More

    ಖಾಕಿ ಪಡೆಗೆ ಆರೋಗ್ಯ ಪರೀಕ್ಷೆ ಕಡ್ಡಾಯ

    ಚಿತ್ರದುರ್ಗ: ನಗರದಲ್ಲಿ ಕಳೆದ 10 ದಿನಗಳಿಂದ ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿ ಆರೋಗ್ಯ ಉಚಿತ ತಪಾಸಣೆ ನಡೆಯುತ್ತಿದೆ.

    ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿರುವ ಎಸ್ಪಿ ಜಿ.ರಾಧಿಕಾ, ಪೊಲೀಸ್ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ವಿಶೇಷ ಆದ್ಯತೆ ಕೊಟ್ಟಿದ್ದು, ಆರೋಗ್ಯ ಭಾಗ್ಯ ಯೋಜನೆಯಡಿ ಸೇರಿರುವ ನಗರದ ಮೆಡಿಕಲ್ ಕಾಲೇಜು ಹಾಗೂ 2 ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಕನಿಷ್ಠ ನೂರು ಜನರು ಸಾಮಾನ್ಯ ಪರೀಕ್ಷೆಗೆ ಒಳಪಡಬೇಕಿದೆ.

    ಕರ್ತವ್ಯಕ್ಕೆ ಅಡಚಣೆ ಆಗದಂತೆ ಜಿಲ್ಲೆಯ ಎಲ್ಲ 22 ಠಾಣೆಗಳ 1500 ಅಧಿಕಾರಿ, ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

    ಆರೋಗ್ಯ ಭಾಗ್ಯ ಸ್ಕೀಂ ಇದ್ದರೂ ಉದಾಸೀನ ಮನೋಭಾವದಿಂದ ತಪಾಸಣೆಗೆ ಒಳಪಡದೆ, ಅನಾರೋಗ್ಯ ಉಲ್ಬಣಿಸಿದಾಗ ಪರದಾಡುವುದು ಬೇಡ ಎಂಬ ಹಿನ್ನೆಲೆಯಲ್ಲಿ ಎಸ್ಪಿ ಕಠಿಣ ನಿರ್ಧಾರವನ್ನು ಕೈಗೊಂಡಿದ್ದು, ತಪಾಸಣೆ ಮಾಡಿಸುವ ಅಧಿಕಾರಿ, ಸಿಬ್ಬಂದಿ ಹಾಜರಾತಿಯನ್ನು ನಿತ್ಯ ಖುದ್ದು ಪರಿಶೀಲಿಸುತ್ತಿದ್ದಾರೆ.

    ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕಣ್ಣಿನ ಪರೀಕ್ಷೆ, ಕೊಬ್ಬು, ಹೃದಯ ತಪಾಸಣೆ ಸಹಿತ ನಾನಾ ಕಾಯಿಲೆ ಕುರಿತಂತೆ ತಪಾಸಣೆ ನಡೆಸಲಾಗುತ್ತಿದೆ.

    ಕಾಯಿಲೆಗಳ ಗಂಭೀರತೆ ಆಧರಿಸಿ ಚಿಕಿತ್ಸಾ ಸಲಹೆಗಳನ್ನು ತಜ್ಞ ವೈದ್ಯರು ಕೊಡುತ್ತಿದ್ದಾರೆ. ಪರಿಸ್ಥಿತಿ ಗಂಭೀರವೆಂದಾಗಿದ್ದರೆ ಬೆಂಗಳೂರು ಆಸ್ಪತ್ರೆಗಳಿಗೆ ತೆರಳುವಂತೆ ಸೂಚಿಸಲಾಗುತ್ತಿದೆ.

    ಡಾ.ಸಂದೀಪ್, ಡಾ.ನರಸಪ್ಪ, ಡಾ.ಸೌಮ್ಯಾ, ಡಾ.ರಾಜಶೇಖರ್ ಮೇತ್ರಿ, ಡಾ.ಶ್ರೀವಿಜಯ್ ಮತ್ತಿತರ ತಜ್ಞ ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ.

    ಎಸ್‌ಪಿ ರಾಧಿಕಾ ಹೇಳಿಕೆ: ಆರೋಗ್ಯ ಭಾಗ್ಯ ಯೋಜನೆಯಡಿ ತಪಾಸಣೆಗೆ ಅವಕಾಶವಿದೆ. ಆದರೆ, ಈ ಕುರಿತು ಪೊಲೀಸರು ನಿರ್ಲಕ್ಷೃ ವಹಿಸಿದ್ದರು. ಕಾಯಿಲೆ ಗಂಭೀರತೆಗೆ ತಿರುಗಿದಾಗ ಪರದಾಡಿದ್ದನ್ನು ಗಮನಿಸಿದ್ದೇನೆ. ಆದ್ದರಿಂದ ಪ್ರಾಥಮಿಕ ಹಂತದಲ್ಲೇ ಕಾಯಿಲೆಗಳ ಪತ್ತೆಗಾಗಿ, ಆರೋಗ್ಯ ತಪಾಸಣೆಯನ್ನು ಕಡ್ಡಾಯ ಮಾಡಿಸಬೇಕೆಂದು ಸೂಚಿಸಿದ್ದೇನೆ. ಇದ್ದರಿಂದಾಗಿ ಈವರೆಗೆ ಒಂದು ಸಾವಿರಕ್ಕೂ ಹೆಚ್ಚು ಸಿವಿಲ್, ಜಿಲ್ಲಾ ಸಶಸ್ತ್ರ ಪೊಲೀಸ್ ಅಧಿಕಾರಿ-ಸಿಬ್ಬಂದಿ ಪರೀಕ್ಷೆ ಮಾಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts