More

    ನಂದಿದುರ್ಗ ಮೇಕೆ ರಾಜ್ಯಮಟ್ಟಕ್ಕೆ ಆಯ್ಕೆ

    ಚಿತ್ರದುರ್ಗ: ಕುರಿ ಮತ್ತು ಮೇಕೆ ಸಾಕಣೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿರುವ ಜಿಲ್ಲೆಯ ಮೇಕೆ ವಿಶಿಷ್ಟ ತಳಿಗೆ ನಂದಿ ದುರ್ಗವೆಂದು ಹೆಸರಿಸಲಾಗಿದೆ.

    2018-19ರಲ್ಲಾದ ಜಾನುವಾರು ಗಣತಿ ಬಳಿಕ ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಚಿತ್ರದುರ್ಗ ಹಾಗೂ ಬೀದರ್ ಜಿಲ್ಲೆಯಲ್ಲಿ ಗುರುತಿಸಿರುವ ಮೇಕೆ ತಳಿಗಳಿಗೆ ಕ್ರಮವಾಗಿ ನಂದಿದುರ್ಗ ಹಾಗೂ ಬಿದಿರಿ ಎಂದು ಹೆಸರಿಸಲಾಗಿದೆ.

    ಜಿಲ್ಲೆಯ ಕುರಿ ವಿಶಿಷ್ಟ ತಳಿಯನ್ನು ಬಹಳ ವರ್ಷಗಳ ಹಿಂದಿನಿಂದಲೇ ಬಳ್ಳಾರಿ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಜಿಲ್ಲೆಯಲ್ಲಿ 13,48,651 ಕುರಿ ಹಾಗೂ 3,83,409 ಮೇಕೆಗಳನ್ನು ಸಾಕಲಾಗುತ್ತಿದ್ದು, ಗಣತಿ ನಂತರ ಜಿಲ್ಲೆಯಲ್ಲಿ ಗುರುತಿಸಿರುವ ನಂದಿ ದುರ್ಗ ಮೇಕೆ ತಳಿಯನ್ನು ಬೀದರ್ ಪಶು ವೈದ್ಯಕೀಯ ವಿವಿಯಲ್ಲಿ ಫೆ.7ರಿಂದ ಮೂರು ದಿನಗಳ ಕಾಲ ನಡೆಯಲಿರುವ ರಾಜ್ಯಮಟ್ಟದ ಪಶುಮೇಳಕ್ಕೆ ಕಳಿಸಲಾಗುತ್ತಿದೆ.

    ಮೇಕೆ ವಿಶಿಷ್ಟ ತಳಿಗಳನ್ನು ಈ ಮೊದಲು ರಾಜ್ಯದಲ್ಲಿ ಗುರುತಿಸಿರಲಿಲ್ಲ. ಆದರೆ, ಕಳೆದ ಗಣತಿಯ ವೇಳೆ ರಾಜ್ಯದಲ್ಲೇ ಇದೇ ಪ್ರಥಮ ಬಾರಿಗೆ ಬೀದರ್ ಹಾಗೂ ಚಿತ್ರದುರ್ಗ ಮೇಕೆ ತಳಿಗಳ ವಿಶಿಷ್ಟತೆ ಪತ್ತೆ ಮಾಡಿ, ಅವುಗಳಿಗೆ ಹೆಸರಿಡಲಾಗಿದೆ. ಚಿತ್ರದುರ್ಗದ ಬಳ್ಳಾರಿ ತಳಿ ಸಹಿತ ರಾಜ್ಯದಲ್ಲಿ ಬನ್ನೂರು, ಹಾಸನ, ಡೆಕನಿ ಹೆಸರಿನ ಪ್ರಸಿದ್ಧ ಕುರಿ ತಳಿಗಳಿವೆ ಎನ್ನುತ್ತಾರೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಪ್ರಸನ್ನಕುಮಾರ್.

    ಕುರಿ ಸಾಕಣೆ: ಚಳ್ಳಕೆರೆ-4,31,026, ಚಿತ್ರದುರ್ಗ-94,024, ಹಿರಿಯೂರು-4,06,622, ಹೊಳಲ್ಕೆರೆ-98,447, ಹೊಸದುರ್ಗ-1,75,560 ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ 1,42,972 ಕುರಿಗಳನ್ನು ಸಾಕಲಾಗಿದೆ. ಮೇಕೆ ಸಾಕಣೆ: ಚಳ್ಳಕೆರೆ-99,184, ಚಿತ್ರದುರ್ಗ 37,059, ಹಿರಿಯೂರು-99,419, ಹೊಳಲ್ಕೆರೆ-24944, ಹೊಸದುರ್ಗ-53,356 ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ 68,817 ಮೇಕೆಗಳನ್ನು ಸಾಕಲಾಗುತ್ತಿದೆ.

    ಲಸಿಕೆ, ಉತ್ತಮ ಚಿಕಿತ್ಸೆ: ಜಿಲ್ಲೆಯಲ್ಲಿ ಕುರಿ ಹಾಗೂ ಮೇಕೆಗಳಿಗೆ ಉತ್ತಮ ಗೋಮಾಳಗಳಿವೆ. ಕುರಿ ಸಿಡುಬು, ನೀಲಿ ನಾಲಿಗೆ, ಪಿಪಿಆರ್, ರೋಗ ತಪ್ಪಿಸಲು, ಕರಳು ಬೇನೆ ಹಾಗೂ ಗಳಲೆ ರೋಗ ನಿಯಂತ್ರಿಸಲು ಕುರಿ ಮತ್ತು ಮೇಕೆಗಳಿಗೆ ಲಸಿಕೆಯೊಂದಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಟಿ.ಕೃಷ್ಣಪ್ಪ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts