More

    ದಲಿತರ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ

    ಚಿತ್ರದುರ್ಗ: ದಲಿತರ ಕಲ್ಯಾಣಕ್ಕಾಗಿ ಬಿಡುಗಡೆಯಾದ ಅನುದಾನವನ್ನು ಅನ್ಯ ಕಾರ್ಯಗಳಿಗೆ ವಿನಿಯೋಗಿಸ ಬಾರದೆಂಬ ನಿಯಮ ಉಲ್ಲಂಘಿಸುತ್ತಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕೆಂದು ಸಾಮಾಜಿಕ ಸಂಘರ್ಷ ಸಮಿತಿ ಅಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ಒತ್ತಾಯಿಸಿದರು.

    ಜಿಲ್ಲಾಡಳಿತದಿಂದ ನಗರದ ಬಂಜಾರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಎಸ್ಸಿ, ಎಸ್ಟಿ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಹಾಗೂ ಅಸ್ಪಶ್ಯತೆ ನಿವಾರಣೆ ಕುರಿತ ವಿಚಾರಗೋಷ್ಠಿ ಮತ್ತು ಕಾರ್ಯಾಗಾರದಲ್ಲಿ ಮಾತನಾಡಿದರು.

    ದಲಿತರ ಅಭಿವೃದ್ಧಿಗೆ ಮೀಸಿಲಿಟ್ಟ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸುವ ಪರಿಪಾಠ ನಿಯಂತ್ರಿಸಲು ಕಾನೂನು ಅಸ್ತ್ರವನ್ನು ಬಳಸಬೇಕಿದ್ದು, ಅನುದಾನ ಬಳಕೆ ಆಗುವ ತಾರತಮ್ಯ ಧೋರಣೆ ದಲಿತರು ಎಚ್ಚರ ವಹಿಸಬೇಕು ಎಂದರು.

    ದೌರ್ಜನ್ಯ ತಡೆ, ಜಾತಿ ನಿಂದನೆ ನಿಯಂತ್ರಣ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ. 2018ರಲ್ಲಿದ್ದ 2140 ಪ್ರಕರಣಗಳ ಪೈಕಿ 46ರಕ್ಕೆ ಸಂಬಂಧಿಸಿದಂತೆ, ಆರೋಪಿಗಳಿಗೆ ಅಪರಾಧ ಸಾಬೀತಾಗಿ ಶಿಕ್ಷೆಯಾಗಿದೆ. ಶಿಕ್ಷೆ ಪ್ರಕರಣಗಳ ಸಂಖ್ಯೆ ಕುಸಿತಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಹೊಣೆಯಾಗಿದ್ದಾರೆ ಎಂದು ದೂರಿದರು.

    ಉಪನ್ಯಾಸ ನೀಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕುಂಚಿಗನಾಳ್ ಎಸ್.ವಿಜಯಕುಮಾರ್, ಸಾಮಾಜಿಕ ನ್ಯಾಯಕ್ಕಾಗಿ 1989ರಲ್ಲಿ ಜಾರಿ ಗೊಳಿಸಿದ್ದ ದೌರ್ಜನ್ಯ ತಡೆ, ಜಾತಿ ನಿಂದನೆ ಕಾಯ್ದೆಯನ್ನು 2016 ಮತ್ತು 2018ರಲ್ಲಿ ತಿದ್ದುಪಡಿ ಮೂಲಕ ಬಲಪಡಿಸಲಾಗಿದೆ. ಆದರೂ ಸೂಕ್ತ ರೀತಿಯಲ್ಲಿ ವಿಚಾರಣೆ ನಡೆಯದೇ ಶಿಕ್ಷೆ ಪ್ರಮಾಣ ಕುಸಿತವಾಗುತ್ತಿದೆ ಎಂದು ಬೇಸರಿಸಿದರು.

    ಎಸಿ ವಿ.ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಪಂ ಸದಸ್ಯರಾದ ಬಿ.ಪಿ.ಪ್ರಕಾಶ್‌ಮೂರ್ತಿ, ಆರ್.ನರಸಿಂಹರಾಜ, ಡಿವೈಎಸ್‌ಪಿ ಪಾಂಡುರಂಗ, ನಗರಸಭೆ ಪೌರಾಯುಕ್ತ ಜಿ.ಟಿ.ಹನುಮಂತರಾಜು, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಬಿ.ರಾಜಪ್ಪ, ಕೆ.ಕೃಷ್ಣಪ್ಪ, ಸಿ.ಭಕ್ತಪ್ರಹ್ಲಾದ್, ಸಿದ್ದಮ್ಮ, ಫಾದರ್ ಎಂ.ಎ.ರಾಜು, ನರೇನಹಳ್ಳಿ ಅರುಣ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ನಾಗರಾಜ್, ಸಹಾಯಕ ನಿರ್ದೇಶಕ ಓ.ಪರಮೇಶ್ವರಪ್ಪ, ಎಸ್ಟಿ ಇಲಾಖೆ ಅಧಿಕಾರಿ ಮಂಜುಳಮ್ಮ ಮತ್ತಿತರರು ಇದ್ದರು. ಡಿ.ಓ.ಮುರಾರ್ಜಿ ಮತ್ತು ಸಂಗಡಿಗರು ಕ್ರಾಂತಿಗೀತೆ ಹಾಡಿದರು.

    ಪ್ರತಿಭಟನೆ, ಹಲವರು ಪೊಲೀಸ್ ವಶಕ್ಕೆ: ತೋರಿಕೆಗೆ ಕಾರ್ಯಕ್ರಮಗಳನ್ನು ಆಯೋಜಿಸದೆ ದೌರ್ಜನ್ಯ ತಡೆ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತಾಯಿಸಿ ದಲಿತ ಮುಖಂಡ ಟಿ.ಡಿ.ರಾಜಗಿರಿ ಮತ್ತಿತರರು ವೇದಿಕೆ ಬಳಿ ಪ್ರತಿಭಟಿಸಿದರು. ತಕ್ಷಣ ಗಣ್ಯರು ಪ್ರತಿಭಟನಾನಿರತರ ಮನವೊಲಿಸಲು ಯತ್ನಿಸಿ ವಿಫಲರಾದಾಗ ಬಡಾವಣೆ ಠಾಣೆ ಪೊಲೀಸರು, ಪ್ರತಿಭಟಕಾರರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ಮಧ್ಯಾಹ್ನದ ಬಳಿಕ ಬಿಡುಗಡೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts