷ ರೂ. ಹಾಗೂ ಎಪಿಎಲ್ ಕುಟುಂಬದವರೆಗೆ ಶೇ.30 ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. ಒಂದು ಕಾರ್ಡ್‌ಗೆ 10 ರೂ. ಶುಲ್ಕ ವಿಧಿಸಲಾಗುತ್ತಿದೆ ಎಂದರು.

    ಪ್ರಾಥಮಿಕ, ಸಮುದಾಯ, ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಲ್ಲೂ ಕಾರ್ಡ್ ವಿತರಿಸಲಾಗುತ್ತಿದೆ. ಪೊಲಿಯೊ ಲಸಿಕೆ ಸಂದರ್ಭ ಹಲವು ಗ್ರಾಪಂ ಪಿಡಿಒಗಳು ಉಪಹಾರಕ್ಕೆ ವ್ಯವಸ್ಥೆ ಮಾಡಿಲ್ಲ, ಪೋಲಿಯೋ ಲಸಿಕೆ ನಂತರದಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣೆ ಕಾರ್ಯಕ್ರಮ ನಡೆಯಲಿದೆ ಎಂದರು.

    ಹೆಚ್ಚು ಕುಟುಂಬಗಳು ಕಾರ್ಡ್ ಪಡೆಯುವಂತಾಗಲು ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸ ಬೇಕೆಂದು ಅಧ್ಯಕ್ಷ ಡಿ.ಎಂ.ಲಿಂಗರಾಜು ಆರೋಗ್ಯಾಧಿಕಾರಿಗೆ ಸೂಚಿಸಿದರು.

    ಪ್ರಾಯೋಗಿಕ ಜಾರಿ: ಜಲಾಮೃತ ಯೋಜನೆ ಪ್ರಾಯೋಗಿಕ ಜಾರಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕಿ ಜಿ.ಯು.ಭಾರತಮ್ಮ ಹೇಳಿದರು.

    ಅಡವಿಗೊಲ್ಲರಹಳ್ಳಿ, ಯಳಗೋಡು, ಇಸಾಮುದ್ರ, ನೆಲ್ಲಿಕಟ್ಟೆ ಹಾಗೂ ಅಜಪ್ಪನಹಳ್ಳಿ ವ್ಯಾಪ್ತಿಗೆ ಹೊಂದಿಕೊಂಡಂತೆ ಇನ್ನು 12 ಗ್ರಾಮಗಳಲ್ಲಿ ಯೋಜನೆಯಡಿ ಬದು ನಿರ್ಮಾಣ, ಕೆರೆ, ಕೊಳವೆ ಬಾವಿ ಮರು ಪೂರಣ, ಗೋಕಟ್ಟೆ, ಮಲ್ಟಿ ಆರ್ಚ್ ಚೆಕ್ ಡ್ಯಾಂ ಇತ್ಯಾದಿ ಕಾಮಗಾರಿಗಳನ್ನು 3 ವರ್ಷದೊಳಗೆ ಅನುಷ್ಠಾನಗೊಳಿಸಲಾಗುವುದು. ತೋಟಗಾರಿಕೆ, ಪಶುಪಾಲನೆ, ೇಷ್ಮೆ ಹಾಗೂ ಗ್ರಾಪಂಗಳು ಜಲಾಮೃತ ಯೋಜನೆಗೆ ಕ್ರಿಯಾಯೋಜನೆ ರೂಪಿಸಬಹುದು ಎಂದರು.

    ಜಿಲ್ಲೆ ಆರು ತಾಲೂಕುಗಳಲ್ಲಿ ಮೀಟ್ ಆನ್ ವೀಲ್ಸ್ ಹೆಸರಿನಡಿ ಶುದ್ಧ ಮಾಂಸ ಖಾದ್ಯ ಮಾರಾಟದ ಮೊಬೈಲ್ ಕ್ಯಾಂಟಿನ್‌ಗಳಿಗೆ ತಲಾ 11 ಲಕ್ಷ ರೂ. ಅನುದಾನ ಕೊಡಲಾಗಿದೆ ಎಂದು ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಪ್ರಸನ್ನಕುಮಾರ್ ತಿಳಿಸಿದರು.

    ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ ಆಯ್ಕೆಯಾಗಿದೆ. ಕೃಷಿ ಇಲಾಖೆ ಸಹಯೋಗದೊಂದಿಗೆ ಬರಡು ರಾಸು ಚಿಕಿತ್ಸಾ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದರು.

    ಬೆಸ್ಕಾಂ ಎಇಇ ರಮೇಶ್ ಮಾತನಾಡಿ, ಹಲವು ಗ್ರಾಪಂಗಳು ಬೀದಿ ದೀಪ ಹಾಗೂ ಕುಡಿವ ನೀರಿಗೆ ಬಳಸಿರುವ ವಿದ್ಯುತ್ ಶುಲ್ಕ ಪಾವತಿ ಬಾಕಿ ಉಳಿಸಿವೆ ಎಂದು ದೂರಿದರು.

    ಬಾಕಿ ಪಾವತಿಸುವಂತೆ ಗ್ರಾಪಂ ಪಿಡಿಒಗಳಿಗೆ ಸೂಚಿಸುವುದಾಗಿ ತಾಪಂ ಇಒ ಎಚ್.ಕೃಷ್ಣಾನಾಯ್ಕ ಹೇಳಿದರು.

    ಉಪಾಧ್ಯಕ್ಷೆ ಪಿ.ಶಾಂತಮ್ಮ ರೇವಣಸಿದ್ದಪ್ಪ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ತಿಪ್ಪಮ್ಮ ಹಾಗೂ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts