More

    ವ್ಯಸನಗಳಿಂದ ದೂರ ಉಳಿದರೆ ಉತ್ತಮ ಭವಿಷ್ಯ

    ಚಿತ್ರದುರ್ಗ: ದುಶ್ಚಟಗಳಿಂದ ದೂರ ಉಳಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಡಯಟ್ ಪ್ರಾಂಶುಪಾಲ ಕೆ. ಕೋದಂಡರಾಮ್ ಯುವಜನರಿಗೆ ಸಲಹೆ ನೀಡಿದರು.

    ಶಿಕ್ಷಣ ಇಲಾಖೆ, ಮಂಗಳವಾರ ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶಿಕ್ಷಕರಿಗೆ ಆಯೋಜಿಸಿದ್ದ ಮಾದಕ ವಸ್ತುವಿನ ನಿಯಂತ್ರಣ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಸುಶಿಕ್ಷಿತ, ವ್ಯಸನಮುಕ್ತ, ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾದ ಯುವಜನರು ಉತ್ತಮ ಸಮಾಜ ನಿರ್ಮಿಸಬಹುದು. ವ್ಯಸನ ಮುಕ್ತರಾದರೆ ಕಳ್ಳತನ, ಕೊಲೆ, ದರೋಡೆ ಮೊದಲಾದ ಸಮಾಜಬಾಹಿರ ಕೃತ್ಯಗಳ ನಿಯಂತ್ರಣ ಸಾಧ್ಯ. ಹದಿಹರೆಯದವರು ಮಾದಕ ವ್ಯಸನಿಗಳಾಗುತ್ತಿದ್ದಾರೆ. ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ಶಿಕ್ಷಕರಿಗೆ ಸೂಚಿಸಿದರು.

    ಪ್ರಾದೇಶಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ಸಂಯೋಜಕಿ ಶೈಲಶ್ರೀ ಮಾತನಾಡಿ, 2014 ರಿಂದ ನಮ್ಮ ಕೇಂದ್ರ ಮಾದಕ ವಸ್ತುವಿನ ನಿಯಂತ್ರಣ ಕುರಿತು ಹಲವು ಕಾರ್ಯಕ್ರಮ ಏರ್ಪಡಿಸುತ್ತ ಬಂದಿದೆ. ಕೇಂದ್ರ ಸರ್ಕಾರ ಕರ್ನಾಟಕದಲ್ಲಿ 37 ಮಾದಕ ವ್ಯಸನ ಮುಕ್ತ ಕೇಂದ್ರ ಸ್ಥಾಪಿಸಿದ್ದು, ಮಾದಕ ವ್ಯಸನಿಗಳಿಗೆ ತರಬೇತಿ, ಚಿಕಿತ್ಸೆ, ಕೌನ್ಸಿಲಿಂಗ್ ಮಾಡಲಾಗುತ್ತದೆ. ಪ್ರಮುಖವಾಗಿ ಶಿಕ್ಷಣ, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಮಾದಕ ವಸ್ತು ನಿಯಂತ್ರಣ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.

    ಉಪನ್ಯಾಸಕ ಆರ್.ನಾಗರಾಜ್ ಮಾತನಾಡಿ, ಮಾದಕ ವ್ಯಸನಿಗಳು ದೇಶಕ್ಕೆ ಮಾರಕ, ಕುಟುಂಬಕ್ಕೆ ಹೊರೆ. ಪಠ್ಯಕ್ರಮದ ಜತೆಗೆ ಸ್ವಾಸ್ಥ್ಯ ಸಮಾಜ ನಿರ್ಮಿಸಲು ಶಿಕ್ಷಕರು ಸಹಕರಿಸಬೇಕು ಎಂದು ತಿಳಿಸಿದರು.

    ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಸತ್ಯನಾರಾಯಣ, ದೈಹಿಕ ಶಿಕ್ಷಣ ಪರಿವೀಕ್ಷಕ ಶೇಖರಪ್ಪ, ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾರಾಣಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts