More

    ಕೆಲಸ ಒತ್ತಡದಲ್ಲಿ ಸಿಲುಕಿದ ಖಾಕಿ ಪಡೆ ಗರಂ

    ಚಿತ್ರದುರ್ಗ: ಹೆಚ್ಚುತ್ತಿರುವ ಕೆಲಸದ ಒತ್ತಡದಿಂದ ಸಾರ್ವಜನಿಕರು ಹಾಗೂ ಕರ್ತವ್ಯ ನಿರತ ನೌಕರರ ಮೇಲೆ ಬಂದೋಬಸ್ತ್‌ನಿರತ ಪೊಲೀಸರು ಮಾತಿನ ಚಕಮಕಿಗೆ ಮುಂದಾಗುತ್ತಿದ್ದಾರೆ.

    ಲಾಕ್‌ಡೌನ್‌ನ ಈ ಸಂಕಷ್ಟದ ಸಮಯದಲ್ಲಿ ನಿತ್ಯ ಒಂದಲ್ಲ ಒಂದು ಮಾತಿನ ಚಕಮಕಿ ನಡೆಯುತ್ತಿದ್ದು, ಅನೇಕ ಪ್ರಕರಣ ಬೆಳಕಿಗೆ ಬರುತ್ತಿಲ್ಲವಂತೆ. ಬಂದೋಬಸ್ತ್ ನಿರತ ಪೊಲೀಸರು ಹಾಗೂ ಕರ್ತವ್ಯದ ನಿರತರ ಇಲಾಖೆ ನೌಕರರ ಪೈಕಿ ಕೆಲವರು ಹೆಚ್ಚುತ್ತಿರುವ ಕೆಲಸದೊತ್ತಡದಿಂದ ತಾಳ್ಮೆಗೆಡುತ್ತಿರುವ ಪ್ರಸಂಗಗಳಾಗುತ್ತಿವೆ.

    ಕರೊನಾ ಸೋಂಕು ನಿವಾರಣೆ ನಿಟ್ಟಿನಲ್ಲಿ 3000 ಹೆಚ್ಚು ಆರೋಗ್ಯ ಇಲಾಖೆ ವೈದ್ಯ-ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, 500ಕ್ಕೂ ಹೆಚ್ಚು ಪೊಲೀಸ್-ಗೃಹರಕ್ಷಕ ದಳದ ಸಿಬ್ಬಂದಿ, ನಗರಸಭೆ ಅಧಿಕಾರಿ, ನೌಕರರು ಹಾಗೂ 180ಕ್ಕೂ ಹೆಚ್ಚು ಪೌರ ಕಾರ್ಮಿಕರು, ಬ್ಯಾಂಕ್ ಹಾಗೂ ಇತರೆ ಅವಶ್ಯ ಸೇವೆ ಇಲಾಖೆಗಳ ಅಧಿಕಾರಿ-ಸಿಬ್ಬಂದಿ ಲಾಕ್‌ಡೌನ್ ಯಶಸ್ವಿಗೆ ಶ್ರಮಿಸುತ್ತಿದ್ದಾರೆ.

    ಕರ್ತವ್ಯನಿರತ ಇಲಾಖೆ ನೌಕರರೊಬ್ಬರಿಗೆ ಬುಧವಾರ ಪೊಲೀಸರು ಲಾಠಿ ಬೀಸಿದ್ದರೆ, ಗುರುವಾರ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಸೋಂಕು ನಿವಾರಣೆ ಮಾರ್ಗ ಉದ್ಘಾಟನೆ ವೇಳೆ ನಗರಸಭೆ ಆರೋಗ್ಯ ನಿರೀಕ್ಷಕ ಹಾಗೂ ಸಂಚಾರ ಪೊಲೀಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ.

    ಕಾರಿನಲ್ಲಿ ರಾಸಾಯನಿಕ ಇಟ್ಟುಕೊಂಡು ಮೈದಾನಕ್ಕೆ ಬರುವ ವೇಳೆ ಘಟನೆ ನಡೆದಿದ್ದು, ನಗರಸಭೆ ಕಮಿಷನರ್ ಜಿ.ಟಿ.ಹನುಮಂತರಾಜ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ.

    ಮೂರು ಶಿಫ್ಟ್: ಪೊಲೀಸರ ಬಂದೋಬಸ್ತ್ ಕರ್ತವ್ಯಕ್ಕೆಂದು ಮೂರು ಶಿಫ್ಟ್ ಮಾಡಲಾಗಿದೆ. ಮುಂಜಾನೆ 3ರಿಂದ ಮೊದಲ ಶಿಫ್ಟ್ ಆರಂಭವಾಗುತ್ತದೆ. ಅನೇಕ ವೇಳೆ ಮೂರು ಶಿಫ್ಟ್-ಎರಡು ಶಿಫ್ಟ್‌ಗಳಾಗಿಯೂ ಪರಿವರ್ತನೆ ಆಗುತ್ತಿದೆ. ಊಟೋಪಚಾರದ ಕುರಿತು ಅಸಮಾಧಾನದ ಮಾತು ಕೇಳಿ ಬಂದಿದ್ದರೂ, ಆಯಾ ಠಾಣಾ ವ್ಯಾಪ್ತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಪೊಲೀಸರು ಜನರ ಕಣ್ಣಲ್ಲಿ ವಿಲನ್: ದಿನಸಿ ಅಂಗಡಿ, ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್ ಇತ್ಯಾದಿ ಅವಶ್ಯಕ ವಸ್ತುಗಳ ಖರೀದಿಗೆ ದಿನದ 24 ಗಂಟೆ ಅವಕಾಶವಿದೆ ಎನ್ನುವ ಜಿಲ್ಲಾಡಳಿತ, ಮತ್ತೊಂದೆಡೆ ರಸ್ತೆಯಲ್ಲಿ ಯಾರನ್ನೂ ಓಡಾಡಲು ಬಿಡಬೇಡಿ ಎನ್ನುತ್ತದೆ. ಬ್ಯಾಂಕ್ ಮತ್ತಿತರ ಕಚೇರಿಗಳು ತೆರೆದಿವೆ. ಹೀಗಾದರೆ ನಾವು ಕೆಲಸ ಮಾಡುವುದು ಹೇಗೆ? ಒಂದು ನಿರ್ದಿಷ್ಟ ಅವಧಿಗೆ ಖರೀದಿಗೆ ಅವಕಾಶ ಕೊಟ್ಟರೆ ಲಾಕ್‌ಡೌನ್ ಯಶಸ್ವಿಯಾಗಲಿದೆ. ನಾವೂ ಜನರ ಕಣ್ಣಲ್ಲಿ ವಿಲನ್ ಆಗುವುದು ತಪ್ಪುತ್ತದೆ ಎಂಬ ಅಭಿಪ್ರಾಯ ಪೊಲೀಸ್ ವಲಯದಲ್ಲಿದೆ. ಪೊಲೀಸರ ಈ ಅಭಿಪ್ರಾಯ ಕುರಿತಂತೆ ಚರ್ಚೆಯಾಗಿದ್ದರೂ ರಾಜ್ಯ ಸರ್ಕಾರ ನಿರ್ದೇಶನದಂತೆ ನಿರ್ದಿಷ್ಟ ಸಮಯ ಸೂಚಿಸಲು ಅವಕಾಶವಿಲ್ಲವೆಂದು ಜಿಲ್ಲಾಡಳಿತ ತಿಳಿಸಿದೆ ಎನ್ನಲಾಗಿದೆ.

    ಯುವಕರ ಹುಚ್ಚಾಟಕ್ಕೆ ಕಡಿವಾಣ: ಲಾಕ್‌ಡೌನ್ ಇದ್ದರೂ ಅನಗತ್ಯವಾಗಿ ಮನೆಯಿಂದ ಹೊರ ಬರುವ ಹಲವು ಯುವಕರ, ನಾಗರಿಕರ ನಡೆ ಬೇಸರ ತರಿಸಿದೆ. ಅಂಥವರ ಹುಚ್ಚಾಟಕ್ಕೆ ಪೊಲೀಸರು ಕಡಿವಾಣ ಹಾಕುತ್ತಿದ್ದು, ಪ್ರಕರಣ ದಾಖಲಿಸಿ, ಹಲವರನ್ನು ಬಂಧಿಸಿದ್ದಾರೆ. ನೂರಾರು ವಾಹನಗಳನ್ನು ಜಫ್ತು ಮಾಡಿದ್ದಾರೆ.

    720 ಜನರ ಬಂಧನ: ಜಿಲ್ಲೆಯಲ್ಲಿ ಏ.9ರ ಸಂಜೆ 6ಕ್ಕೆ ಅಂತ್ಯಗೊಂಡಿರುವ ಈವರೆಗೆ ಲಾಕ್‌ಡೌನ್ ಉಲ್ಲಂಘಿಸಿದವರ ವಿರುದ್ಧ 294 ಪ್ರಕರಣ ದಾಖಲಿಸಿ, 720 ಜನರನ್ನು ಬಂಧಿಸಲಾಗಿದೆ. ಈ ಸಂಬಂಧ 549 ವಾಹನಗಳನ್ನು ಜಫ್ತು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts